ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡುಮಲ್ಲೇಶ್ವರ: ಪ್ರಾಣಿಗಳ ಸಂಖ್ಯೆ ಹೆಚ್ಚಳ

ಆವರಣ ವಿಸ್ತರಣೆಯಿಂದ ಬದಲಾದ ಕಿರು ಮೃಗಾಲಯ
Last Updated 26 ಜನವರಿ 2020, 19:48 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ ಇಲ್ಲಿಗೆ ಹೊಸದಾಗಿ ಬಂದಿರುವ 2 ವರ್ಷದ 2 ಗಂಡು ಚಿರತೆ, ಕೆಲ ಪಕ್ಷಿಗಳು ಹೊಸ ಅತಿಥಿಗಳಾಗಿವೆ.

ಇಲ್ಲಿನ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿದ್ದ ಜಿಂಕೆಗಳು 9 ಮರಿ, ನೀಲಗಾಯ್ 3 ಮರಿಗಳಿಗೆ ಜನ್ಮ ನೀಡಿವೆ. ಜತೆಗೆ ನರಿ 3 ಮರಿಗಳಿಗೆ ಜನ್ಮ ನೀಡಿರುವುದು ಈ ಸಾಲಿನ ವಿಶೇಷತೆಯಾಗಿದ್ದು, ಚಿಕ್ಕ ಮರಿಗಳು ನೋಡುಗರಿಗೆ ಮುದ ನೀಡಲಿವೆ.

ಮೃಗಾಲಯದಲ್ಲಿ ಈ ಮುಂಚೆ ಎರಡು ಕರಡಿಗಳಿದ್ದವು. ಈಚೆಗೆ ಬುಕ್ಕಾಪಟ್ಟಣ ಸಮೀಪದಲ್ಲಿ ಸೆರೆ ಹಿಡಿಯಲಾದ ಕರಡಿ ಸೇರಿ ಈಗ ಸಂಖ್ಯೆ ಮೂರು ಆಗಿದೆ. ಪಂಜರಗಳಲ್ಲಿದ್ದ ಕರಡಿಗಳನ್ನು ಪ್ರಸಕ್ತ ಸಾಲಿನಲ್ಲಿ ನೂತನವಾಗಿ ನಿರ್ಮಿಸಿರುವ ವಿಶಾಲವಾದ ಕರಡಿ ಆವರಣಕ್ಕೆ ಸ್ಥಳಾಂತರಿಸಲಾಗಿದೆ.

ನಾಲ್ಕು ಇದ್ದ ಚಿರತೆಗಳ ಸಂಖ್ಯೆ ಆರಕ್ಕೆ ಏರಿಕೆಯಾಗಿದ್ದು, ನೂತನವಾಗಿ ನಿರ್ಮಿಸಲಾದ ಚಿರತೆ ಆವರಣಕ್ಕೆ ಮೃಗಾಲಯದಲ್ಲಿದ್ದ ಚಿರತೆಗಳನ್ನು ಸ್ಥಳಾಂತರಿಸಲಾಗಿದೆ.

ಪ್ರಾಣಿಗಳು ವಿಶಾಲವಾದ ಸ್ಥಳಕ್ಕೆ ಬಂದ ನಂತರ ಆರಾಮವಾಗಿ ಅಡ್ಡಾಡಲು ಅವಕಾಶ ಕಲ್ಪಿಸಿದಂತಾಗಿದೆ. ನೀಲಗಾಯ್‌ ಸ್ಥಳ ಕೂಡ
ವಿಸ್ತರಣೆಯಾಗುತ್ತಿದೆ.

ಮೂರು ವರ್ಷಗಳಿಂದ ಪ್ರಾಣಿ, ಪಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಿರು ಮೃಗಾಲಯ ಹೊಸ ಮೆರುಗು ಪಡೆಯುತ್ತಿದೆ. ಪ್ರಾಣಿಗಳ ಸ್ಥಳ ವಿಸ್ತರಣೆಯಷ್ಟೇ ಅಲ್ಲದೆ, ಪೋಲ್ಸ್‌ ಮಾದರಿಯಲ್ಲಿ ಬ್ಯಾರಿಕೇಡ್‌ ನಿರ್ಮಿಸುತ್ತಿರುವ ಕಾರಣ ನೋಡುಗರಿಗೂ ಅನುಕೂಲ.

ಅಭಿವೃದ್ಧಿ ಕಾರ್ಯ ಕೂಡ ಭರದಿಂದ ಸಾಗಿದ್ದು, ಸುಂದರವಾದ ಉದ್ಯಾನ ಅನೇಕರನ್ನು ಆಕರ್ಷಿಸಲು ಸಜ್ಜಾಗುತ್ತಿದೆ. ಐತಿಹಾಸಿಕ ಕೋಟೆ ಮಾದರಿಯಲ್ಲಿ ಪ್ರವೇಶ ದ್ವಾರ ನಿರ್ಮಾಣವಾಗಿದ್ದು, ಮೊದಲ ಬಾರಿ ಬರುವವರಿಗೆ ಹೆಚ್ಚು ಆನಂದ ನೀಡಲಿದೆ.

***

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಿಂದ 2021ಕ್ಕೆ ಹುಲಿಯನ್ನು ಇಲ್ಲಿಗೆ ಕರೆತರಲಾಗುವುದು. ಅದಕ್ಕೆ ಬೇಕಾದ ಸ್ಥಳ ಗುರುತಿಸಲಾಗಿದ್ದು, ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಇಡೀ ಆಡುಮಲ್ಲೇಶ್ವರದ ಚಿತ್ರಣ ಸಂಪೂರ್ಣ ಬದಲಾಗಲಿದೆ.

ಕೆ. ಚಂದ್ರಶೇಖರನಾಯಕ, ಉಪ ಅರಣ್ಯ ಸಂರಕ್ಷಣಾಧಿಕಾರಿ

***

ಪ್ರಾಣಿ–ಪಕ್ಷಿಗಳ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದಲ್ಲಿ ತ್ವರಿತವಾಗಿ ಚಿಕಿತ್ಸಾ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಆಸ್ಪತ್ರೆಯೊಂದನ್ನು ನಿರ್ಮಿಸಲಾಗುವುದು. ಈಗಾಗಲೇ ಗುತ್ತಿಗೆ ನೀಡಲಾಗಿದ್ದು, ಫೆಬ್ರುವರಿ 1ರಿಂದ ಕಾಮಗಾರಿ ಆರಂಭವಾಗಲಿದೆ.

ಬಿ.ಪಿ. ರವಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರ

***

2020ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಒಟ್ಟು ₹ 3 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಬಗೆಯ ಮಂಗಗಳೂ ಸೇರಿ ಪ್ರಾಣಿ–ಪಕ್ಷಿಗಳ ಸಂಖ್ಯೆ ಹೆಚ್ಚಳಕ್ಕೂ ಆದ್ಯತೆ ನೀಡಲಾಗುವುದು.
- ಆರ್. ವಸಂತಕುಮಾರ್, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT