ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿಗಾರಿಕೆಯ ಚಿಂತನೆ ಕೈಬಿಡಲು ಸಲಹೆ

ಕಪ್ಪತಗುಡ್ಡ ಉಳಿಸಲು ಅರಣ್ಯ ಇಲಾಖೆ ಪ್ರಯತ್ನ
Last Updated 2 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಅರಣ್ಯ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ಕಠಿಣ ನಿಲುವು ತೆಗೆದುಕೊಳ್ಳಲು ಅರಣ್ಯ ಇಲಾಖೆಯು ಮುಂದಾಗಿದೆ. ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವ ಚಿಂತನೆಯನ್ನು ಕೈಬಿಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಅದು ಸಲಹೆ ನೀಡಿದೆ.

ಸಂಡೂರಿನ ಸ್ವಾಮಿಮಲೈ ಅರಣ್ಯದ484.07 ಹೆಕ್ಟೇರ್‌ (1196.16 ಎಕರೆ)ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವಂತೆ ಕುದುರೆಮುಖ ಕಬ್ಬಿಣಮತ್ತು ಅದಿರು ಕಂಪನಿಯು (ಕೆಐಒಸಿಎಲ್‌) ಸಲ್ಲಿಸಿದ್ದ ಮನವಿಯ ಪರಿಶೀಲನೆ ನಡೆಸಿದ ಅರಣ್ಯ ಇಲಾಖೆಯು ಈ ತೀರ್ಮಾನ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಕೆಐಒಸಿಎಲ್‌ನ ಮನವಿಯ ಹಿನ್ನೆಲೆಯಲ್ಲಿ, ಉದ್ದೇಶಿತ ಅರಣ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದರಿಂದ ಆಗಬಹುದಾದ ಹಾನಿಯ ಬಗ್ಗೆ ಕೇಂದ್ರದ ಪರಿಸರ ಖಾತೆಯ ಗಣಿಗಾರಿಕೆ ಕುರಿತ ತಜ್ಞರ ಸಮಿತಿಯು ಇಲ್ಲಿ ಅಧ್ಯಯನ ನಡೆಸಿತ್ತು. ಪ್ರತಿ ಹೆಕ್ಟೇರ್‌ ಅರಣ್ಯದಲ್ಲಿ 48 ಪ್ಲಾಟ್‌ಗಳನ್ನು ಆಯ್ಕೆ ಮಾಡಿ, ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

‘ಈ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದರೆ ಒಟ್ಟಾರೆ 99,330 ಮರಗಳನ್ನು ಕಡಿಯಬೇಕಾಗುತ್ತದೆ. ಚಿರತೆ, ಕರಡಿ, ನಾಲ್ಕು ಕೊಂಬುಗಳ ಹುಲ್ಲೆ, ನರಿ, ಚಿಪ್ಪುಹಂದಿ, ನಕ್ಷತ್ರ ಆಮೆ ಮುಂತಾದ ಅನೇಕ ಅಪರೂಪದ ಪ್ರಾಣಿ ಸಂತತಿ ನಾಶವಾಗುತ್ತದೆ’ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿತ್ತು.

‘ಸಂಡೂರಿನಲ್ಲಿದ್ದ 32,000 ಹೆಕ್ಟೇರ್‌ ಅರಣ್ಯದಲ್ಲಿ 10,000 ಹೆಕ್ಟೇರ್‌ ಅರಣ್ಯ ಈಗಾಗಲೇ ನಾಶವಾಗಿದೆ. ಇಲ್ಲಿ ಇನ್ನೂ 50ರಿಂದ 70 ವರ್ಷಗಳಿಗಾಗುವಷ್ಟು ಸಂಪತ್ತು ಇದೆ. ಆದರೆ ಗಣಿಗಾರಿಕೆಯ ಗುರಿ ಸಾಧನೆಗಾಗಿ ಶ್ರೀಮಂತವಾದ ವನ್ಯಸಂಪತ್ತನ್ನು ಎಗ್ಗಿಲ್ಲದೆ ನಾಶಮಾಡುವ ವ್ಯವಸ್ಥೆಗೆ ಕೊನೆಹಾಡಲು ಇಲಾಖೆ ಬಯಸಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಷ್ಟೇ ಅಲ್ಲ, ‘ಗಣಿಗಾರಿಕೆಯಿಂದಾಗಿ ಈಗಾಗಲೇ ಆಗಿರುವ ಹಾನಿಯನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

ಕಪ್ಪತಗುಡ್ಡ ಅರಣ್ಯ ಈಗ ಅಪಾಯದ ಅಂಚಿನಲ್ಲಿದೆ. ಸರ್ಕಾರದ ಕಠಿಣ ನಿಲುವು ಮಾತ್ರ ಈ ಶ್ರೀಮಂತ ಅರಣ್ಯವನ್ನು ರಕ್ಷಿಸಬಲ್ಲದು. ಹೆಚ್ಚಿನ ಸುರಕ್ಷತಾ ವ್ಯವಸ್ಥೆ ಇಲ್ಲದ ಅರಣ್ಯಗಳನ್ನು ರಕ್ಷಿಸುವುದು ಈಗ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ನಮ್ಮಲ್ಲಿ ರಕ್ಷಿತ ಅರಣ್ಯಗಳೂ ಸುರಕ್ಷಿತವಾಗಿಲ್ಲಎಂಬುದಕ್ಕೆ ಕಪ್ಪತಗುಡ್ಡ ಹಾಗೂ ಪಶ್ಚಿಮ ಘಟ್ಟಗಳು ಜೀವಂತಉದಾಹರಣೆಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT