ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಹದ ಹಕ್ಕಿಗಳ ಕಸರತ್ತು

Last Updated 18 ಫೆಬ್ರುವರಿ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ವಿದೇಶಗಳಿಂದ ಬಂದ ವಿಮಾನ ಉತ್ಪಾದಕ ಸಂಸ್ಥೆಗಳಿಗೆ ಇದೊಂದು ಮಾರುಕಟ್ಟೆಯಾದರೆ, ಜನಸಾಮಾನ್ಯರಿಗೆ ‘ರೆಕ್ಕೆ ಬಡಿಯದ ಈ ಹಕ್ಕಿ’ಗಳ ಕಸರತ್ತನ್ನು ಹತ್ತಿರದಿಂದ ನೋಡಲು ವೇದಿಕೆ.

ವಿಮಾನಪ್ರಿಯರಿಗೆ ಓಡುವಾಗ, ನೆಗೆಯುವಾಗ, ಹಾರುವಾಗ ಅವು ಹೇಗೆಲ್ಲ ವರ್ತಿಸುತ್ತವೆ ಎಂಬುದನ್ನು ಕಣ್ತುಂಬಿಕೊಳ್ಳುವ ತವಕ. ಮಿಲಿಟರಿ ಮಂದಿಗೆ ತಮ್ಮ ಬತ್ತಳಿಕೆಯಲ್ಲಿ ಯಾವ ಹೊಸ ಅಸ್ತ್ರ ಬಂದು ಕೂಡಲಿದೆ ಎನ್ನುವ ಕೌತುಕ. ಯಲಹಂಕ ವಾಯುನೆಲೆಯಲ್ಲಿ ‘ಏರೊ ಇಂಡಿಯಾ–2019’ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ. ಭಾರತದ ಈ ದ್ವೈವಾರ್ಷಿಕ ವೈಮಾನಿಕ ಪ್ರದರ್ಶನವು ಪ್ರಪಂಚದ ವೈಮಾನಿಕ ಮಾರುಕಟ್ಟೆಯ ಕಣ್ಣು ಬೆಂಗಳೂರಿನ ಕಡೆಗೆ ತಿರುಗುವಂತೆ ಮಾಡಿದೆ.

ಮಿಲಿಟರಿ ಮಂದಿಯಿಂದ ಜನಸಾಮಾನ್ಯರವರೆಗೆ ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ತುದಿಗಾಲ ಮೇಲೆ ನಿಲ್ಲಿಸಿರುವ ಈ ಮೇಳಕ್ಕೆ ವಾಯುನೆಲೆಯಲ್ಲಿ ರಂಗವಂತೂ ಸಜ್ಜಾಗಿದೆ. ಅಮೆರಿಕದಿಂದ ಹಾರಿಬಂದಿರುವ ಗ್ಲೋಬ್‌ ಮಾಸ್ಟರ್‌ನಂತಹ ದೈತ್ಯ ವಿಮಾನದಿಂದ ಹಿಡಿದು, ಎಚ್‌ಎಎಲ್‌ನಿಂದ ಅವತರಿಸಿದ ಪುಟ್ಟ ಹೆಲಿಕಾಪ್ಟರ್‌ವರೆಗೆ ಲೋಹದ ಹಕ್ಕಿಗಳು ಸಾಲುಸಾಲಾಗಿ ಬೀಡುಬಿಟ್ಟಿವೆ. ಯುದ್ಧ ಪೀಪಾಸು ‘ರಣಹದ್ದು’ಗಳಿಂದ ಏರೋಬ್ಯಾಟಿಕ್ಸ್‌ ಲಲನೆಯರವರೆಗೆ ಇಲ್ಲಿ ಬೀಡುಬಿಟ್ಟಿರುವ ಪ್ರತಿ ವಿಮಾನದ ಕಸರತ್ತಿನ ಹಿಂದೆಯೂ ಒಂದೊಂದು ರೋಚಕ ಕಥೆ ಇದೆ.

ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಇಸ್ರೇಲ್‌, ಜರ್ಮನಿ ಸೇರಿದಂತೆ ವೈಮಾನಿಕ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ದೇಶಗಳು ಈಗಾಗಲೇ ಅಂಗಡಿ ತೆರೆದುಕೊಂಡು ಕುಳಿತಿವೆ. ತಾವು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನವನ್ನು ಇಲ್ಲಿ ಬಿಕರಿಗೆ ಇಟ್ಟಿವೆ. ಎಂಜಿನ್‌ಗಳು, ಟರ್ಬೈನ್ ರೋಟರ್‌ಗಳು, ಬ್ಲೇಡ್‌ಗಳು, ಸ್ವಿಚ್ಚುಗಳು, ಆಕ್ಸಿಜನ್ ಸಿಲಿಂಡರ್‌ಗಳು, ಕ್ಷಿಪಣಿಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಲಭ್ಯವಿವೆ.

ಅಮೆರಿಕದ 28 ಕಂಪನಿಗಳು ಭಾಗಿ

ಯಲಹಂಕದ ವಾಯುನೆಲೆಯಲ್ಲಿ ಇದೇ 20ರಿಂದ ನಡೆಯಲಿರುವ ‘ಏರೊ ಇಂಡಿಯಾ’ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕದ 28 ಕಂಪನಿಗಳ ಮಳಿಗೆಗಳು ಇರಲಿವೆ.

ಅಮೆರಿಕ ರಾಯಭಾರಿ ಕೆನೆತ್‌ ಐ.ಜಸ್ಟರ್‌ ನೇತೃತ್ವದ ನಿಯೋಗವು ಯಲಹಂಕ ವಾಯುನೆಲೆಗೆ ಬಂದಿಳಿದಿದೆ. ‘ಏರೊ ಇಂಡಿಯಾದ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವ ನಮ್ಮ ತಂಡವನ್ನು ಬೆಂಬಲಿಸಲು ಇಲ್ಲಿಗೆ ಬಂದಿರುವುದು ಖುಷಿ ತಂದಿದೆ. ಭಾರತವು ರಕ್ಷಣಾವಲಯದ ಮಹತ್ವದ ಪಾಲುದಾರ ದೇಶವಾಗಿದ್ದು, ಉಭಯ ದೇಶಗಳು ರಕ್ಷಣಾ ವಲಯದಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಿಕೊಳ್ಳಲು ಬದ್ಧವಾಗಿವೆ. ಎರಡೂ ದೇಶಗಳ ಸಂಬಂಧ ಗಟ್ಟಿಗೊಳ್ಳಲು ರಕ್ಷಣಾ ವಲಯದ ಕೊಳ್ಳುವಿಕೆಯು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇದು ಎರಡೂ ದೇಶಗಳ ನಡುವಣ ಸಮತೂಕದ ವಾಣಿಜ್ಯ ಸಂಬಂಧಕ್ಕೆ ಕೊಡುಗೆ ನೀಡುತ್ತದೆ’ ಎಂದು ಕೆನೆತ್‌ ಹೇಳಿದರು.

ವೈಮಾನಿಕ ಪ್ರದರ್ಶನದ ವೇಳೆ 19 ಕಂಪನಿಗಳು ಯುಎಸ್‌ಎ ಪಾರ್ಟನ್‌ಶಿಪ್‌ ಪೆವಿಲಿಯನ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಏರೊ ಇಂಡಿಯಾದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ ನಾಲ್ಕು ಪೆವಿಲಿಯನ್‌ ಎಕ್ಸಿಬಿಟರ್‌ಗಳಿದ್ದಾರೆ. ಅಮೆರಿಕದ ವಾಣಿಜ್ಯ ವ್ಯವಹಾರಗಳ ಇಲಾಖೆ ಮತ್ತು ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಅಧಿಕಾರಿಗಳ ಜತೆ 100ಕ್ಕೂ ಹೆಚ್ಚು ಮಂದಿ ರಕ್ಷಣಾ ಇಲಾಖೆಯ ಸಿಬ್ಬಂದಿ ಬಂದಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಗುವಾಮ್‌ನ ಆಂಡರ್ಸನ್‌ ವಾಯುನೆಲೆಯ 23ನೇ ಎಕ್ಸಪೆಡಿಷನರಿ ಬಾಂಬ್‌ ಸ್ಕ್ವಾಡ್ರನ್ ನ ಬಿ 52 ಸ್ಟ್ರಾಟೊಫೋರ್ಟೆಸ್‌ ಬಾಂಬರ್‌ಗಳು ಹಾರಾಟ ನಡೆಸಲಿವೆ.

‘ಭಾರತದೊಂದಿಗಿನ ಅಮೆರಿಕದ ಸೇನಾ ಸೇವೆಗಳು, ಉಭಯ ಸೇನೆಗಳ ಸಂಬಂಧ ಬಲಗೊಳ್ಳಲು, ರಕ್ಷಣಾ ವಲಯದಲ್ಲಿನ ಸಹಕಾರ ವೃದ್ಧಿಸಲು ಈಪ್ರದರ್ಶನ ಅವಕಾಶ ಒದಗಿಸಿದೆ. ಎರಡೂ ಸೇನೆಗಳು ವಾಯು ಹಾಗೂ ಸಮುದ್ರ ಮಾರ್ಗದಲ್ಲಿ ಮುಕ್ತ ಹಾರಾಟ, ತೀವ್ರವಾದವನ್ನು ಹತ್ತಿಕ್ಕುವಲ್ಲಿ ಜತೆಯಾಗಿ ಕೆಲಸ ಮಾಡುತ್ತವೆ’ ಎಂದು ಕೆನೆತ್‌ ತಿಳಿಸಿದರು.

ಇದನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT