ಏರ್‌ ಷೋ ಸ್ಥಳಾಂತರಕ್ಕೆ ತಜ್ಞರಿಂದಲೂ ವಿರೋಧ

7
ಇದೇನು ರಾಜಕೀಯ ಸಮಾರಂಭ ಅಲ್ಲ; ರಾಜಕೀಯಪ್ರೇರಿತ ನಿರ್ಧಾರ ಸಲ್ಲ: ನಿವೃತ್ತ ಏರ್‌ ಮಾರ್ಷಲ್‌ ಅಭಿಮತ

ಏರ್‌ ಷೋ ಸ್ಥಳಾಂತರಕ್ಕೆ ತಜ್ಞರಿಂದಲೂ ವಿರೋಧ

Published:
Updated:
Deccan Herald

ಬೆಂಗಳೂರು: ‘ಏರೊ ಇಂಡಿಯಾ’ ಪ್ರದರ್ಶನವನ್ನು ಬೆಂಗಳೂರಿನಿಂದ ಬೇರೆಡೆ ಸ್ಥಳಾಂತರ ಮಾಡುವುದು ಸೂಕ್ತವಲ್ಲ ಎಂದು ರಕ್ಷಣಾ ಹಾಗೂ ವೈಮಾನಿಕ ಕ್ಷೇತ್ರದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

‘ಇದೇನು ರಾಜಕೀಯ ಸಮಾರಂಭ ಅಲ್ಲ. ಹೀಗಾಗಿ ಈ ವಿಷಯದಲ್ಲಿ ರಾಜಕೀಯಪ್ರೇರಿತ ನಿರ್ಧಾರವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಏರ್‌ ಮಾರ್ಷಲ್‌ (ನಿವೃತ್ತ) ಬಿ.ಕೆ. ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರದರ್ಶನಕ್ಕೆ ಅಗತ್ಯವಾದ ವೈಮಾನಿಕ ನೆಲೆ, ಮೂಲಸೌಲಭ್ಯ ಹಾಗೂ ವಾತಾವರಣ ಬೆಂಗಳೂರಿನಲ್ಲಿದೆ. ಇಲ್ಲಿ ತರಬೇತಿಯನ್ನು ಮಾತ್ರ ನೀಡುವುದರಿಂದ ವಾಯುಪಡೆಯ ಬೇರೆ ನೆಲೆಗಳಿಗೆ ಹೋಲಿಸಿದರೆ ಇಲ್ಲಿನ ಕಾರ್ಯಾಚರಣೆ ತೀವ್ರತೆ ಕಡಿಮೆ ಇರುತ್ತದೆ. ಹೀಗಾಗಿ ಈ ನಗರವೇ
ಪ್ರದರ್ಶನಕ್ಕೆ ತಕ್ಕುದಾದ ತಾಣವಾಗಿದೆ’ ಎಂದು ಅಭಿಪ್ರಾಯಪಟ್ಟರು.

ಉತ್ತರ ಪ್ರದೇಶದಲ್ಲಿ ಲಖನೌ (ಬಕ್ಷಿ ಕಾ ತಲಾಬ್‌), ಆಗ್ರಾ ವಾಯುನೆಲೆಗಳಿವೆ. ಎರಡನ್ನೂ ವಾಯುಪಡೆಯ ದೈನಂದಿನ ಕಾರ್ಯಾಚರಣೆಗೆ ಬಳಕೆ ಮಾಡುವುದರಿಂದ ಅವುಗಳು ಸದಾ ಬ್ಯುಸಿ ಆಗಿರುತ್ತವೆ. ‘ದೈನಂದಿನ ಕಾರ್ಯಾಚರಣೆಗೆ ಬಳಕೆಯಾಗುವ ಈ ನೆಲೆಗಳಲ್ಲಿ ಪ್ರದರ್ಶನ ನಡೆಸುವುದು ಸರಿಯಲ್ಲ. ಅಲ್ಲದೆ, ಅಂತರರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಬೇಕಾದ ಸೌಲಭ್ಯಗಳು ಈ ನಗರಗಳಲ್ಲಿ ಇಲ್ಲ’ ಎಂದು ಪಾಂಡೆ ಪ್ರತಿಪಾದಿಸಿದರು.

‘ಅಂತರರಾಷ್ಟ್ರೀಯ ವೈಮಾನಿಕ ಪ್ರದರ್ಶನ ನಡೆಸಲು ಅತ್ಯುತ್ತಮ ಸ್ಥಳ ಬೇಕಾಗುತ್ತದೆ. ಅದು ಬೆಂಗಳೂರಿನಲ್ಲಿ ಮಾತ್ರ ಇದೆ’ ಎಂದು ಅಭಿಪ್ರಾಯಪಟ್ಟರು ಇಂಟರ್‌ನ್ಯಾಷನಲ್‌ ‘ಫೌಂಡೇಷನ್‌ ಫಾರ್‌ ಏವಿಯೇಷನ್‌, ಏರೋಸ್ಪೇಸ್‌ ಅಂಡ್‌ ಡೆವಲಪ್‌ಮೆಂಟ್‌’ನ (ಐಎಫ್‌ಎಎಡಿ) ಅಧ್ಯಕ್ಷ ಸನತ್‌ ಕೌಲ್‌.

ಪ್ರದರ್ಶನವನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಆರ್ಥಿಕ ಹೊರೆಯೂ ಬೀಳುತ್ತದೆ ಎಂದು ಹೇಳಿದರು ರಕ್ಷಣಾ ಪ್ರದರ್ಶನ ಸಂಸ್ಥೆಯ ಮಾಜಿ ನಿರ್ದೇಶಕ ಮಯಸ್ಕರ್‌ ದೇವ್‌ ಸಿಂಗ್‌. ಈ ಸಂಸ್ಥೆಯೇ ವೈಮಾನಿಕ ಪ್ರದರ್ಶನ ಏರ್ಪಡಿಸುವ ಹೊಣೆ ಹೊತ್ತಿದೆ. ‘ಪ್ರತಿಸಲ ಪ್ರದರ್ಶನ ಏರ್ಪಡಿಸಿದ ಸಂದರ್ಭದಲ್ಲೂ ರಕ್ಷಣಾ ಇಲಾಖೆಗೆ ₹‌30 ಕೋಟಿಯಿಂದ ₹ 35 ಕೋಟಿಯಷ್ಟು ಲಾಭ ಮಾಡಿಕೊಡುತ್ತಿದ್ದೆವು’ ಎಂದು ಅವರು ವಿವರಿಸಿದರು.

ರಕ್ಷಣಾ ಸಾಮಗ್ರಿಗಳ ಒಂಬತ್ತನೇ ಪ್ರದರ್ಶನವನ್ನು 2016ರಲ್ಲಿ ಪಣಜಿಯಲ್ಲಿ ನಡೆಸಲಾಗಿತ್ತು. ಆಗ ಮನೋಹರ ಪರ‍್ರೀಕರ್ ರಕ್ಷಣಾ ಸಚಿವರಾಗಿದ್ದರು. ಆ ಹುದ್ದೆಗೆ ನಿರ್ಮಲಾ ಸೀತಾರಾಮನ್‌ ಬಂದ ಬಳಿಕ ಹತ್ತನೇ ಪ್ರದರ್ಶನ ಚೆನ್ನೈನಲ್ಲಿ ನಡೆಸಲಾಯಿತು.

‘ರಕ್ಷಣಾ ಸಾಮಗ್ರಿಗಳ ಪ್ರದರ್ಶನವೇ ಬೇರೆ, ವೈಮಾನಿಕ ಪ್ರದರ್ಶನವೇ ಬೇರೆ. ವೈಮಾನಿಕ ಪ್ರದರ್ಶನವನ್ನು ಎಲ್ಲಿ ಬೇಕೆಂದರಲ್ಲಿ ನಡೆಸಲು ಆಗದು’ ಎಂದು ಪಾಂಡೆ ಹೇಳಿದರು.

ಬೆಂಗಳೂರಿನಲ್ಲೇ ಪ್ರದರ್ಶನ: ಸಚಿವ ಅನಂತಕುಮಾರ್‌
ಚಾಮರಾಜನಗರ:
‘ಈ ವರ್ಷದ ವೈಮಾನಿಕ ಪ್ರದರ್ಶನ ಲಖನೌಗೆ ಸ್ಥಳಾಂತರವಾಗಲಿದೆ ಎಂಬುದು ಕೇವಲ ವದಂತಿ. ಎಂದಿನಂತೆ ಈ ಬಾರಿಯೂ ಬೆಂಗಳೂರಿನಲ್ಲೇ ಪ್ರದರ್ಶನ ನಡೆಯಲಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ್‌ ಸೋಮವಾರ ‌ಹೇಳಿದರು.

‘ಯಾವುದೇ ಕಾರಣಕ್ಕೂ ಈ ಪ್ರದರ್ಶನ ಬೆಂಗಳೂರಿನಿಂದ ಬೇರೆಡೆ ಹೋಗಲು ನಾವು ಬಿಡುವುದಿಲ್ಲ’ ಎಂದು ತಿಳಿಸಿದರು. ‘ಕಳೆದ ವರ್ಷವೂ ಇದೇ ರೀತಿ ವದಂತಿ ಹಬ್ಬಿತ್ತು. ಈಗ ಹರಡಿರುವುದು ಊಹಾಪೋಹ ಎಂದು ರಕ್ಷಣಾ ಇಲಾಖೆ ಭಾನುವಾರ ಸ್ಪಷ್ಟವಾಗಿ ಹೇಳಿದೆ’ ಎಂದು ಅವರು ಹೇಳಿದರು.

‘ವೈಮಾನಿಕ ಪ್ರದರ್ಶನ ನಡೆಸಲು ತಮ್ಮಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲ ಎಂದು ಲಖನೌದ ಅಧಿಕಾರಿಗಳೇ ಹೇಳಿದ್ದಾರೆ. ಹಾಗಾಗಿ ಅಲ್ಲಿ ಪ್ರದರ್ಶನ ನಡೆಯುವುದಕ್ಕೆ ಸಾಧ್ಯವಿಲ್ಲ’ ಎಂದು ತಿಳಿಸಿದರು.

ಸ್ಥಳಾಂತರ ಬೇಡ: ಪ್ರಧಾನಿಗೆ ಸಿ.ಎಂ ಪತ್ರ
ಬೆಂಗಳೂರು: ಏರ್‌ ಷೋ ಬೆಂಗಳೂರಿನಲ್ಲೇ ನಡೆಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಈ ವಿಷಯದಲ್ಲಿ ತಕ್ಷಣವೇ ಮಧ್ಯ ಪ್ರವೇಶಿಸಿ ಪ್ರದರ್ಶನವನ್ನು ಬೆಂಗಳೂರಿನಲ್ಲೇ ನಡೆಸಲು ಸೂಕ್ತ ನಿರ್ದೇಶನವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪ್ರದರ್ಶನವು ಬೆಂಗಳೂರಿನ ಹೆಗ್ಗುರುತಾಗಿದೆ. ಏರೋ ಇಂಡಿಯಾ ಎಂದರೆ ಬೆಂಗಳೂರು ಎಂದೇ ಗುರುತಿಸಲಾಗುತ್ತಿದೆ ಎಂದಿದ್ದಾರೆ.

ಏರ್‌ ಷೋಗೆ ಅಗತ್ಯವಿರುವ ಎಲ್ಲ ನೆರವು ರಾಜ್ಯ ಸರ್ಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ರಕ್ಷಣಾ ಸಚಿವೆ ನಿರ್ಮಲ ಸೀತಾರಾಮನ್‌ ಅವರಿಗೂ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

ಇಲ್ಲೇ ಉಳಿಸಲು ಪ್ರಯತ್ನ: ಬಿಎಸ್‌ವೈ
ಗದಗ:
‘ಬೆಂಗಳೂರಿನಿಂದ ಏರ್‌ ಷೋ ಸ್ಥಳಾಂತರವಾಗದಂತೆ ಎಚ್ಚರ ವಹಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

‘ಏರ್‌ ಷೋ ಅನ್ನು ಲಖನೌದಲ್ಲಿ ನಡೆಸುವಂತೆ ಉತ್ತರ ಪ್ರದೇಶ ಸರ್ಕಾರ ಮನವಿ ಮಾಡಿದೆಯಷ್ಟೇ. ಇನ್ನೂ ಈ ಬಗ್ಗೆ ತೀರ್ಮಾನ ಆಗಿಲ್ಲ’ ಎಂದು ಹೇಳಿದರು.

‘ಲಖನೌಗೆ ಹೋದರೆ ಅನ್ಯಾಯ ಆಗಲ್ಲ’
ಬೆಂಗಳೂರು:
ಏರ್‌ ಷೋ ಲಖನೌಗೆ ಸ್ಥಳಾಂತರ ಆಗುವುದರಿಂದ ರಾಜ್ಯಕ್ಕೆ ಯಾವ ಅನ್ಯಾಯವೂ ಆಗುವುದಿಲ್ಲ ಎಂದು ಹೈಕೋರ್ಟ್‌ ವಕೀಲ ಮತ್ತು ಪೈಲಟ್‌ ಇನ್‌ಸ್ಪೆಕ್ಟರ್‌ ಕ್ಯಾಪ್ಟನ್‌ ಅರವಿಂದ ಶರ್ಮ ಹೇಳಿದರು.

ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು. ಇಂತಹ ಪ್ರತಿಷ್ಠಿತ ಪ್ರದರ್ಶಗಳು ಬೇರೆ ರಾಜ್ಯಗಳಲ್ಲೂ ನಡೆಯುವುದರಿಂದ ಸ್ಥಳೀಯ ಉದ್ಯಮ, ವಹಿವಾಟು ಪ್ರಗತಿ ಕಾಣುತ್ತದೆ. ಅಷ್ಟಕ್ಕೂ ಇದು ಬೆಂಗಳೂರಿನಲ್ಲೇ ನಡೆಯುತ್ತಿರಬೇಕು ಎನ್ನಲು ಯಾವುದೇ ನಿಯಮಗಳಿಲ್ಲ ಎಂದು ಪ್ರತಿಪಾದಿಸಿದರು.

ಈಗಾಗಲೇ ಜನ, ವಾಹನಗಳ ದಟ್ಟಣೆಯಿಂದಾಗಿ ಯಲಹಂಕ ಉಸಿರುಗಟ್ಟಿ ನಲುಗುತ್ತಿದೆ. ಬೆಂಗಳೂರಿಗರು 11 ವರ್ಷ ಏರ್‌ ಷೋ ಸವಿ ಅನುಭವಿಸಿದ್ದಾರೆ. ಈಗ ಇದು ಬೇರೆ ರಾಜ್ಯಕ್ಕೆ ಹೋದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.

‘ಉದ್ಯೋಗಗಳೇನೂ ಸೃಷ್ಟಿಯಾಗುವುದಿಲ್ಲ’
ಬೆಂಗಳೂರು:
‘ವೈಮಾನಿಕ ಪ್ರದರ್ಶನದಿಂದ ರಾಜ್ಯದಲ್ಲಿ ಉದ್ಯೋಗಗಳೇನೂ ಸೃಷ್ಟಿಯಾಗುವುದಿಲ್ಲ. ಈ ಬಾರಿ ಲಖನೌಗೆ ಸ್ಥಳಾಂತರ ಮಾಡಲಾಗುತ್ತದೆ ಎಂಬ ವದಂತಿ ಹಬ್ಬಿದೆ. ಮುಂದಿನ ಸಲ ಇಲ್ಲೇ ನಡೆಯಲಿದೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈಮಾನಿಕ ಪ್ರದರ್ಶನ ಸ್ಥಳಾಂತರದ ಬಗ್ಗೆ ಕಾಂಗ್ರೆಸ್‌ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಅದರ ಬಗ್ಗೆ ಕಾಂಗ್ರೆಸ್‌ ಮುಖಂಡರು ಚಕಾರ ಎತ್ತಿಲ್ಲ. ಏರೋ ಇಂಡಿಯಾದ ಬಗ್ಗೆ ಗಲಾಟೆ ಮಾಡುವುದನ್ನು ಬಿಟ್ಟು ಈ ವಿಷಯದ ಬಗ್ಗೆ ಚರ್ಚೆ ಮಾಡಲಿ’ ಎಂದು ವ್ಯಂಗ್ಯವಾಡಿದರು.

ಬಿಬಿಎಂಪಿಯಲ್ಲಿ ನಿರ್ಣಯ
‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನವನ್ನು ಈ ಬಾರಿಯೂ ಬೆಂಗಳೂರಿನಲ್ಲೇ ಹಮ್ಮಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಬಿಬಿಎಂಪಿ ಸಭೆಯಲ್ಲಿ ಸೋಮವಾರ ನಿರ್ಣಯ ಕೈಗೊಳ್ಳಲಾಯಿತು.

‘ಈ ಪ್ರದರ್ಶನಕ್ಕೆ ಅಗತ್ಯ ಮೂಲಸೌಕರ್ಯ ಇಲ್ಲಿದೆ. ಹೆಚ್ಚುವರಿ ಸೌಕರ್ಯ ಬಯಸಿದರೆ ಅದನ್ನು ಒದಗಿಸಲು ಪಾಲಿಕೆ ಸಿದ್ಧವಿದೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

ಬಿಜೆಪಿ ಮೇಲೆ ಒತ್ತಡ 
ಬೆಂಗಳೂರು:
ವೈಮಾನಿಕ ಪ್ರದರ್ಶನವನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳುವುದು ಬಿಜೆಪಿಯ ರಾಜ್ಯ ನಾಯಕರಿಗೆ ಸವಾಲಾಗಿದೆ. ನಗರದಲ್ಲೇ ಪ್ರದರ್ಶನ ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.

‘ಈ ಬಗ್ಗೆ ರಕ್ಷಣಾ ಸಚಿವರ ಜತೆಗೆ ಸಮಾಲೋಚನೆ ನಡೆಸುತ್ತೇನೆ. ನನ್ನ ಕ್ಷೇತ್ರದಲ್ಲೇ (ಯಲಹಂಕ ವಾಯುನೆಲೆ) ಪ್ರದರ್ಶನ ನಡೆಯುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದರು. ‘ಮಂಗಳವಾರ ದೆಹಲಿಗೆ ತೆರಳಿ ಸಂಬಂಧಪಟ್ಟ ಎಲ್ಲರ ಜತೆಗೆ ಚರ್ಚಿಸುತ್ತೇನೆ’ ಎಂದು ಅವರು ತಿಳಿಸಿದರು.

‘ಈ ವಿಷಯದ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು’ ಎಂದು ಸಂಸದ ಪಿ.ಸಿ.ಮೋಹನ್‌ ಹೇಳಿದರು. 

ಬರಹ ಇಷ್ಟವಾಯಿತೆ?

 • 0

  Happy
 • 5

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !