ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪರ ಪ್ರಚಾರ ನಡೆಸದಿರಲು ರಮೇಶ ನಿರ್ಧಾರ; ಚುನಾವಣೆ ನಂತರ ಬಿಜೆಪಿಗೆ?

Last Updated 17 ಏಪ್ರಿಲ್ 2019, 20:06 IST
ಅಕ್ಷರ ಗಾತ್ರ

ಬೆಳಗಾವಿ: ತಮಗೆ ಸೂಕ್ತ ಸ್ಥಾನಮಾನ ನೀಡಿಲ್ಲವೆಂದು ಕಾಂಗ್ರೆಸ್‌ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದ ಶಾಸಕ ರಮೇಶ ಜಾರಕಿಹೊಳಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ನಡೆಸದಿರಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಗೋಕಾಕದಲ್ಲಿರುವ ತಮ್ಮ ನಿವಾಸದಲ್ಲಿ, ನಗರಸಭೆಯ ಎಲ್ಲ 31 ಸದಸ್ಯರ ದಿಢೀರ್‌ ಸಭೆ ಕರೆದು ಬುಧವಾರ ಚರ್ಚಿಸಿದರು. ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ಇಲ್ಲಿಯವರೆಗೆ ರಮೇಶ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.

ಕಾಂಗ್ರೆಸ್‌ನಲ್ಲಿ ತಮಗಾದ ನೋವನ್ನು ಸಭೆಯಲ್ಲಿ ಹಂಚಿಕೊಂಡಿದ್ದು, ‘ಇಷ್ಟು ವರ್ಷ ಕಷ್ಟಪಟ್ಟು ಕಟ್ಟಿ ಬೆಳೆಸಿದ ಪಕ್ಷದಲ್ಲಿ ನನಗೆ ಸೂಕ್ತ ಸ್ಥಾನ ಮಾನ ದೊರಕಲಿಲ್ಲ. ಅದಕ್ಕಾಗಿ ಕಾಂಗ್ರೆಸ್‌ ಪರ ಪ್ರಚಾರ ನಡೆಸದಿರಲು ತೀರ್ಮಾನ ಕೈಗೊಂಡಿದ್ದೇನೆ. ಮತದಾರರು ಪ್ರಬುದ್ಧರಾಗಿದ್ದಾರೆ. ಯಾವುದಕ್ಕೆ ಮತ ಹಾಕಿ, ಯಾವುದಕ್ಕೆ ಹಾಕಬೇಡಿ ಎಂದು ಹೇಳಿಸಿಕೊಳ್ಳುವಂಥವರು ಯಾರೂ ಇಲ್ಲ’ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವೇಳೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಜೊತೆ ಮುನಿಸಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕಸಿದುಕೊಂಡ ನಂತರ ಮತ್ತಷ್ಟು ಅಸಮಾಧಾನಗೊಂಡ ಅವರು, ಅಂದಿನಿಂದ ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದರು. ಚಿಕ್ಕೋಡಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಪಕ್ಷದ ಅಭ್ಯರ್ಥಿಗಳ ಪರ ಒಂದು ದಿನವೂ ಪ್ರಚಾರ ನಡೆಸಿಲ್ಲ.

ಚುನಾವಣೆ ನಂತರ ಬಿಜೆಪಿಗೆ?: ಕಾಂಗ್ರೆಸ್‌ ಜೊತೆ ಮುನಿಸಿಕೊಂಡಿರುವ ರಮೇಶ ಬಿಜೆಪಿ ಸೇರ್ಪಡೆಗೆ ಸಿದ್ಧತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಕಳೆದ ವಾರ ಚುನಾವಣಾ ಪ್ರಚಾರದ ಅಂಗವಾಗಿ ಜಿಲ್ಲೆಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ರಮೇಶ ಅವರನ್ನು ಭೇಟಿಯಾಗಿದ್ದರು. ಪಕ್ಷ ಸೇರ್ಪಡೆ ಕುರಿತು ಒಂದು ಸುತ್ತಿನ ಮಾತುಕತೆ ನಡೆಸಿದ್ದರು ಎಂದು ಹೇಳಲಾಗಿದೆ.

ರಮೇಶ ಜಾಗಕ್ಕೆ ಲಖನ್‌: ರಮೇಶ ಗೈರಾದ ಹಿನ್ನೆಲೆಯಲ್ಲಿ ಪ್ರಚಾರದ ನೇತೃತ್ವವನ್ನು ಮತ್ತೊಬ್ಬ ಸಹೋದರ ಲಖನ್‌ ಜಾರಕಿಹೊಳಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ವಹಿಸಿಕೊಟ್ಟಿದ್ದಾರೆ. ಹಾಗೊಂದು ವೇಳೆ, ರಮೇಶ ಪಕ್ಷ ತೊರೆದರೆ ಅವರ ಸ್ಥಾನಕ್ಕೆ ಲಖನ್‌ ಅವರನ್ನು ತರುವ ಯೋಜನೆಯ ಮೊದಲ ಹೆಜ್ಜೆ ಇದಾಗಿದೆ ಎನ್ನಲಾಗಿದೆ.

ರಮೇಶ ವಿರುದ್ಧ ದೂರು
‘ರಮೇಶ, ಪರೋಕ್ಷವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಪಕ್ಷದ ಹಲವು ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಕೆಪಿಸಿಸಿಗೆ ದೂರು ನೀಡಲಾಗಿದೆ. ಸದ್ಯದಲ್ಲಿಯೇ ಪಕ್ಷ ಕ್ರಮ ಕೈಗೊಳ್ಳಲಿದೆ’ ಎಂದು ಸತೀಶ ಜಾರಕಿಹೊಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT