ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,200 ಕುಟುಂಬಗಳ ‘ಆಶ್ರಯ’ ಕಸಿದ ಮಳೆ

ಮನೆಗಳ ಕುಸಿತ ತಂದ ಆತಂಕ; ಬದುಕು ಬೀದಿಗೆ
Last Updated 25 ಅಕ್ಟೋಬರ್ 2019, 2:21 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಜೋರು ಮಳೆ ಸುರಿಯುತ್ತಿರುವುದರಿಂದ ಮನೆಗಳು ಶಿಥಿಲಗೊಳ್ಳುತ್ತಿವೆ. ಗೋಡೆಗಳು ಬೀಳುತ್ತಿವೆ. ಜುಲೈ ಅಂತ್ಯ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಧಾರಾಕಾರ ಮಳೆ ಹಾಗೂ ನೆರೆಯಿಂದಾಗಿ ಆಶ್ರಯ ಕಳೆದುಕೊಂಡಿದ್ದವರು ಸುಧಾರಿಸಿಕೊಳ್ಳುವ ಮುನ್ನವೇ ಮತ್ತೊಂದು ‘ಹೊಡೆತ’ ಅವರನ್ನು ಕಂಗಾಲಾಗಿಸಿದೆ. ಪ್ರಾಥಮಿಕ ಸಮೀಕ್ಷೆ ಪ್ರಕಾರ, ಮತ್ತೆ 1,200ಕ್ಕೂ ಹೆಚ್ಚಿನ ಮನೆಗಳು ಬಿದ್ದಿದ್ದು, ಆ ಕುಟುಂಬಗಳು ಬೀದಿಗೆ ಬಿದ್ದಿವೆ.

ಮುಂಗಾರು ಹಂಗಾಮಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದಾಗಿ 69,381 ಮನೆಗಳು ಬಿದ್ದು, ₹ 2,996 ಕೋಟಿ ಹಾನಿಯಾಗಿತ್ತು. ಈ ನೋವಿನಿಂದ ಸುಧಾರಿಸಿಕೊಳ್ಳುತ್ತಿರುವ ನಡುವೆಯೇ ಹಿಂಗಾರು ಮಳೆಯೂ ‘ಬರೆ’ ಎಳೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇನ್ನೂ ಕೆಲವು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎನ್ನುವ ಮುನ್ಸೂಚನೆ ನಿರಾಶ್ರಿತರನ್ನು ಮತ್ತಷ್ಟು ಕಂಗೆಡಿಸಿದೆ.

ಮಣ್ಣಿನ ಮನೆಗಳಿಗೆ ಹೆಚ್ಚು ತೊಂದರೆ:ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಮನೆಗಳು ಮಣ್ಣಿನಿಂದ ನಿರ್ಮಿಸಿದವಾಗಿವೆ. ಮುಂಗಾರಿನಲ್ಲಿ ಅತಿವೃಷ್ಟಿಯಿಂದಾಗಿ ಬಹಳಷ್ಟು ಮನೆಗಳು ಕುಸಿದಿದ್ದವು. ಜಿಲ್ಲಾಡಳಿತವು ಮಾರ್ಗಸೂಚಿಗಳ ಪ್ರಕಾರ, ಭಾಗಶಃ, ಶೇ 25ರಿಂದ ಶೇ 75ರಷ್ಟು ಹಾಗೂ ಶೇ 75ಕ್ಕಿಂತ ಹೆಚ್ಚಿನ ಹಾನಿಯಾಗಿರುವು ಮನೆಗಳನ್ನು ಪಟ್ಟಿ ಮಾಡಿ, ಅದರಂತೆ ಮೊದಲ ಹಂತದ ಪರಿಹಾರವಾಗಿ ಗರಿಷ್ಠ ₹ 1 ಲಕ್ಷದವರೆಗೆ ಪರಿಹಾರ ನೀಡಿದೆ. ಶೇ 25ರಷ್ಟು ಹಾನಿಯಾಗಿದ್ದ ಮನೆಗಳು ಈಗ ಬೀಳುತ್ತಿರುವ ಮಳೆಯಿಂದಾಗಿ ಮತ್ತಷ್ಟು ಹೆಚ್ಚಿನ ಹಾನಿಗೊಳಗಾಗಿವೆ. ಆಗ ನೆನೆದಿದ್ದ ಗೋಡೆಗಳು ಈಗ ಕುಸಿಯಲಾರಂಭಿಸಿವೆ.

‘ಅಧಿಕಾರಿಗಳು ಮತ್ತೊಮ್ಮೆ ಸಮೀಕ್ಷೆ ನಡೆಸಿ, ಸರ್ಕಾರದಿಂದ ಪರಿಹಾರ ಕಲ್ಪಿಸಬೇಕು’ ಎನ್ನುವುದು ಸಂತ್ರಸ್ತರ ಆಗ್ರಹವಾಗಿದೆ.

‘ನಮ್ಮ ಊರಿನಲ್ಲಿ ಆಗಸ್ಟ್‌ ನಂತರ ಮಳೆ ಬಂದಾಗ 52 ಮನೆಗಳು ಕುಸಿದಿದ್ದವು. ಅವರಿಗೆ ಸರ್ಕಾರದಿಂದ ಪರಿಹಾರ ನೀಡಲಾಗಿದೆ. ಅವರು ದುರಸ್ತಿಪಡಿಸಿಕೊಂಡು ಹೊಸ ಜೀವನ ಕಟ್ಟಿಕೊಳ್ಳುವಾಗಲೇ ಮತ್ತೆ ಮಳೆಯಿಂದ ತೊಂದರೆಯಾಗಿದೆ. ಕೆಲವೇ ದಿನಗಳಲ್ಲಿ 20ಕ್ಕೂ ಹೆಚ್ಚಿನ ಮನೆಗಳ ಗೋಡೆಗಳು ಬಿದ್ದಿವೆ. ಒಂದು ಗೋಡೆ ಬಿದ್ದರೆ ಇಡೀ ಮನೆಯೇ ಬಿದ್ದಂತೆಯೇ ಲೆಕ್ಕ. ಹೀಗಾಗಿ, ಅವರೆಲ್ಲರೂ ಅತಂತ್ರರಾಗಿದ್ದಾರೆ. ಸದ್ಯಕ್ಕೆ ಅವರೆಲ್ಲರೂ ಅಕ್ಕಪಕ್ಕದವರು, ಸಂಬಂಧಿಕರ ಮನೆಗಳಲ್ಲಿ ವಾಸವಿದ್ದಾರೆ’ ಎಂದು ಸವದತ್ತಿ ತಾಲ್ಲೂಕು ಮುಗಳಿಹಾಳದ ವಿಠ್ಠಲ ಡಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೀಕ್ಷೆ ನಡೆಸಿ ಕ್ರಮ

‘ಖಾನಾಪುರ, ಬೈಲಹೊಂಗಲ, ಸವದತ್ತಿ, ಚನ್ನಮ್ಮನಕಿತ್ತೂರು ಮೊದಲಾದ ಕಡೆಗಳಲ್ಲಿ ಮನೆಗಳು ಬಿದ್ದಿವೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ್ದೇನೆ. ಆಗಸ್ಟ್‌ ಮಳೆಯಿಂದಾಗಿ ಭಾಗಶಃ ಹಾನಿಯಾಗಿದ್ದ ಮನೆಗಳು ಈಗ ಸಂಪೂರ್ಣ ಬಿದ್ದಿದ್ದರೆ ಹೆಚ್ಚುವರಿ ಪರಿಹಾರಕ್ಕೆ ‍ಪರಿಗಣಿಸುವ ಕುರಿತು ಸರ್ಕಾರದಿಂದ ನಿರ್ದೇಶನ ಕೇಳಲಾಗಿದೆ. ನಿಯಮದ ಪ್ರಕಾರ, ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT