ನೀಲಗಿರಿ ಬದಲು ಬಿದಿರು ಕೃಷಿಗೆ ಉತ್ತೇಜನ

7

ನೀಲಗಿರಿ ಬದಲು ಬಿದಿರು ಕೃಷಿಗೆ ಉತ್ತೇಜನ

Published:
Updated:

ಬೆಂಗಳೂರು: ಭೂಮಿಯ ಸತ್ವ ಹೀರಿಕೊಂಡು, ನೀರನ್ನು ನುಂಗುವ ನೀಲಗಿರಿ ಹಾಗೂ ಅಕೇಶಿಯಾಗಳ ಬದಲು ಬಿದಿರು ಬೆಳೆಸುವ ರೈತರಿಗೆ ಉತ್ತೇಜನ ನೀಡಲು ಕೃಷಿ ಇಲಾಖೆ ಮುಂದಾಗಿದೆ.

ಕೃಷಿ ಸಚಿವ ಎನ್‌.ಎಚ್‌.ಶಿವಶಂಕರ ರೆಡ್ಡಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರ ಬಿದಿರು ಉತ್ತೇಜನ ಅಭಿಯಾನ ಆರಂಭಿಸಿದೆ. ಅದೇ ರೀತಿ ನಮ್ಮ ಇಲಾಖೆಯಿಂದಲೂ ಅಭಿಯಾನ ಆರಂಭಿಸಲಿದ್ದೇವೆ. ರೈತರಿಗೆ ಹನಿ ನೀರಾವರಿಯ ವ್ಯವಸ್ಥೆ ಮಾಡಿಕೊಡಲಿದ್ದೇವೆ. ಗಿಡ ನೆಟ್ಟ ಮೂರೇ ವರ್ಷಗಳಲ್ಲಿ ಆದಾಯ ಬರಲಿದೆ. ಒಂದು ಎಕರೆಗೆ 3.5 ಲಕ್ಷ ಆದಾಯ ಬರಲಿದೆ’ ಎಂದರು.

ಕೃಷಿ ವಿವಿಗಳ ನೇಮಕಕ್ಕೆ ಸಿಇಟಿ: ‘ಕೃಷಿ ವಿಶ್ವವಿದ್ಯಾಲಯಗಳಲ್ಲಿನ ನೇಮಕ ಪ್ರಕ್ರಿಯೆ ಬಗ್ಗೆ ಹಲವು ಆರೋಪಗಳು ಬಂದಿದ್ದವು. ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರ ಹಾಗೂ ನೌಕರರ ನೇಮಕಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಈ ವರ್ಷ 153 ಸಹಾಯಕ ಕೃಷಿ ಅಧಿಕಾರಿಗಳ ನೇಮಕ ಮಾಡಲಾಗುತ್ತದೆ’ ಎಂದರು.

‘ರಾಜ್ಯದಲ್ಲಿ ಸರಿಯಾಗಿ ಬೆಳೆ ಮಾಪನ ಆಗಿಲ್ಲ. ಕಂಪ್ಯೂಟರೀಕೃತ ಪಹಣಿ ಪತ್ರ ನೀಡುವ ವ್ಯವಸ್ಥೆ ಬಂದ ಬಳಿಕ ಬೆಳೆಯ ಸಮಗ್ರ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ, ಡ್ರೋನ್‌ ಮೂಲಕ ಬೆಳೆ ಮಾಪನ ಮಾಡಲಾಗುತ್ತದೆ. ಡ್ರೋನ್‌ ನೆರವಿನಿಂದ ದಿನಕ್ಕೆ ಸಾವಿರ ಎಕರೆಯ ಮಾಪನ ಮಾಡಬಹುದು. ಈ ಯೋಜನೆಗೆ ₹15 ಕೋಟಿ ವೆಚ್ಚ ಆಗಲಿದ್ದು, 2 ತಿಂಗಳಲ್ಲಿ ಸರ್ವೆ ಪೂರ್ಣಗೊಳಿಸುತ್ತೇವೆ’ ಎಂದರು. 

ಸಿರಿಧಾನ್ಯಗಳನ್ನು ಹಾಪ್‌ಕಾಪ್ಸ್‌ ಹಾಗೂ ಕೆಎಂಎಫ್‌ ಮೂಲಕ ಮಾರಾಟ ಮಾಡಲು ಯೋಜಿಸಲಾಗಿದೆ. ಹಾಲಿನ ಜತೆಗೆ ಮನೆ ಮನೆಗೆ ಸಿರಿಧಾನ್ಯಗಳನ್ನು ತಲುಪಿಸುವ ಯೋಜನೆ ಇದೆ ಎಂದು ಹೇಳಿದರು.

‘ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಎರಡು ವಿಚಾರಸಂಕಿರಣಗಳನ್ನು ನಡೆಸಲಾಗಿದೆ. ಇಲಾಖೆಯ ಅಧಿಕಾರಿಗಳ ತಂಡ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗೆ ತೆರಳಿ ಅಧ್ಯಯನ ಮಾಡಲಿದೆ’ ಎಂದರು. 

* 100 ಎಪಿಎಂಸಿಗಳಿಗೆ ಹಾಗೂ ಸಂತೆಗಳಿಗೆ ಹೊಸ ರೂಪ ನೀಡಲು ಯೋಜನೆ ರೂಪಿಸಲಾಗುತ್ತಿದೆ

–ಎನ್‌.ಎಚ್‌.ಶಿವಶಂಕರ ರೆಡ್ಡಿ, ಸಚಿವ

 

ಮುಂಗಾರು ಬೆಳೆ ಚಿತ್ರಣ

74.69 ಲಕ್ಷ ಹೆಕ್ಟೇರ್‌

ರಾಜ್ಯದಲ್ಲಿ ಈ ವರ್ಷ ಬಿತ್ತನೆ ಗುರಿ

49.47 ಲಕ್ಷ ಹೆಕ್ಟೇರ್‌

ಈವರೆಗೆ ಬಿತ್ತನೆ ಆಗಿರುವುದು

11

ಜಿಲ್ಲೆಗಳಲ್ಲಿ ಶೇ 50ಕ್ಕಿಂತ ಕಡಿಮೆ ಬಿತ್ತನೆ

8.60 ಲಕ್ಷ ಕ್ವಿಂಟಲ್‌

ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳ ಬೇಡಿಕೆ

3.69 ಲಕ್ಷ ಕ್ವಿಂಟಲ್‌

ಬಿತ್ತನೆಬೀಜ ಈವರೆಗೆ ಪೂರೈಕೆ

21.87 ಲಕ್ಷ ಟನ್‌

ರಸಗೊಬ್ಬರಗಳ ಬೇಡಿಕೆ

14.84 ಲಕ್ಷ ಟನ್‌

ಈ ತನಕ ರಸಗೊಬ್ಬರ ಸರಬರಾಜು

8 ಲಕ್ಷ ಹೆಕ್ಟೇರ್

ಪರ್ಯಾಯ ಬೆಳೆ ಯೋಜನೆ

2.16 ಲಕ್ಷ ಹೆಕ್ಟೇರ್‌

ಮಳೆ ಕೊರತೆಯಿಂದ ಬೆಳೆ ಹಾನಿ

6,309 ಹೆಕ್ಟೇರ್‌

ಅಧಿಕ ಮಳೆಯಿಂದ ಎಂಟು ಜಿಲ್ಲೆಗಳಲ್ಲಿ ಬೆಳೆ ಹಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !