4
ಭಟ್ಕಳ ತಾಲ್ಲೂಕಿನ ಹೊನ್ನೆಗದ್ದೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ನಾಟಿ ಮಾಡಿ ಪಾಠ ತಿಳಿದ ಮಕ್ಕಳು!

Published:
Updated:
ಗದ್ದೆಯಲ್ಲಿ ನಾಟಿ ಮಾಡುವುದನ್ನು ಕಲಿತ ಭಟ್ಕಳ ತಾಲ್ಲೂಕಿನ ಹೊನ್ನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು

ಕಾರವಾರ: ಅಲ್ಲಿ ಶಾಲಾ ಮಕ್ಕಳು ಗದ್ದೆಗೆ ಇಳಿದಿದ್ದರು. ಕೈಗೆ ಕೆಸರು ಮೆತ್ತಿದರೂ ಬೇಸರಿಸಿಕೊಳ್ಳದೇ ಖುಷಿಖುಷಿಯಾಗಿ ನಾಟಿ ಮಾಡಿದರು. ಭತ್ತದ ಕೃಷಿ ಹೇಗೆ ಮಾಡುವುದು ಎಂಬುದನ್ನು ಪ್ರಾಯೋಗಿಕವಾಗಿ ಕಲಿತರು!

ಭಟ್ಕಳ ತಾಲ್ಲೂಕಿನ ಹೊನ್ನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪಡೆದುಕೊಂಡ ಈ ಅನುಭವದ ಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಏಳನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ‘ಸೀನ ಸೆಟ್ಟರು ನಮ್ಮ ಟೀಚರು’ ಎಂಬ ಪಾಠವಿದೆ. ಕೃಷಿ ಚಟುವಟಿಕೆಗಳ ಕುರಿತು ತರಗತಿಯಲ್ಲೇ ಬೋಧಿಸುವುದಕ್ಕಿಂತ ಪ್ರಾಯೋಗಿಕವಾಗಿ ತಿಳಿವಳಿಕೆ ನೀಡುವುದು ಉತ್ತಮ ಎಂದುಕೊಂಡ ಶಾಲೆಯ ಶಿಕ್ಷಕರು, ಮಕ್ಕಳನ್ನು ಸಮೀಪದಲ್ಲೇ ಇರುವ ಗದ್ದೆಯತ್ತ ಕರೆದುಕೊಂಡು ಹೋಗಿ ಪ್ರಾಯೋಗಿಕ ಪಾಠಕ್ಕೆ ಮುಂದಾಗಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ.

ಗೋಡೆಗಳ ಮಧ್ಯದ ಪಾಠ ತಲೆಗೆ ಹೋಗದು: ‘ಈಗಿನ ಮಕ್ಕಳು ಹುಟ್ಟಿನಿಂದಲೇ ಆಧುನಿಕ ಸೌಲಭ್ಯಗಳನ್ನು ಪಡೆದಿರುತ್ತಾರೆ. ಎಲ್ಲರಿಗೂ ತರಗತಿ ಶಿಕ್ಷಣದ ಬಗ್ಗೆಯೇ ಒಲವು. ಹೀಗಾಗಿ ಕೃಷಿ, ಬೇಸಾಯ ಚಟುವಟಿಕೆಗಳನ್ನು ಮರೆಯುತ್ತಿದ್ದಾರೆ. ಅವರಿಗೆ ಕೃಷಿಯ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಟ್ಟರೆ ತಲೆಗೆ ಹೋಗದು. ಅದನ್ನು ಪ್ರಾಯೋಗಿಕವಾಗಿ ಮಾಡಿಸಿದಾಗ ಅಚ್ಚಳಿಯದಂತೆ ನೆನಪಿಟ್ಟುಕೊಳ್ಳುತ್ತಾರೆ’ ಎನ್ನುತ್ತಾರೆ ಶಾಲೆಯ ಮುಖ್ಯ ಶಿಕ್ಷಕ ಡಿ.ಕೆ.ಅಳ್ವೆಕೋಡಿ.

‘ಆರು ಮತ್ತು ಏಳನೇ ತರಗತಿಯ ಅಂದಾಜು 33 ಮಕ್ಕಳನ್ನು ಗದ್ದೆಗೆ ಕರೆದೊಯ್ದು, ನಾಟಿ ಮಾಡುವುದನ್ನು ಹೇಳಿಕೊಟ್ಟೆವು. ನಮ್ಮ ಶಾಲೆಯ ಮಕ್ಕಳು ಗ್ರಾಮೀಣ ಭಾಗದವರಾದ ಕಾರಣ ಅವರಿಗೆ ಸಾಮಾನ್ಯವಾಗಿ ಗದ್ದೆ, ಬೇಸಾಯದ ಪರಿಚಯ ಅಲ್ಪಸ್ವಲ್ಪವಾದರೂ ಇರುತ್ತದೆ. ಹೀಗಾಗಿ, ಅವರಿಗೆ ಹೇಳಿಕೊಡುವುದು ಕಷ್ಟ ಎನಿಸಲಿಲ್ಲ. ಪಾಲಕರೂ ಸಹಕಾರ ನೀಡಿದರು. ಸುಮಾರು ಮುಕ್ಕಾಲು ಗಂಟೆ ಗದ್ದೆಯಲ್ಲಿ ಮಕ್ಕಳನ್ನು ಬಿಟ್ಟು, ಕೃಷಿ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟೆವು’ ಎಂದು
ಅವರು ‘ಪ್ರಜಾವಾಣಿ’ಗೆತಿಳಿಸಿದರು.

ಸಹಾಯಕ ಶಿಕ್ಷಕ ವಸಂತ ನಾಯ್ಕ, ‘ನಮ್ಮ ಉಳಿವಿಗೆ ಕೃಷಿ ಅತ್ಯವಶ್ಯವಾಗಿದೆ. ಕಣ್ಮರೆಯಾಗುತ್ತಿರುವ ಬೇಸಾಯ, ಕೃಷಿ ಚಟುವಟಿಕೆಗಳನ್ನು ಉಳಿಸಿಕೊಂಡು ಹೋಗುವತ್ತ ಯುವ ಜನಾಂಗ ಗಮನಹರಿಸಬೇಕಿದೆ. ಕನ್ನಡ ಶಿಕ್ಷಕಿ ಸುಮನಾ ನಾಯಕ ಸೇರಿದಂತೆ ಶಾಲೆಯ ಎಲ್ಲ ಶಿಕ್ಷಕರ ಸಹಕಾರದೊಂದಿಗೆ ಮಕ್ಕಳಿಗೆ ನಾಟಿ ಮಾಡುವ ವಿಧಾನವನ್ನು ಪ್ರಾಯೋಗಿಕವಾಗಿ ಹೇಳಿಕೊಟ್ಟೆವು. ನಮ್ಮ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಬರುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ಪಠ್ಯದಲ್ಲಿ ಏನಿದೆ?

ಲೇಖಕಿ ವಿ.ಗಾಯತ್ರಿ ಅವರ ‘ತುಂಗಾ’ ಕೃತಿಯಿಂದ ‘ಸೀನ ಸೆಟ್ಟರು ನಮ್ಮ ಟೀಚರು’ ಎಂಬ ಅಧ್ಯಾಯವನ್ನು ಏಳನೇ ತರಗತಿಯ ಪಠ್ಯದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಬೇಸಾಯದ ವಿವಿಧ ಪ್ರಕಾರಗಳನ್ನು ವಿವರಿಸಲಾಗಿದೆ. ಗದ್ದೆಯಲ್ಲಿ ಉಳುಮೆ ಮಾಡುವುದು, ನಾಟಿ ಮಾಡುವುದು, ತೆನೆ– ಹೊರೆಗಳನ್ನು ಹೊರುವುದು, ಬೀಜ ಬಿತ್ತನೆ, ಸಸಿ ಕೀಳುವುದನ್ನು ಇಲ್ಲಿ ಪರಿಚಯಿಸಲಾಗಿದೆ.

* ಮಳೆ ನೀರು ತುಂಬಿ ಕೆಸರು ಗದ್ದೆ ನಿರ್ಮಾಣವಾಗಿತ್ತು. ಮಕ್ಕಳು ಅಲ್ಲಿಂದ ವಾಪಸ್ ಶಾಲೆಗೆ ಬರಲು ಸಿದ್ಧರಿರಲಿಲ್ಲ. ಕೃಷಿಯತ್ತ ಈಗಿನಿಂದಲೇ ಗಮನ ಹರಿಸುವುದು ಸಂತಸ ತಂದಿದೆ.ಡಿ.ಕೆ.ಅಳ್ವೆಕೋಡಿ,
- ಹೊನ್ನೆಗದ್ದೆ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ

* ಕೃಷಿ ಚಟುವಟಿಕೆ ಬಗ್ಗೆ ನನಗೆ ಆಸಕ್ತಿ ಹೆಚ್ಚಲು ಇದು ಸಹಕಾರಿಯಾಯಿತು. ಕೈ ಕೆಸರಾದರೂ ಬಾಯಿ ಮೊಸರು ಎಂಬುದರ ಅರ್ಥ ತಿಳಿಯಿತು.
– ನಿಖಿತಾ ರಾಮನಾಯ್ಕ, 7ನೇ ತರಗತಿ ವಿದ್ಯಾರ್ಥಿನಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !