ಮಂಗಳವಾರ, ಫೆಬ್ರವರಿ 18, 2020
27 °C

ಕೃಷಿ ಸಚಿವರಾಗಿ ತವರು ಕ್ಷೇತ್ರಕ್ಕೆ ಬಂದ ಬಿ.ಸಿ.ಪಾಟೀಲಗೆ ಅದ್ಧೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ‌‘ರೈತನ ಮಗನಾದ ನಾನು ಅನ್ನದಾತರ ನೋವಿಗೆ ಸ್ಪಂದಿಸಿ, ರೈತರ ಕಣ್ಣೀರೊರೆಸುವ ಕೆಲಸ ಮಾಡುತ್ತೇನೆ. ರಾಜ್ಯದಾದ್ಯಂತ ಪ್ರವಾಸ ಮಾಡಿ, ಅಹವಾಲು ಆಲಿಸಬೇಕು. ಅವರ ನಿರೀಕ್ಷೆಗೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. 

ಕೃಷಿ ಸಚಿವನಾಗಿ ಪ್ರಥಮ ಬಾರಿಗೆ ತವರು ಕ್ಷೇತ್ರ ಹಿರೇಕೆರೂರಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ ಅವರು ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ‘ಹಿರೇಕೆರೂರು ಕ್ಷೇತ್ರಕ್ಕೆ 40 ವರ್ಷಗಳಿಂದ ‘ಮಂತ್ರಿ ಭಾಗ್ಯ‘ ಸಿಕ್ಕಿರಲಿಲ್ಲ. ಕ್ಷೇತ್ರದ ಜನರ ಬಹುದಿನದ ಕನಸು ಈಗ ನನಸಾಗಿದೆ. ನನ್ನ ತಾಲ್ಲೂಕಿಗೆ ಕೃಷಿ ಸಚಿವನಾಗಿ ಬರುತ್ತಿರುವುದಕ್ಕೆ ತುಂಬಾ ಖುಷಿ ಮತ್ತು ಹೆಮ್ಮೆಯಾಗುತ್ತಿದೆ’ ಎಂದರು. 

ಕೃಷಿ ಇಲಾಖೆ ಬಹಳ ದೊಡ್ಡ ಇಲಾಖೆ. ಅದನ್ನು ಅರ್ಥಮಾಡಿಕೊಳ್ಳಬೇಕಿದೆ. ‘ಕಿಸಾನ್‌ ಸಮ್ಮಾನ್‌’ ಯೋಜನೆಯಲ್ಲಿ ಬಿಟ್ಟು ಹೋಗಿರುವ ಒಂದೂವರೆ ಲಕ್ಷ ರೈತರ ಹೆಸರನ್ನು 10 ದಿನದೊಳಗಾಗಿ ಸೇರ್ಪಡೆಗೊಳಿಸಲಾಗುವುದು. ಕೃಷಿ ಸಚಿವನಾದ ಮೇಲೆ ಎರಡು ದಿನಗಳಲ್ಲಿ 40 ಸಾವಿರ ರೈತರ ಹೆಸರನ್ನು ಸೇರ್ಪಡೆ ಮಾಡಲಾಗಿದೆ’ ಎಂದರು. 

ರಾಜ್ಯದ ರೈತ ನಾಯಕರನ್ನು ಮುಖ್ಯಮಂತ್ರಿ ಅವರು ನಿನ್ನೆ ಕರೆಸಿ, ಅವರ ಅಹವಾಲು ಕೇಳಿ, ರೈತ ಪರ ಬಜೆಟ್‌ ಮಂಡನೆಗೆ ಚಿಂತನೆ ನಡೆಸಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ಚಿಂತನೆ ನಡೆಸಿದ್ದೇನೆ ಎಂದರು. 

ಅರಣ್ಯ ಇಲಾಖೆಯನ್ನು ಯಾರೂ ಬಿಡುವುದಿಲ್ಲ. ನಮ್ಮನ್ನು ಜನರಿರುವ ಕಡೆ ಕಳುಹಿಸಿ. ಪ್ರಾಣಿಗಳ ಇರುವ ಕಡೆ ಕಳುಹಿಸಬೇಡಿ ಎಂದು ಸಿ.ಎಂ ಅವರಲ್ಲಿ ಮನವಿ ಮಾಡಿದೆ. ಅದಕ್ಕೆ ಅವರು ಕೃಷಿ ಖಾತೆ ಕೊಟ್ಟಿದ್ದಾರೆ ಎಂದರು. 

ಉಪ ಚುನಾವಣೆಯಲ್ಲಿ ಟೊಂಕ ಕಟ್ಟಿ ನಿಂತ ಯು.ಬಿ.ಬಣಕಾರ ಮತ್ತು ತಾಲ್ಲೂಕಿನ ಜನತೆಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ. ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದು ಅಭಿಮಾನದ ನುಡಿಗಳನ್ನಾಡಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು