ಸೇನೆ ನಿಷೇಧಿಸಿ; ಮುತಾಲಿಕ್ ಬಂಧಿಸಿ

7
ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹ

ಸೇನೆ ನಿಷೇಧಿಸಿ; ಮುತಾಲಿಕ್ ಬಂಧಿಸಿ

Published:
Updated:
ಎಸ್‌.ಎಂ.ಪಾಟೀಲ ಗಣಿಹಾರ

ವಿಜಯಪುರ: ‘ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರನ್ನು ಬಂಧಿಸಿ, ವಿಚಾರಣೆಗೊಳಪಡಿಸಬೇಕು’ ಎಂದು ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಗ್ರಹಿಸಿದರು.

‘ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಲು ಶ್ರೀರಾಮಸೇನೆ ಕುಮ್ಮಕ್ಕು ನೀಡುತ್ತಿದೆ. ಸನಾತನ ಸಂಸ್ಥೆಯೂ ಇದಕ್ಕೆ ಸಾಥ್ ನೀಡುತ್ತಿದೆ. ಗೌರಿ ಕೊಲೆಯಲ್ಲಿ ಈ ಸಂಘಟನೆಗಳ ಜತೆ ಗುರುತಿಸಿಕೊಂಡಿರುವವರ ಪಾತ್ರ ಈಗಾಗಲೇ ಸಾಬೀತಾಗಿದ್ದು, ಹೆಚ್ಚಿನ ಅನಾಹುತ ತಡೆಗಟ್ಟಲು ಸೇನೆ ನಿಷೇಧಿಸುವ ಕ್ರಮವನ್ನು ಜರೂರಾಗಿ ಕೈಗೊಳ್ಳಬೇಕು’ ಎಂದು ಗಣಿಹಾರ ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‘ಶ್ರೀರಾಮಸೇನೆ ಜಮಖಂಡಿ, ಅಥಣಿಯಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಗಳಿಂದ ಯುವಕರಿಗೆ ಬಂದೂಕಿನ ತರಬೇತಿ ಕೊಡಿಸಿದೆ. ಸಿಂದಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿದ ಪ್ರಕರಣವನ್ನು ಆಗಿನ ವಿಜಯಪುರ ಜಿಲ್ಲಾ ಎಸ್‌ಪಿ ಡಿ.ಸಿ.ರಾಜಪ್ಪ ಕೈಬಿಡದಿದ್ದರೆ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಂಡಿದ್ದರೆ, ಗೌರಿ ಹತ್ಯೆ ನಡೆಯುತ್ತಿರಲಿಲ್ಲ. ಸೇನೆಗೆ ಪೊಲೀಸರ ಸಹಕಾರವಿರುವುದರಿಂದಲೇ ಇಂತಹ ಘಟನೆ ನಡೆದಿದೆ’ ಎಂದು ದೂರಿದರು.

‘ಪರಶುರಾಮ ವಾಘ್ಮೋರೆ ಭೇಟಿಗಾಗಿ ಎಸ್‌ಐಟಿ ಪೊಲೀಸರು ಆತನ ತಂದೆಗೆ ಅವಕಾಶ ನೀಡಿದ್ದಾರೆ. ಇದೇ ಕೃತ್ಯವನ್ನು ಮುಸ್ಲಿಂ ಯುವಕ ನಡೆಸಿದ್ದರೆ ಇಂತಹ ಅವಕಾಶವನ್ನು ಕೊಡುತ್ತಿದ್ದರೇ? ಪೊಲೀಸರು ಸಹ ಒಬ್ಬರಿಗೊಂದು ನ್ಯಾಯ, ಮತ್ತೊಬ್ಬರಿಗೊಂದು ನ್ಯಾಯ ಅನುಸರಿಸುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಾಘ್ಮೋರೆ ಪರ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ಈತ ದೇಶದ್ರೋಹಿ ಎಂಬುದು ಹಿಂದಿನ ಪ್ರಕರಣದಲ್ಲೇ ಸಾಬೀತಾಗಿರುವುದನ್ನು ಪೊಲೀಸರು ಮರೆತಂತಿದೆ’ ಎಂದು ಗಂಭೀರ ಆರೋಪ ಮಾಡಿದರು.

‘ಇಂತಹವರಿಂದಲೇ ಹಿಂದೂ ಧರ್ಮಕ್ಕೆ ಅಪಚಾರ. ಎಲ್ಲಿಯೂ ಧರ್ಮ ಉಳಿವಿಗಾಗಿ ಕೊಲೆ ಮಾಡು ಎಂದು ಹೇಳಿಲ್ಲ. ಹಿಂದೂ ಧರ್ಮದ ತತ್ವಗಳಿಗೆ ತಿಲಾಂಜಲಿ ನೀಡಿ, ಮಸಿ ಬಳಿಯುವ ಕೃತ್ಯ ನಡೆಯುತ್ತಿದೆ. ಇಂತಹವರನ್ನು ಹಿಂದೂ ಧರ್ಮೀಯರೇ ನಿರ್ಬಂಧಿಸಿ, ನಿಷೇಧಿಸಲು ಮುಂದಾಗಬೇಕು’ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !