ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಿಯಾಯೋಜನೆ: ಸಚಿವ

ಕೋಟೆಬೆಟ್ಟದ ಕಂಬದ ನರಸಿಂಹಸ್ವಾಮಿ ಮತ್ತು ವೆಂಕಟರಮಣಸ್ವಾಮಿ ದೇಗುಲಕ್ಕೆ ಭೇಟಿ, ಪೂಜೆ
Last Updated 16 ಜೂನ್ 2018, 9:59 IST
ಅಕ್ಷರ ಗಾತ್ರ

ನಾಗಮಂಗಲ: ರಾಜ್ಯದ ಪ್ರಮುಖ 20 ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.

ತಾಲ್ಲೂಕಿನ ಕೋಟೆಬೆಟ್ಟದ ಕಂಬದ ನರಸಿಂಹಸ್ವಾಮಿ ಮತ್ತು ವೆಂಕಟರಮಣಸ್ವಾಮಿ ದೇವರಿಗೆ ಶುಕ್ರವಾರ ಪೂಜೆ ಸಲ್ಲಿಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತೇನೆ’ ಎಂದರು.

ಪ್ರವಾಸಿ ತಾಣಗಳಲ್ಲಿ ಕುಡಿಯುವ ನೀರು, ಸುಸಜ್ಜಿತ ಶೌಚಾಲಯ, ಉತ್ತಮ ರಸ್ತೆಗಳ ಅಭಿವೃದ್ಧಿ ಆಗಬೇಕು. ಆಗಷ್ಟೇ ಪ್ರವಾಸೋದ್ಯಮಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತದೆ. ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪಟ್ಟಣದಿಂದ ಕೋಟೆ ಬೆಟ್ಟಕ್ಕೆ ಬರುವ ಡಾಂಬರ್‌ ರಸ್ತೆ ಹಾಳಾಗಿದ್ದು ಕೇವಲ 3.5 ಮೀಟರ್ ಅಗಲವಿದೆ. ಅದನ್ನು 5 ಮೀಟರ್ ಅಗಲಕ್ಕೆ ವಿಸ್ತರಿಸುವುದು, ವೆಂಕಟಮರಣ ಸ್ವಾಮಿ ದೇವಾಲಯಕ್ಕೆ ಹೋಗುವ ಮೆಟ್ಟಿಲುಗಳು ಹಾಳಾಗಿದ್ದು, ಅದನ್ನು ಸರಿಪಡಿಸಲು ವಿಶೇಷ ಮಹತ್ವ ನೀಡಬೇಕು. ಕೂಡಲೇ ಒಂದು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

₹ 5 ಕೋಟಿಯನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡುವಂತೆ ಶಾಸಕ ಸುರೇಶಗೌಡರು ಹಿಂದೆ ಕೋರಿದ್ದರು. ಅದಕ್ಕೆ ಈಗಾಗಲೇ ₹ 2 ಕೋಟಿ ಬಿಡುಗಡೆಯಾಗಿ ಕೆಲಸ ಮುಕ್ತಾಯದ ಹಂತದಲ್ಲಿದೆ. ಉಳಿದ ಕೆಲಸಗಳಿಗಾಗಿ ಇನ್ನು ₹ 3 ಕೋಟಿ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದರು.

ಶ್ರೀರಂಗಪಟ್ಟಣದ ಬಹು ನಿರೀಕ್ಷಿತ ಧ್ವನಿ–ಬೆಳಕು ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ‘ಅಲ್ಲಿಯ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

‘ನನ್ನ ಮತ್ತು ಭವಾನಿ ರೇವಣ್ಣ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಮ್ಮ ಕ್ಷೇತ್ರ ಮತ್ತು ಹೊಳೆನರಸೀಪುರ ಕ್ಷೇತ್ರ ಎರಡೂ ಒಂದಕ್ಕೊಂದು ಸನಿಹದಲ್ಲಿವೆ. ನಮ್ಮ ಕಾರ್ಯಕರ್ತರು ಕೆಲವು ಅಭಿಪ್ರಾಯಗಳನ್ನು ಅವರೊಂದಿಗೆ ಹಂಚಿಕೊಳ್ಳುತ್ತಾರೆ, ಅಷ್ಟೇ. ಬೇರೇನಿಲ್ಲ’ ಎಂದು ಹೇಳಿದರು.

ನಂತರ ಕೋಟೆಬೆಟ್ಟದ ತಪ್ಪಲಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣ ಹಂತದಲ್ಲಿರುವ ಯಾತ್ರಿ ನಿವಾಸದ ಕಟ್ಟಡವನ್ನು ಪರಿಶೀಲಿಸಿದರು.

ಇಲ್ಲಿಗೆ ಬರುವ ಮುನ್ನ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಸಚಿವರಿಗೆ ಕಂಬದ ನರಸಿಂಹಸ್ವಾಮಿ ಸೇವಾಟ್ರಸ್ಟ್‌ನ ಅಧ್ಯಕ್ಷ ತಟ್ಟಳ್ಳಿ ನರಸಿಂಹಮೂರ್ತಿ ಸೇರಿದಂತೆ ಪದಾಧಿಕಾರಿಗಳು ಪೂರ್ಣಕುಂಭ ಸ್ವಾಗತ ನೀಡಿದರು.

ಶಾಸಕ ಸುರೇಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಅಪ್ಪಾಜಿಗೌಡ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮು, ಪಾಂಡವಪುರ ಉಪವಿಭಾಗಾಧಿಕಾರಿ ಆರ್.ಯಶೋದಾ, ತಹಶೀಲ್ದಾರ್ ನಂಜುಂಡಯ್ಯ, ಜೆಡಿಎಸ್ ತಾಲ್ಲೂಕು ಘಟಕ ಅಧ್ಯಕ್ಷ ಜವರೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ದಾಸೇಗೌಡ, ಸದಸ್ಯರಾದ ಹೇಮರಾಜು, ವಿದ್ಯಾಶ್ರೀ ಪ್ರವೀಣ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ರುಕ್ಮಿಣಿ ಶಂಕರ್, ಡಿ.ಕೆ.ಶಿವಪ್ರಕಾಶ್, ಮುತ್ತಣ್ಣ, ಮುಖಂಡರಾದ ಎ.ಜಿ.ಶ್ರೀನಿವಾಸ್, ಎನ್.ವೈ.ಎಲ್ಲೇಗೌಡ, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಟ್ರಸ್ಟ್‌ ಖಜಾಂಚಿ ಎಚ್.ಸಿ.ರಾಜಣ್ಣ, ಕಾರ್ಯದರ್ಶಿ ಗೋವಿಂದರಾಜು, ನಿರ್ದೇಶಕರಾದ ಶಿವರಾಮು, ಪುಟ್ಟರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT