ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷವಾಗುತ್ತಿದೆ ಉಸಿರಾಡುವ ಗಾಳಿ

Last Updated 4 ಜೂನ್ 2019, 20:23 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನಗರಗಳು ಅಭಿವೃದ್ಧಿ ಪಥದತ್ತ ಸಾಗುತ್ತಿವೆ ಎಂಬ ಹೆಮ್ಮೆ ಒಂದೆಡೆಯಾದರೆ, ಉಸಿರಾಡುವ ಗಾಳಿಯು ವಿಷವಾಗಿ ಪರಿಣಮಿಸುತ್ತಿದೆ ಎಂಬ ಭಯ ಮತ್ತೊಂದೆಡೆ.

ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವಾಯು ಮಾಲಿನ್ಯದ ಪ್ರಮಾಣ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಹೆಚ್ಚುತ್ತಿದ್ದು, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕಾರಿ ಸಂಗತಿ.

ಜನಸಂಖ್ಯೆ ಜೊತೆಗೆ ರಸ್ತೆಗಿಳಿಯುತ್ತಿರುವ ವಾಹನಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಹೊಗೆ ಉಗುಳುವ ವಾಹನಗಳು, ವಿಷಕಾರಿ ಅನಿಲ ಬಿಡುಗಡೆ ಮಾಡುವ ಕೈಗಾರಿಕೆಗಳು, ಧೂಳಿನ ಕಣಗಳು, ಗಣಿಗಾರಿಕೆ... ಹೀಗೆ ಹಲವು ಕಾರಣಗಳಿಂದ ಗಾಳಿಯು ಕಲುಷಿತಗೊಳ್ಳುತ್ತಿದೆ.

ಬೆಂಗಳೂರಿನ ಸಿಲ್ಕ್‌ಬೋರ್ಡ್‌ ಜಂಕ್ಷನ್, ಯಲಹಂಕದ ರೈಲ್ವೆ ಚಕ್ರ ಕಾರ್ಖಾನೆ, ಪೀಣ್ಯ ಕೈಗಾರಿಕಾ ಪ್ರದೇಶ, ಮೈಸೂರು ರಸ್ತೆಯ ಎಎಂಸಿಒ ಬ್ಯಾಟರೀಸ್ ರಸ್ತೆಗಳು ಅತಿ ಹೆಚ್ಚು ವಾಯು ಮಾಲಿನ್ಯವುಳ್ಳ ರಸ್ತೆಗಳಾಗಿವೆ ಎಂಬುದನ್ನು ಮಾಲಿನ್ಯ ನಿಯಂತ್ರಣ ಮಂಡಳಿಯೇ ಒಪ್ಪಿಕೊಳ್ಳುತ್ತದೆ. ಇಂಥ ಮಾಲಿನ್ಯದಿಂದಾಗಿ ಶ್ವಾಸಕೋಶ ಹಾಗೂ ಹೃದಯ ಸಂಬಂಧಿ ಕಾಯಿಲೆ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಮಕ್ಕಳೇ ಇಂಥ ಕಾಯಿಲೆಗಳಿಗೆ ಹೆಚ್ಚು ತುತ್ತಾಗುತ್ತಿದ್ದಾರೆ.

ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 2018ರಲ್ಲಿ ಬಿಡುಗಡೆ ಮಾಡಿದ್ದ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಪುಣೆ ಮೊದಲ ಸ್ಥಾನ ಹಾಗೂ ಬೆಂಗಳೂರು ನಗರ ಎರಡನೇ ಸ್ಥಾನ ಪಡೆದಿತ್ತು.

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬೃಹತ್‌ ಕೈಗಾರಿಕೆಗಳು, ಡೀಸೆಲ್‌ ಆಧರಿತ ಜನರೇಟರ್‌ಗಳು, ಧೂಳಿನಿಂದ ಕೂಡಿದ ರಸ್ತೆಗಳು ಹಾಗೂ ಮಿತಿಮೀರಿದ ವಾಹನಗಳ ಬಳಕೆ ವಾಯು ಮಾಲಿನ್ಯ ವಿಪರೀತವಾಗಿದೆ ಮಂಡಳಿ ಅಭಿಪ್ರಾಯಪಟ್ಟಿತ್ತು.

ಹೆಚ್ಚು ಹೊಗೆ ಉಗಳುವ 2 ಸ್ಟ್ರೋಕ್ ಆಟೊ ಹಾಗೂ 15 ವರ್ಷಗಳ ಹಳೆ ವಾಹನಗಳನ್ನು ಓಡಾಟವನ್ನು ನಿಷೇಧಿಸುವ ಬಗ್ಗೆ ಸಾರಿಗೆ ಇಲಾಖೆ ನಿರ್ಧಾರ ಕೈಗೊಂಡಿತ್ತು. ಅದಕ್ಕೆ ವಿರೋಧಗಳು ವ್ಯಕ್ತವಾಗಿದ್ದರಿಂದ ಆ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತವಾಯಿತು.

ರಾಜಧಾನಿ ಹೊರತುಪಡಿಸಿದರೆ ಕ್ರಮವಾಗಿ ಬೆಳಗಾವಿ, ಬೀದರ್ ಹಾಗೂ ವಿಜಯಪುರ ಹೆಚ್ಚು ವಾಯು ಮಾಲಿನ್ಯವುಳ್ಳ ನಗರಗಳಾಗಿವೆ.

ಫಲ ನೀಡದ ಯೋಜನೆಗಳು: ಸಮರ್ಥ ಎಂಜಿನ್, ಉತ್ತಮ ಗುಣಮಟ್ಟದ ಇಂಧನ, ಸೀಸ– ರಹಿತ ಪೆಟ್ರೋಲ್‌, ನೈಸರ್ಗಿಕ ಅನಿಲ ಬಳಕೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಯಿಂದ ವಾಯು ಮಾಲಿನ್ಯ ನಿಯಂತ್ರಿಸಬಹುದು. ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವು ಯೋಜನೆಗಳು ಜಾರಿಗೆ ತರುತ್ತಿದ್ದು, ಅವುಗಳು ಫಲ ನೀಡುತ್ತಿಲ್ಲ.

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಸಹ ವಾಯು ಮಾಲಿನ್ಯದ ಬಗ್ಗೆ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿತ್ತು. ಹೀಗಾಗಿಯೇ ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ರಿಯಾಯೋಜನೆ ಸಿದ್ಧಪಡಿಸಿ ಕೆಲಸ ಶುರು ಮಾಡಿದೆ. ಸಾರ್ವಜನಿಕ ಸಾರಿಗೆ, ಸೈಕಲ್ ಹಾಗೂ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ವಾಯು ಗುಣಮಟ್ಟ ನಿಯಂತ್ರಣ ವಲಯಗಳನ್ನೂ ಸ್ಥಾಪಿಸುತ್ತಿದೆ. ಅಷ್ಟಾದರೂ ತೃಪ್ತಿಕರ ಫಲಿತಾಂಶ ಸಿಗುತ್ತಿಲ್ಲ.

‘ಸಂಚಾರ ದಟ್ಟಣೆ ಹೆಚ್ಚಾದಂತೆ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಬೆಂಗಳೂರಿನ ಸ್ಥಿತಿ ಸಹ ತೀವ್ರ ಹದಗೆಡುತ್ತಿದೆ. ಸಮಸ್ಯೆ ಏನು ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲ. ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ ಮಾಲಿನ್ಯ ನಿಯಂತ್ರಣ ಆಗುತ್ತಿಲ್ಲ’ ಎಂದು ‘ಎಪಿಡಿ ಫೌಂಡೇಶನ್‌’ನ ಸಂಸ್ಥಾಪಕ ಅಬ್ದುಲ್ ಎ. ರೆಹಮಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿತ್ಯವೂ ಕೆಲಸಕ್ಕೆ ಹೋಗುವ ಹಾಗೂ ಸಂಚಾರ ಪೊಲೀಸರೇ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಮಾಲಿನ್ಯವುಳ್ಳ ರಸ್ತೆಗಳಲ್ಲಿ ಚೀನಾ ಮಾದರಿಯಲ್ಲಿ ಗಾಳಿ ಶುದ್ಧೀಕರಣ ಯಂತ್ರಗಳನ್ನು ಅಳವಡಿಸಬೇಕು. ಸಾಧ್ಯವಾದರೆ ಬಹುಮಹಡಿ ಕಟ್ಟಡಗಳಲ್ಲೂ ಅಂಥ ಯಂತ್ರಗಳನ್ನು ಅಳವಡಿಸುವಂತೆ ಸೂಚನೆ ನೀಡಬೇಕು. ವಾಹನಗಳ ನೋಂದಣಿ ಹಾಗೂ ಹೆಚ್ಚು ಹೊಗೆ ಉಗುಳುವ ವಾಹನಗಳನ್ನು ನಿಷೇಧಿಸಬೇಕು. ಮರಗಳ ಸಂರಕ್ಷಣೆ ಮುಂದಾಗಬೇಕು’ ಎಂದು ಹೇಳಿದರು.

ವಾಯು ಮಾಲಿನ್ಯ ತಡೆಗೆ ಏನು ಮಾಡಬೇಕು

ವೈಯಕ್ತಿಕವಾಗಿ

* ಸಾಂಪ್ರದಾಯಿಕ ಸ್ಟೌ ಬದಲು ಎಲ್‌ಪಿಜಿ, ಸೋಲಾರ್ ಬಳಸಿ

* ಮನೆಯಲ್ಲಿ ಹೆಚ್ಚು ಗಾಳಿಯಾಡುವಂತೆ ನೋಡಿಕೊಳ್ಳಿ

* ಹೆಚ್ಚೆಚ್ಚು ಸಸಿಗಳನ್ನು ನೆಡಿ

* ಸಾರ್ವಜನಿಕ ಸಾರಿಗೆ ಬಳಸಿ

* ಎಲ್ಲೆಂದರಲ್ಲಿ ತ್ಯಾಜಕ್ಕೆ ಬೆಂಕಿ ಹಚ್ಚುವುದನ್ನು ಬಂದ್ ಮಾಡಿ

ಸರ್ಕಾರದ ಮಟ್ಟದಲ್ಲಿ

* ಮಾಲಿನ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ

*‌ ಹೆಚ್ಚು ಮಾಲಿನ್ಯ ಮಾಡುವವರಿಗೆ ಹೆಚ್ಚು ದಂಡ ವಿಧಿಸಿ

* ಮಾಲಿನ್ಯ ತಡೆ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು

* ಮಾಲಿನ್ಯ ತಡೆಗೆ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನೀತಿ ನಿರೂಪಕರ ಸಮನ್ವಯ ಸಾಧಿಸಬೇಕು

* ಮಾಲಿನ್ಯ ಮಾಲಿನ್ಯ ಗುಣಮಟ್ಟ ಕೇಂದ್ರಗಳ ಮೇಲೆ ನಿಗಾ ವಹಿಸಬೇಕು

* ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸಬೇಕು

* ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ಮಾಡಬೇಕು

* ಇಂಧನ ಹಾಗೂ ಹೊಗೆ ನಿಯಮಗಳನ್ನು ಕಠಿಣಗೊಳಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT