ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣದ ಅಭಿವೃದ್ಧಿಗಾಗಿ ಪ್ರಯಾಣಿಕರಿಗೆ ಬರೆ

ವಿಮಾನ ಬಳಕೆದಾರರ ಶುಲ್ಕ ಶೇ 112ರಷ್ಟು ಹೆಚ್ಚಳ * ಇಂದಿನಿಂದಲೇ ಜಾರಿ * ಆದೇಶ ಪ್ರಶ್ನಿಸಲು ‘ಎಯುಸಿಸಿ’ ಸದಸ್ಯರ ನಿರ್ಧಾರ
Last Updated 16 ಏಪ್ರಿಲ್ 2019, 2:45 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಅಭಿವೃದ್ಧಿ ಕೆಲಸಗಳಿಗೆ ಹಣ ಹೊಂದಿಸಲು ಬಳಕೆದಾರರ ಶುಲ್ಕವನ್ನು ಶೇ 112ರಷ್ಟು ಹೆಚ್ಚಳ ಮಾಡಲಾಗಿದ್ದು, ಆ ಮೂಲಕ ಪ್ರಯಾಣಿಕರಿಗೆ ಬರೆ ಎಳೆಯಲಾಗಿದೆ.

ಚಾಲ್ತಿಯಲ್ಲಿದ್ದ ಬಳಕೆದಾರರ ಶುಲ್ಕದ ಆದೇಶವನ್ನು ತಿದ್ದುಪಡಿ ಮಾಡಿ ಹೊಸ ಆದೇಶ ಹೊರಡಿಸಿರುವ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ),‘ಏಪ್ರಿಲ್ 16ರಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ’ ಎಂದು ಹೇಳಿದೆ.

‘ಮುಂದಿನ ನಾಲ್ಕು ತಿಂಗಳವರೆಗೆ (ಆಗಸ್ಟ್ 15ರವರೆಗೆ) ಈ ಪರಿಷ್ಕೃತ ಶುಲ್ಕ ಜಾರಿಯಲ್ಲಿ ಇರಲಿದೆ.ಅದಾದ ನಂತರ, ಹಳೇ ಶುಲ್ಕವೇ ಮುಂದುವರಿಯಲಿದೆ’ ಎಂದು ಪ್ರಾಧಿಕಾರದ ಆದೇಶದಲ್ಲಿ ತಿಳಿಸಲಾಗಿದೆ.

ಕೆಐಎ ಪ್ರಸ್ತಾವಕ್ಕೆ ಒಪ್ಪಿಗೆ: ‘ಕಳೆದ ವರ್ಷ ಬಳಕೆದಾರರ ಶುಲ್ಕವನ್ನು ದಿಢೀರ್ ಇಳಿಕೆ ಮಾಡಿದ್ದನ್ನು ಕೆಐಎ ಆಡಳಿತ ಮಂಡಳಿ ಪ್ರಶ್ನಿಸಿತ್ತು. ಶುಲ್ಕ ಹೆಚ್ಚಳ ಮಾಡುವಂತೆಯೂ ಪ್ರಾಧಿಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

‘ವಿಮಾನ ನಿಲ್ದಾಣದ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಎರಡನೇ ರನ್‌ವೇ ಹಾಗೂ ಟರ್ಮಿನಲ್ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ಅದಕ್ಕೆ ಹಣದ ಅವಶ್ಯಕತೆ ಇದೆ. ಹೀಗಾಗಿ, ಬಳಕೆದಾರರ ಶುಲ್ಕ ಹೆಚ್ಚಳ ಮಾಡಿ’ ಎಂದು ಕೋರಿತ್ತು.

ಆ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರುವ ಎಇಆರ್‌ಎ, ಈಗ ಹೊಸ ಆದೇಶ ಹೊರಡಿಸಿದೆ.

2018ರ ಸೆಪ್ಟೆಂಬರ್‌ಗೂ ಮುನ್ನ ಬಳಕೆದಾರರ ಶುಲ್ಕ ಹೆಚ್ಚಿತ್ತು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಏರ್‌ಲೈನ್ಸ್ ಬಳಕೆದಾರರ ಸಲಹಾ ಸಮಿತಿಯ (ಎಯುಸಿಸಿ) ಕೆಲ ಸದಸ್ಯರು, ಶುಲ್ಕ ಇಳಿಕೆ ಮಾಡುವಂತೆ ಒತ್ತಾಯಿಸಿದ್ದರು. ಅವರ ಆಗ್ರಹಕ್ಕೆ ಮಣಿದಿದ್ದ ಪ್ರಾಧಿಕಾರ, ಶುಲ್ಕವನ್ನು ಶೇ 54ರಷ್ಟು ಇಳಿಕೆ ಮಾಡಿತ್ತು. ಅದೇ ದರವೇ ಸದ್ಯ ಚಾಲ್ತಿಯಲ್ಲಿತ್ತು. ಈಗ ಅದೇ ಪ್ರಾಧಿಕಾರ,ದೇಶೀಯ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಬಳಕೆದಾರರ ಶುಲ್ಕವನ್ನು ಹೆಚ್ಚಿಸಿದೆ.

ಶುಲ್ಕ ಹೆಚ್ಚಳಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಯುಸಿಸಿ ಕೆಲ ಸದಸ್ಯರು, ‘ಪ್ರಾಧಿಕಾರದ ಆದೇಶವನ್ನು ಪ್ರಶ್ನಿಸಿ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ. ಕೆಲವೇ ದಿನಗಳಲ್ಲಿ ನಡೆಯಲಿರುವ ಸಮಿತಿಯ ಸಭೆಯಲ್ಲೂ ಆ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಪ್ರಯಾಣಿಕರಿಗೆ ಹೊರೆ: ‘ಒಂದೇ ಬಾರಿಗೆ ಶೇ 112ರಷ್ಟು ಶುಲ್ಕ ಹೆಚ್ಚಳ ಮಾಡಿರುವುದು ಅವೈಜ್ಞಾನಿಕ. ಇಂಥ ತೀರ್ಮಾನ ಪ್ರಯಾಣಿಕರಿಗೆ ಆರ್ಥಿಕ ಹೊರೆಯನ್ನುಂಟು ಮಾಡಲಿದೆ’ ಎಂದು ಪ್ರಯಾಣಿಕ ಗೌರವ್‌ ಎಂಬುವರು ಟ್ವೀಟ್‌ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಈ ಹಿಂದೆಯೂ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಅದಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಶೇ 54ರಷ್ಟು ಶುಲ್ಕ ಇಳಿಕೆ ಮಾಡಲಾಗಿತ್ತು. ಆದರೆ, ಈಗ ನಿಲ್ದಾಣದ ಅಭಿವೃದ್ಧಿಗಾಗಿ ಪ್ರಯಾಣಿಕರಿಂದ ಹಣ ವಸೂಲಿ ಮಾಡುತ್ತಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

ರಂಜನ್ ದಾಸ್ ಎಂಬುವರು, ‘ಶುಲ್ಕ ಹೆಚ್ಚಳಕ್ಕೂ ಮುನ್ನ ಪ್ರಯಾಣಿಕರ ಅಭಿಪ್ರಾಯ ಪಡೆಯಬೇಕು. ಅದನ್ನು ಬಿಟ್ಟು ದಿಢೀರ್ ಶುಲ್ಕ ಹೆಚ್ಚಳ ಮಾಡಿರುವುದು ಪ್ರಯಾಣಿಕರಿಗೆ ಅನ್ಯಾಯ ಮಾಡಿದಂತೆ’ ಎಂದು ದೂರಿದ್ದಾರೆ.

ಹಳೇ ಶುಲ್ಕ; ಪರಿಷ್ಕೃತ ಶುಲ್ಕ

ದೇಶೀಯ; ₹139;₹306

ಅಂತರರಾಷ್ಟ್ರೀಯ; ₹558; ₹1,226

ದೇಶದ ವಿವಿಧ ನಿಲ್ದಾಣಗಳ ಬಳಕೆದಾರರ ಶುಲ್ಕ

ನಿಲ್ದಾಣ;ದೇಶೀಯ;ಅಂತರರಾಷ್ಟ್ರೀಯ

ಚೆನ್ನೈ;166;667

ಲಖನೌ;145;422

ಮುಂಬೈ;274;548

ಹೈದರಾಬಾದ್;430;1,700

ಕೊಲ್ಕತ್ತಾ;449;1,124

ಟಿಕೆಟ್ ದರ ಹೆಚ್ಚಳ

ಬಳಕೆದಾರರ ಶುಲ್ಕ ಹೆಚ್ಚಳ ದಿಂದಾಗಿ ವಿಮಾನ ಪ್ರಯಾಣದ ಟಿಕೆಟ್ ದರವೂ ಹೆಚ್ಚಾಗಲಿದೆ.

ಟಿಕೆಟ್ ಬುಕ್ಕಿಂಗ್ ವೇಳೆಯೇ ಬಳಕೆದಾರರ ಶುಲ್ಕವನ್ನು ಕಡಿತಗೊಳಿಸಲಾಗುತ್ತದೆ. ಸದ್ಯ ಶುಲ್ಕ ಕಡಿಮೆ ಇದ್ದಿದ್ದರಿಂದ ಟಿಕೆಟ್ ದರ ಕಡಿಮೆ ಇತ್ತು. ಶುಲ್ಕ ಹೆಚ್ಚಾಗಿರುವುದರಿಂದ ಟಿಕೆಟ್ ದರ ಜಾಸ್ತಿ ಆಗಲಿದೆ.

‘ಶುಲ್ಕದ ಹಣ ಅಭಿವೃದ್ಧಿ ಕೆಲಸಗಳಿಗೆ ಬಳಕೆ’

‘ದರ ಪರಿಷ್ಕರಣೆಯನ್ನು ಸ್ವಾಗತಿಸುತ್ತೇವೆ. ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಪ್ರತ್ಯೇಕ ಖಾತೆ ತೆರೆಯಲಾಗುವುದು. ಆ ಹಣವನ್ನು ನಿಲ್ದಾಣದ ಅಭಿವೃದ್ಧಿಗೆ ಮಾತ್ರ ಬಳಸಲಾಗುವುದು’ ಎಂದು ಕೆಐಎ ಸಿಇಒ ಹರಿ ಮಾರರ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ನಿಲ್ದಾಣದಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ₹ 13,000 ಕೋಟಿ ಮೊತ್ತದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಇಂಥ ಕೆಲಸಕ್ಕೆ ಬಳಕೆದಾರರ ಶುಲ್ಕದ ಹಣವು ನೆರವಾಗಲಿದೆ’ ಎಂದಿದ್ದಾರೆ. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT