ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಮಾಧ್ವ ಮಹಾಸಭಾಕ್ಕೆ ಚಾಲನೆ

ಪೇಜಾವರ, ಉತ್ತರಾದಿ, ವ್ಯಾಸರಾಜ ಮಠದ ಸ್ವಾಮೀಜಿಗಳಿಂದ ಉದ್ಘಾಟನೆ
Last Updated 25 ಏಪ್ರಿಲ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಅಖಿಲ ಕರ್ನಾಟಕ ಮಾಧ್ವ ಮಹಾಸಭಾಕ್ಕೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಗುರುವಾರ ಚಾಲನೆ ನೀಡಿದರು.

‘ಮಾಧ್ವ ಮಹಾಸಭಾವು ಬ್ರಾಹ್ಮಣ ಮಹಾಸಭಾದ ವಿರೋಧಿ ವೇದಿಕೆಯಲ್ಲ,ವಿಘಟಕ ಸಮೂಹವಲ್ಲ. ಪೂರಕ ವೇದಿಕೆ. ಇದರಲ್ಲಿ ಗೌಡ ಸಾರಸ್ವತ ಬ್ರಾಹ್ಮಣರೂ ಸದಸ್ಯತ್ವ ಪಡೆದುಕೊಳ್ಳಬೇಕು’ ಎಂದು ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

‘ಹಿಂದೂಗಳಲ್ಲಿ ಬ್ರಾಹ್ಮಣರಿದ್ದಾರೆ, ಬ್ರಾಹ್ಮಣರಲ್ಲಿ ಮಾಧ್ವರಿದ್ದಾರೆ. ಒಂದು ದೇವಸ್ಥಾನಕ್ಕೆ ಹೊರಾಂಗಣದಲ್ಲಿ ಹಾಗೂ ಒಳಾಂಗಣದಲ್ಲಿ ಪ್ರದಕ್ಷಿಣೆ ಪಥಗಳು ಇರುವಂತೆ, ವೈದಿಕರಲ್ಲಿ ಈ ಮಹಾಸಭಾಗಳು ಕಾರ್ಯನಿರ್ವಹಿಸಬೇಕು’ ಎಂದು ಆಶಿಸಿದರು.

‘ಅಮೃತಕ್ಕಾಗಿ ದೇವ–ದಾನವರು ಒಂದಾದಂತೆ, ವೈದಿಕ ಧರ್ಮ ರಕ್ಷಣೆಗಾಗಿ ನಾವೆಲ್ಲ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎಂಬ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಮಾಧ್ವರು ಮಾತ್ರವಲ್ಲದೆ ಮಾಧ್ವ ಮಠ, ಸಂಘಟನೆಗಳು ಒಂದಾಗಿ ಸುವರ್ಣಯುಗ ನಿರ್ಮಿಸಲು ಸಹಕರಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.

‘ಮಾಧ್ವ ಮಹಾಸಭಾವು ಭಕ್ತಿ, ಜ್ಞಾನ ಪ್ರಸಾರ ಹಾಗೂ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಜನಜನಿತವಾಗಲಿ. ದೇಶ ಕಲ್ಯಾಣಕ್ಕೆ ಕೊಡಗೆ ನೀಡಲಿ’ ಎಂದು ಹಾರೈಸಿದರು.

ವ್ಯಾಸರಾಜ ಮಠದ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ, ‘ಸಮಾಜದಲ್ಲಿ ಮಾಧ್ವರು ಅಲ್ಪಸಂಖ್ಯೆಯಲ್ಲಿದ್ದಾರೆ. ರಾಜಕೀಯ ಬಲ ಕೊಡುವ ಶಕ್ತಿಯಿಲ್ಲ. ಹಾಗಂತ ಸುಮ್ಮನೆ ಕೂರದೆ, ದೇಶ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು’ ಎಂದರು.

‘ಇಂದು ಧರ್ಮಶ್ರದ್ಧೆ, ಸಂಸ್ಕಾರ ಶಿಕ್ಷಣ ಮರೆಯಾಗುತ್ತಿದೆ. ಹಿಂದೂಗಳೇ ಕೇಂಬ್ರಿಡ್ಜ್‌ ಸ್ಕೂಲ್‌ ಎಂಬ ಆಕರ್ಷಕ ಹೆಸರಿಟ್ಟು, ಮಕ್ಕಳಿಗೆ ದುಷ್ಟ ಸಂಸ್ಕಾರ ಕೊಡುತ್ತಿದ್ದಾರೆ. ಸಮುದಾಯದಿಂದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆ ಸ್ಥಾಪನೆಗೆ ಆದ್ಯತೆ ನೀಡಬೇಕು. ಅಲ್ಲಿ ಧರ್ಮಶ್ರದ್ಧೆಯ ಶಿಕ್ಷಣ ಸಿಗುವಂತಾಗಬೇಕು. ಆಗ ಎರಡು–ಮೂರು ವರ್ಷಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದು’ ಎಂದು ಹೇಳಿದರು.

‘ಸಮುದಾಯ ಒಟ್ಟಿಗೆ ಸೇರಿದಾಗಲೇ ದೊಡ್ಡ ಕೆಲಸಗಳು ಆಗುತ್ತವೆ. ಮಹಾಸಭಾವು ಸಮುದಾಯದ ಯುವಜನರು ಉನ್ನತ ಶಿಕ್ಷಣ ಹಾಗೂ ಉದ್ಯೋಗ ಪಡೆಯಲು ಸಹ ನೆರವಾಗಬೇಕು’ ಎಂದು ಅವರು ಸಲಹೆ ನೀಡಿದರು.

ಉತ್ತರಾದಿಮಠದ ಸತ್ಯಾತ್ಮತೀರ್ಥ ಸ್ವಾಮೀಜಿ, ‘ಬ್ರಾಹ್ಮಣ ಮಹಾಸಭಾ ಕಟ್ಟಿಕೊಂಡರೆ ಸಾಲದು, ಪ್ರತಿದಿನ ಸಂಧ್ಯಾವಂದನೆ, ಗಾಯತ್ರಿ ಉಪಾಸನೆ, ವೇದಾಧ್ಯಯನ, ಯಜ್ಞ–ಯಾಗಾದಿಗಳನ್ನು ಚೆನ್ನಾಗಿ ಮಾಡಿ ಬ್ರಾಹ್ಮಣ್ಯ ಉಳಿಸಿಕೊಳ್ಳಬೇಕು. ಹಣ, ವೇದಿಕೆ, ಮಾಧ್ಯಮಗಳಲ್ಲಿ ಪ್ರಚಾರದಿಂದ ಕಾರ್ಯ ಮಾಡಲು ಆಗಲ್ಲ. ಅಂತಃಸತ್ವದಲ್ಲಿ ಒಳಿತು ಮಾಡುವ ಹಂಬಲವಿದ್ದಾಗ ಕಾರ್ಯ ಮಾಡಲು ಬಲ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

*
ಹಿಂದುತ್ವವನ್ನು ರಾಜಕೀಯಕ್ಕಾಗಿ ಮಾತ್ರವಲ್ಲದೆ, ಪ್ರತಿಯೊಬ್ಬರು ತಮ್ಮತನ ಉದ್ಧಾರಕ್ಕೆ ಬಳಸಿಕೊಂಡರೆ ದೇಶವೇ ಉದ್ಧಾರವಾಗುತ್ತದೆ.
-ಸತ್ಯಾತ್ಮತೀರ್ಥ ಸ್ವಾಮೀಜಿ, ಉತ್ತರಾದಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT