ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲೆಮಾರಿ’ಗಳ ಸೋಗಿನಲ್ಲಿ ಪರಿಶಿಷ್ಟರ ಸವಲತ್ತು ದುರ್ಬಳಕೆ

ರಾಜ್ಯ ದಲಿತ ಪದವೀಧರರ ಸಂಘ ಕಳವಳ
Last Updated 13 ಜನವರಿ 2019, 16:40 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಸೇರಿದ ಕೆಲವು ಜಾತಿಯವರು ‘ಅಲೆಮಾರಿ ಜಾತಿ’ಗಳ ಸೋಗಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಸೌಲಭ್ಯವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯ ದಲಿತ ಪದವೀಧರರ ಸಂಘ ಕಳವಳ ವ್ಯಕ್ತಪಡಿಸಿದೆ.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ವರ್ಗಗಳ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಕೋಶವನ್ನು ಸಮಾಜ ಕಲ್ಯಾಣ ಇಲಾಖೆಯು ಡಾ.ಬಿ.ಆರ್‌.ಅಂಬೇಡ್ಕರ್‌ ನಿಗಮದಡಿ 2016ರಲ್ಲಿ ಆರಂಭಿಸಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 51 ಜಾತಿಗಳನ್ನು ಹಾಗೂ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿರುವ 23 ಜಾತಿಗಳನ್ನು ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳು ಎಂದು ಗುರುತಿಸಿದೆ.

‘ಜಾತಿಯ ಹೆಸರು ಹಾಗೂ ಪರಂಪರೆಯ ಸಾಮ್ಯತೆಗಳನ್ನೇ ದುರ್ಬಳಕೆ ಮಾಡಿಕೊಂಡು ಹಿಂದುಳಿದ ವರ್ಗಗಳ ಕೆಲವು ಜಾತಿಯವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸವಲತ್ತುಗಳನ್ನು ಕಸಿಯುತ್ತಿದ್ದಾರೆ’ ಎಂದು ಸಂಘದ ಅಧ್ಯಕ್ಷ ವಿ.ಲೋಕೇಶ್‌ ಬೇಸರ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬುಡುಗ ಜಂಗಮ, ಹಂದಿ ಜೋಗಿ, ಚೆನ್ನದಾಸರಿ, ಹೊಲೆಯ ದಾಸರಿ, ಸಿಳ್ಳೆಕ್ಯಾತ ಮುಂತಾದ ಜಾತಿಗಳನ್ನು ಅಲೆಮಾರಿ ಜಾತಿಗಳ ಪಟ್ಟಿಯಲ್ಲಿ ಗುರುತಿಸಿದ್ದಾರೆ. ಹಿಂದುಳಿದ ವರ್ಗಗಳ ಜಾತಿಗಳ ಪಟ್ಟಿಯಲ್ಲಿರುವ ಜೋಗಿ ಜಾತಿಯವರು ಹಂದಿ ಜೋಗಿ ಎಂದು, ದಾಸರಿ ಜಾತಿಯವರು ಚೆನ್ನದಾಸರಿ, ಹೊಲೆಯ ದಾಸರಿ ಎಂದು ಹಾಗೂ ಕಿಳ್ಳೆಕ್ಯಾತ ಜಾತಿಯವರು ಸಿಳ್ಳೆಕ್ಯಾತ ಎಂದು, ಬೈರಾಗಿ ಜಾತಿಯವರು ಬುಡುಗ ಜಂಗಮ ಎಂದು ಜಾತಿ ಪ್ರಮಾಣಪತ್ರ ಪಡೆದ ಅನೇಕ ಉದಾಹರಣೆಗಳಿವೆ’ ಎಂದು ತಿಳಿಸಿದರು.

ಸಮುದಾಯ ಅಭಿವೃದ್ಧಿ ಕೋಶವು ಸ್ವಯಂ ಉದ್ಯೋಗ ಯೋಜನೆ ಅಡಿ ಶೇ 70ರಷ್ಟು ಸಹಾಯಧನದೊಂದಿಗೆ ₹ 1 ಲಕ್ಷದವರೆಗೆ ಸಾಲ, ಉದ್ಯಮಶೀಲತಾ ಯೋಜನೆ ಅಡಿ ₹ 10 ಲಕ್ಷದವರೆಗೆ ಸಹಾಯಧನ ಸಹಿತ ಸಾಲ ನೀಡುತ್ತದೆ. ಅಲ್ಲದೇ ಭೂ ಒಡೆತನ, ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ, ಸ್ವಂತ ನಿವೇಶನವಿದ್ದವರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ಹಾಗೂ ಅಂಗವಿಕಲರಿಗೆ ನೆರವು ಒದಗಿಸುವ ಸಲುವಾಗಿ ಇತ್ತೀಚೆಗೆ ಅರ್ಜಿಗಳನ್ನು ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.

‘ಈ ಅಧಿಸೂಚನೆಯನ್ನು ರದ್ದು ಪಡಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿಗಳನ್ನು ‘ಅಲೆಮಾರಿಗಳು’ ಎಂದು ಗುರುತಿಸಿ ಈ ಸವಲತ್ತುಗಳನ್ನು ನೀಡುವ ಬದಲು ಪರಿಶಿಷ್ಟ ಜಾತಿಯವರಿಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಮೂಲಕ ಹಾಗೂ ಪರಿಶಿಷ್ಟ ಪಂಗಡದವರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಮೂಲಕ ನೇರವಾಗಿ ನೀಡಬೇಕು. ಇದರಿಂದ ಪರಿಶಿಷ್ಟರ ಸವಲತ್ತುಗಳು ದುರ್ಬಳಕೆ ಆಗುವುದನ್ನು ತಪ್ಪಿಸಬಹುದು’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎನ್.ರಘುಕುಮಾರ್‌ ತಿಳಿಸಿದರು.

**

‘ಪರಿಶಿಷ್ಟರನ್ನು ಅಲೆಮಾರಿ ಎಂದು ಗುರುತಿಸುವುದು ಕಾನೂನುಬಾಹಿರ’

‘ಸಂವಿಧಾನದ ಕಲಂ 341 ಮತ್ತು 342ರ ಉಪಬಂಧ 1ರ ಅಡಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜಾತಿಗಳನ್ನು ಬದಲಿಸುವುದಕ್ಕೆ ಅಥವಾ ಮಾರ್ಪಾಡು ಮಾಡುವುದಕ್ಕೆ ಯಾವುದೇ ರಾಜ್ಯ ಸರ್ಕಾರ, ನ್ಯಾಯಾಲಯ, ನ್ಯಾಯಮಂಡಳಿಅಥವಾ ಪ್ರಾಧಿಕಾರಗಳಿಗೆ ಅಧಿಕಾರ ಇಲ್ಲ. ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಮಹಾರಾಷ್ಟ್ರ ಸರ್ಕಾರ–ಮಿಲಿಂದ್‌ ವರದಿ ನಡುವಿನ ಪ್ರಕರಣದಲ್ಲಿ ಇದನ್ನು ಸ್ಪಷ್ಟಪಡಿಸಿದೆ. ಆದರೂ, ಸಮಾಜ ಕಲ್ಯಾಣ ಇಲಾಖೆ ಅವೈಜ್ಞಾನಿಕ ವರದಿಗಳನ್ನು ನೆಪವಾಗಿಟ್ಟುಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿಗಳನ್ನು ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯಗಳೆಂದು ಪ್ರತ್ಯೇಕ ಪಟ್ಟಿ ಮಾಡಿದ್ದು ಕಾನೂನುಬಾಹಿರ’ ಎಂದು ವಕೀಲ ಸಿ.ಜಗದೀಶ ಆರೋಪಿಸಿದರು.

‘ಅಲೆಮಾರಿ ಜಾತಿಗಳು ಬೇಕಿದ್ದರೆ ಹಿಂದುಳಿದ ವರ್ಗಗಳ ಇಲಾಖೆ ಅಡಿ ಪ್ರತ್ಯೇಕ ಕೋಶವನ್ನು ಸ್ಥಾಪಿಸಿಕೊಂಡು ಸವಲತ್ತು ಪಡೆಯಲಿ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜಾತಿಗಳಿಗೆ ಪ್ರತ್ಯೇಕ ಕೋಶ ರಚಿಸುವ ಮೂಲಕ ಇಲ್ಲದ ಗೊಂದಲ ಸೃಷ್ಟಿಸುವ ಹಾಗೂ ಪರಿಶಿಷ್ಟ ಅಲ್ಲದವರೂ ಈ ಮೀಸಲಾತಿಯಡಿ ಸವಲತ್ತು ಪಡೆಯಲು ಅವಕಾಶ ಕಲ್ಪಿಸುವ ಅಗತ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT