ಶುಕ್ರವಾರ, ನವೆಂಬರ್ 15, 2019
22 °C

ತಂದೆ–ಮಗಳ ಭಾವುಕ ಕ್ಷಣಗಳನ್ನು ಬಿಚ್ಚಿಟ್ಟ ಆಲಿಯಾ ಭಟ್

Published:
Updated:
Prajavani

‘ಸಡಕ್‌ 2’ ಸಿನಿಮಾ ಬಾಲಿವುಡ್‌ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಇದಕ್ಕೆ ಮುಖ್ಯ ಕಾರಣ ತಂದೆ, ಮಗಳ ಜೋಡಿ.

ತಂದೆ ಮಹೇಶ್ ಭಟ್‌ ನಿರ್ದೇಶಕರಾಗಿದ್ದರೆ, ಅದೇ ಸಿನಿಮಾದಲ್ಲಿ ಆಲಿಯಾ ಭಟ್‌ ಮುಖ್ಯಪಾತ್ರ ಮಾಡುತ್ತಿದ್ದಾರೆ. ಜೊತೆಗೆ ದೊಡ್ಡ ತಾರಾಬಳಗ ಹೊಂದಿರುವ ಕಾರಣಕ್ಕೂ ಈ ಸಿನಿಮಾ ಹೆಚ್ಚು ಸುದ್ದಿಯಲ್ಲಿದೆ.

ನಿರ್ದೇಶನದಿಂದ ದೂರ ಉಳಿದಿದ್ದ ಮಹೇಶ್‌ ಭಟ್‌, ಮತ್ತೆ ಆ್ಯಕ್ಷನ್‌ ಕಟ್ ಹೇಳುತ್ತಿರುವುದು ಆಲಿಯಾಗೆ ಖುಷಿ ವಿಚಾರವಂತೆ. ಆದರೆ ಸೆಟ್‌ನಲ್ಲಿ ತಂದೆ ನನ್ನನ್ನು ನೋಡಿದಾಗ ಹೆಚ್ಚು ಭಾವುಕರಾಗುತ್ತಾರೆ ಎಂದು ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಮೊದಲಿಗೆ ನನಗೆ ಸಾಕಷ್ಟು ಭಯ ಇತ್ತು. ತಂದೆ ಜೊತೆಗೆ ಕೆಲಸ ಮಾಡುವ ಅನುಭವ ದೊಡ್ಡದು. ಈ ವಿಚಾರದಲ್ಲಿ ನಾನು ಅದೃಷ್ಟವಂತೆ. ಅವರು ನನ್ನನ್ನು ನೋಡಿದಾಗಲೆಲ್ಲ ಭಾವುಕರಾಗುತ್ತಿದ್ದರು. ಇದರಿಂದ ನಾನು ಕೂಡ ಗೊಂದಲಕ್ಕೆ ಒಳಗಾಗುತ್ತಿದ್ದೆ. ಮೊದಲರ್ಧದ ಶೂಟಿಂಗ್ ಮುಗಿದ ಮೇಲೆ ಇಬ್ಬರೂ ನಿರಾಳರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ಸಡಕ್‌ 2’ ನಲ್ಲಿ ನನ್ನ ಪಾತ್ರ ಭಿನ್ನವಾಗಿದೆ. ಮೊದಲಿಗೆ ಕಷ್ಟ ಎನಿಸಿತು. ಇದರಲ್ಲಿ ನಟಿಸಲು ಸಾಕಷ್ಟು ಕಷ್ಟಪಟ್ಟಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಈ ಸಿನಿಮಾದಲ್ಲಿ ಆದಿತ್ಯ ರಾಯ್‌ ಕಪೂರ್‌, ಸಂಜಯ್‌ ದತ್‌, ಪೂಜಾ ಭಟ್ ಕೂಡ ನಟಿಸುತ್ತಿದ್ದಾರೆ. ಮೊದಲ ಭಾಗದ ಶೂಟಿಂಗ್‌ ಮುಗಿದಿದೆ. ಎರಡನೇ ಭಾಗದಲ್ಲಿ ಆದಿತ್ಯ ಹಾಗೂ ಆಲಿಯಾ ಅವರ ರೊಮ್ಯಾನ್ಸ್ ದೃಶ್ಯಗಳ ಚಿತ್ರೀಕರಣ ಊಟಿಯಲ್ಲಿ ನಡೆಯುತ್ತಿದೆಯಂತೆ.  1991ರ ‘ಸಡಕ್‌’ ಸಿನಿಮಾದ ಮುಂದಿನ ಅವತರಣಿಕೆ ಇದಾಗಿದೆ.

ಸಂಜಯ್‌ ದತ್‌ ಹಾಗೂ ಪೂಜಾ ಭಟ್ ಅವರ ಮಗಳ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಳ್ಳಲಿದ್ದಾರೆ. ತಂದೆ ಹಾಗೂ ಮಗಳ ಬಾಂಧವ್ಯದ ಬಗ್ಗೆ ಹೆಚ್ಚಿನ ಗಮನಸೆಳೆಯಲಿದೆ. ಜುಲೈ 10ರಂದು ಸಿನಿಮಾ ಬಿಡುಗಡೆಯಾಗಲಿದೆ.

ಪ್ರತಿಕ್ರಿಯಿಸಿ (+)