ಭಾರತ ‘ಎ’–ಶ್ರೀಲಂಕಾ ‘ಎ’ ಪಂದ್ಯ ಮೇ 25ರಿಂದ

ಬುಧವಾರ, ಜೂನ್ 19, 2019
26 °C
ತ್ರಿಶತಕ ಬಾರಿಸಿದ್ದ ಪ್ರಿಯಾಂಕ್ ಪಾಂಚಾಲ್‌ ಆಕರ್ಷಣೆ

ಭಾರತ ‘ಎ’–ಶ್ರೀಲಂಕಾ ‘ಎ’ ಪಂದ್ಯ ಮೇ 25ರಿಂದ

Published:
Updated:
Prajavani

ಬೆಳಗಾವಿ: ಭಾರತ ‘ಎ’–ಶ್ರೀಲಂಕಾ ‘ಎ’ ತಂಡಗಳ ನಡುವಣ ಇಲ್ಲಿ ಇದೇ ಮೊದಲ ಬಾರಿಗೆ ಮೇ 25ರಿಂದ 28ರವರೆಗೆ ನಡೆಯಲಿರುವ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೆ ಆಟೊನಗರದಲ್ಲಿರುವ ಕೆಎಸ್‌ಸಿಎ ಮೈದಾನ ಸಜ್ಜಾಗಿದೆ.‌

ಉಭಯ ತಂಡಗಳ ಆಟಗಾರರು ಬಂದಿಳಿದಿದ್ದು, ಗುರುವಾರದಿಂದಲೂ ಅಭ್ಯಾಸ ನಡೆಸಿದ್ದಾರೆ. ಆಯಾ ರಾಷ್ಟ್ರಗಳ ಮುಖ್ಯ ತಂಡಗಳಿಗೆ ಸ್ಥಾನ ಪಡೆಯುವುದಕ್ಕೆ ಮೆಟ್ಟಿಲಾಗುವ ಇಲ್ಲಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವುದಕ್ಕಾಗಿ ಬೆವರು ಹರಿಸುತ್ತಿದ್ದಾರೆ.

ಅತಿಥೇಯ ತಂಡಕ್ಕೆ ಹಿರಿಯ ಕ್ರಿಕೆಟಿಗರಾದ ರಾಹುಲ್‌ ದ್ರಾವಿಡ್ ಹಾಗೂ ನರೇಂದ್ರ ಹಿರ್ವಾನಿ (ಬೌಲಿಂಗ್) ಕೋಚ್‌ಗಳಾಗಿದ್ದಾರೆ. ಹೀಗಾಗಿ, ಫೇವರಿಟ್ ಎನಿಸಿದೆ. ನಿತ್ಯ 90 ಓವರ್‌ಗಳ ಆಟ ನಡೆಯಲಿದೆ. ಬ್ಯಾಟಿಂಗ್‌ ಪಿಚ್ ಆಗಿರುವ ಇಲ್ಲಿ ರನ್‌ ಹೊಳೆ ಹರಿಯುವ ಸಾಧ್ಯತೆ ಇದೆ.

‘ಎ’ ತಂಡಗಳಲ್ಲಿ ಆಡುವ ಆಟಗಾರರನ್ನು ಕಡೆಗಣಿಸುವಂತಿಲ್ಲ. ಏಕೆಂದರೆ, ಇಲ್ಲಿ ತೋರುವ ಪ್ರದರ್ಶನವನ್ನು ಬಿಸಿಸಿಐ ಗಮನಿಸುತ್ತದೆ. ಮುಖ್ಯ ತಂಡಕ್ಕೆ ಅವಕಾಶ ಪಡೆದುಕೊಳ್ಳುವುದಕ್ಕೆ ಅವರಿಗೆ ಅವಕಾಶವಿರುತ್ತದೆ. ಹೀಗಾಗಿ, ಈ ಪಂದ್ಯ ಮಹತ್ವದ್ದಾಗಿದೆ’ ಎನ್ನುತ್ತಾರೆ ಬಿಸಿಸಿಐ ಧಾರವಾಡ ವಲಯದ ಸದಸ್ಯ ಅವಿನಾಶ್‌ ಪೋತದಾರ್.

ಭಾರತ ‘ಎ’ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್‌ ಇಲ್ಲಿನ ಮೈದಾನದಲ್ಲಿ ಮಾಡಿದ್ದ ದಾಖಲೆ ಇಂದಿಗೂ ಹಸಿರಾಗಿದೆ. ಅವರು 2016ರ ನ. 30ರಂದು ಪಂಜಾಬ್ ವಿರುದ್ಧ ನಡೆದಿದ್ದ ರಣಜಿ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಅಜೇಯ ತ್ರಿಶತಕ (314) ಬಾರಿಸಿ ದಾಖಲೆ ಮಾಡಿದ್ದರು. ಇದು ಈ ಮೈದಾನದ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ. ಆ ಸಾಧನೆಯ ನೆನಪಿಗಾಗಿ ಪೆವಿಲಿಯನ್‌ನ ಗೋಡೆಯಲ್ಲಿ ಅವರ ಹಸ್ತಾಕ್ಷರವುಳ್ಳ ಟಿ–ಶರ್ಟ್‌ಗೆ ಫ್ರೇಮ್‌ ಹಾಕಿಸಿ ತೂಗು ಹಾಕಲಾಗಿದೆ. ಈ ಮಧುರ ನೆನಪುಗಳ ಮೆರವಣಿಗೆಯ ನಡುವೆ ಅವರು ಇಲ್ಲಿ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲು ಸಜ್ಜಾಗಿದ್ದಾರೆ. ಅವರಿಂದ ಸ್ಫೋಟಕ ಬ್ಯಾಟಿಂಗ್‌ ‍ಪ್ರದರ್ಶನವನ್ನು ಇಲ್ಲಿನ ಕ್ರಿಕೆಟ್‌ ಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ.

ಶುಕ್ರವಾರ ಕೋಚ್‌ ರಾಹುಲ್‌ ದ್ರಾವಿಡ್ ನೇತೃತ್ವದಲ್ಲಿ ಭಾರತ ತಂಡದವರು ಅಭ್ಯಾಸ ನಡೆಸಿದರು. ಬ್ಯಾಟ್‌ ಹಿಡಿದ ದ್ರಾವಿಡ್, ಆಟಗಾರರಿಗೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ ತಂತ್ರಗಳನ್ನು ಹೇಳಿಕೊಟ್ಟು, ಅನುಭವ ಧಾರೆ ಎರೆದರು.

ಬಿಸಿಸಿಐ ಪ್ರಕಟಿಸಿರುವ 15 ಆಟಗಾರರ ಪಟ್ಟಿಯಲ್ಲಿ ಕರ್ನಾಟಕದ ಯಾರಿಗೂ ಸ್ಥಾನ ದೊರೆತಿಲ್ಲ. ಇದು ಕನ್ನಡಿಗರ ನಿರಾಸೆಗೆ ಕಾರಣವಾಗಿದೆ. ನಾಲ್ಕು ದಿನಗಳ ಪಂದ್ಯದ ಬಳಿಕ, ಜೂನ್‌ 6, 8 ಹಾಗೂ 10ರಂದು ಏಕದಿನ ಪಂದ್ಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿನವರಿಗೆ ದೊರೆಯಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30ಕ್ಕೆ

ತಂಡಗಳು:

ಭಾರತ ‘ಎ’: ಪ್ರಿಯಾಂಕ್ ಪಾಂಚಾಲ್‌, ಎ.ಆರ್. ಈಶ್ವರನ್, ಅನ್‌ಮೋಲ್‌ಪ್ರೀತ್ ಸಿಂಗ್, ರಿಕಿ ಬುಯಿ, ರಿಂಕು ಸಿಂಗ್, ಶಿವಂ ದುಬೆ, ಕೆ.ಎಸ್‌. ಭರತ್, ರಾಹುಲ್ ಚಾಹರ್, ಜಯಂತ್ ಯಾದವ್, ಎ. ಸರ್ವತೆ, ಸಂದೀಪ್ ವಾರಿಯರ್, ಅಂಕಿತ್ ರಜಪೂತ್, ಇಶಾನ್ ಪೊರೆಲ್.

ಶ್ರೀಲಂಕಾ ‘ಎ’: ಆಶನ್ ಪ್ರಿಯಂಜನ್, ಪಥುಮ್ ನಿಶಾಂಕ, ಸುದೀರ ಸಮರವಿಕ್ರಮ, ಸಂಗೀತ್‌ ಕೂರೆ, ಪ್ರಿಯಮಾಳ್ ಪೆರೇರ, ಭಾನುಕ ರಾಜಪಕ್ಷೆ, ನಿರೋಶನ್ ಡಿಕ್‌ವೆಲ್ಲಾ, ಕಮಿಂದು ಮೆಂಡಿಸ್, ಮಲಿಂದ ಪುಷ್ಪಕುಮಾರ, ವಿಶ್ವ ಫರ್ನಾಂಡೊ, ಲಾಹಿರು ಕುಮಾರ, ಎ. ಧನಂಜಯ, ಲಕ್ಷಣ್ ಸಂದಕೇನ್.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !