ಶನಿವಾರ, ಡಿಸೆಂಬರ್ 14, 2019
25 °C
ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ವಿರುದ್ಧ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ವಾಗ್ದಾಳಿ

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿಯಾಗುವ ಹೇಳಿಕೆ ಚುನಾವಣೆ ಗಿಮಿಕ್‌: ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್-ಜೆಡಿಎಸ್ ಮೈತ್ರಿ ಎನ್ನುವುದು ಕೇವಲ ಚುನಾವಣೆ ಗಿಮಿಕ್‌ ಹೇಳಿಕೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ವಾರಸುದಾರರಿಲ್ಲದ ಪಕ್ಷವಾಗಲಿದೆ. ಕಾಂಗ್ರೆಸ್‌ ಕಚೇರಿಯಲ್ಲಿ ದೀಪ ಹಚ್ಚಲಿಕ್ಕೂ ಜನ ಉಳಿಯುವುದಿಲ್ಲ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಅಸ್ತಿತ್ವ ಹೊಂದಿರುವ ಜೆಡಿಎಸ್ ಬಿಜೆಪಿ ಹಿಂಬಾಲಿಸುವ ಕಾರ್ಯ ಮಾಡಲಿದೆ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ನಗರದಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ರೋಡ್ ಶೋ ನಡೆಸಿ ಮತಯಾಚಿಸಿದ ಅವರು, ‘ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕಾಂಗ್ರೆಸ್ ಸಖ್ಯ ಬೇಡ ಎಂದು, ಬಿಜೆಪಿ ಬೆಂಬಲಿಸುವ ಮಾತನ್ನಾಡಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಪರಮೇಶ್ವರ್, ವೀರಪ್ಪ ಮೊಯಿಲಿ ಅವರು ದೇವೇಗೌಡರ ಮನೆ ಮುಂದೆ ಹೋಗಿ ಮೈತ್ರಿ ಮಾತನಾಡುತ್ತಿದ್ದಾರೆ. ಈ ಚುನಾವಣೆ ನಂತರ ರಾಜ್ಯದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದು ಮುಂದಿನ ಮೂರುವರೆ ವರ್ಷ ಆಡಳಿತ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯ ನಂತರದ 72 ವರ್ಷಗಳಲ್ಲಿ ಕಾಂಗ್ರೆಸ್ ದೀನ ದಲಿತರನ್ನು ಬರೀ ಮತ ಬ್ಯಾಂಕಿಗಾಗಿ ಬಳಸಿಕೊಂಡು ಅನ್ಯಾಯ ಮಾಡಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಬದುಕಿದಾಗ ಅವರಿಗೆ ಭಾರತ ರತ್ನ ನೀಡಲಿಲ್ಲ. ಅವರು ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಹೀನಾಯವಾಗಿ ಸೋಲುವಂತೆ ಮಾಡಿದರು. ನಿಧನರಾದಾಗ ದಿಲ್ಲಿಯಲ್ಲಿ ಅಂತ್ಯಸಂಸ್ಕಾರಕ್ಕೆ ಕೂಡ ಜಾಗ ಕೊಡಲಿಲ್ಲ. ವಾಜಪೇಯಿ ಅವರು ಬಾಬು ಜಗಜೀವನರಾಂ ಅವರನ್ನು ಪ್ರಧಾನಿ ಮಾಡುವ ಸಂಕಲ್ಪ ಮಾಡಿದಾಗ ಇಂದಿರಾಗಾಂಧಿ ಹಾಗೂ ಅವರ ಬಳಗದವರು ಅವರನ್ನೂ ಸೋಲಿಸಿದರು’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ಗೆ ಯಾವತ್ತೂ ಮತಬ್ಯಾಂಕ್ ಇರಲೇ ಇರಲಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರನ್ನು ಮತ ಬ್ಯಾಂಕ್ ಮಾಡಿಕೊಂಡರು. ಗರೀಬಿ ಹಠಾವೋ ಎಂದ ಕಾಂಗ್ರೆಸ್ ನಾಯಕರ ಬಡತನ ನಿವಾರಣೆಯಾಯಿತು ವಿನಾ ದೀನದಲಿತರ, ಬಡವರ ಉದ್ಧಾರವಾಗಲಿಲ್ಲ. ಇದನ್ನು ಅರಿತು ಇವತ್ತು ದೇಶದ ಉದ್ದಗಲಕ್ಕೂ ಹಿಂದುಳಿದ ವರ್ಗ, ದೀನ ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್‌ನಿಂದ ಹೊರಬಂದಿದ್ದಾರೆ. ಇದರಿಂದ ನೀರಿಂದ ಆಚೆ ಬಿದ್ದ ಮೀನಿನಂತೆ ಕಾಂಗ್ರೆಸ್‌ನವರು ವಿಲವಿಲ ಒದ್ದಾಡುತ್ತ, ಹುಚ್ಚರಂತೆ ಆಡುತ್ತಿದ್ದಾರೆ’ ಎಂದು ಟೀಕಿಸಿದರು.

ಆರೋಗ್ಯ ಸಚಿವ ಬಿ. ಶ್ರೀರಾಮುಲು ಮಾತನಾಡಿ, ‘ಕಾಂಗ್ರೆಸ್, -ಜೆಡಿಎಸ್ ಪಕ್ಷಗಳನ್ನು ಜನ ತಿರಸ್ಕರಿಸಿದ್ದಾರೆ. ಇವತ್ತು ಕಾಂಗ್ರೆಸ್ ತ್ಯಜಿಸಿದ ಶಾಸಕರಿಗೆ ಭ್ರಷ್ಟರು ಎಂದು ಹೇಳುತ್ತಿದ್ದಾರೆ. ಇದೇ ಶಾಸಕರು ಕಾಂಗ್ರೆಸ್‌ನಲ್ಲಿದ್ದಾಗ ಏಕೆ ಆಗ ಮಾತನಾಡಲಿಲ್ಲ? ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರುತ್ತದೆಯಂತೆ. ಆಗ ಸಿದ್ದರಾಮಯ್ಯ ಅವರನ್ನು ಹೊರಗಿಟ್ಟು ಸರ್ಕಾರ ರಚಿಸುತ್ತಾರಂತೆ. ಈಗಾಗಲೇ ವಿಚ್ಛೇದನ ಕೊಟ್ಟು ಬೇರೆ ಬೇರೆಯಾಗಿರುವ ಪಕ್ಷಗಳು ಮತ್ತೆ ಒಂದಾಗುವುದು ಅಪಹಾಸ್ಯ. ಸಿದ್ದರಾಮಯ್ಯ ಹೊರಗಿಟ್ಟು ಸರ್ಕಾರ ರಚಿಸಲು ಹೇಗೆ ಸಾಧ್ಯ? ಹಾಗೇನಾದರೂ ಮಾಡಿದರೆ ಮತ್ತೆ ಸರ್ಕಾರ ಬೀಳಲಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು