ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ ಸರ್ಕಾರ ರಚಿಸಿದ್ದೇ ಸೋಲಿಗೆ ಕಾರಣ: ಪರಾಜಿತ ‘ಕೈ’ ಅಭ್ಯರ್ಥಿಗಳ ದೂರು

ಕೆ.ಸಿ ವೇಣುಗೋಪಾಲ್ ಮುಂದೆ ಲೋಕಸಭೆ ಚುನಾವಣೆ ಸೋಲಿಗೆ ಕಾರಣ ಮುಂದಿಟ್ಟರು
Last Updated 27 ಜೂನ್ 2019, 5:19 IST
ಅಕ್ಷರ ಗಾತ್ರ

ಬೆಂಗಳೂರು: ಮೈತ್ರಿ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಇದ್ದುದು, ಜೆಡಿಎಸ್‌ ನಾಯಕರು ಕೈ ಕೊಟ್ಟಿದ್ದೇ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾರಣ ಎಂದು ಸೋಲು ಕಂಡ ಕಾಂಗ್ರೆಸ್ಅಭ್ಯರ್ಥಿಗಳು ತಮ್ಮ ಪರಾಭವದ ಕಾರಣಗಳನ್ನು ಪಕ್ಷದ ಹೈಕಮಾಂಡ್ ಮುಂದಿಟ್ಟಿದ್ದಾರೆ.

ಲೋಕಸಭೆ ಚುನಾವಣೆ ನಂತರ ಇದೇ ಮೊದಲ ಬಾರಿಗೆ ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ಸೋತ ಅಭ್ಯರ್ಥಿಗಳ ಜತೆ ಚರ್ಚಿಸಿದರು. ಪ್ರತಿ ಕ್ಷೇತ್ರದ ಸೋಲಿಗೆ ಕಾರಣವಾದ ಅಂಶಗಳ ಪಟ್ಟಿಯನ್ನು ಪಡೆದುಕೊಂಡರು. ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕರು ಜೆಡಿಎಸ್ ಜತೆಗಿನ ಮೈತ್ರಿ ಕಡೆಗೆ ಬೊಟ್ಟುಮಾಡಿತೋರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೈತ್ರಿ ಸರ್ಕಾರದ ವಿರುದ್ಧ ನಕಾರಾತ್ಮಕ ಅಭಿಪ್ರಾಯ ಮೂಡಿದ್ದರೂ ಅದನ್ನು ಗ್ರಹಿಸಲಿಲ್ಲ. ಮೈತ್ರಿಯಿಂದ ಪ‍್ರಯೋಜನವಾಗುವುದಿಲ್ಲ ಎಂದು ಗೊತ್ತಿದ್ದರೂ ಹೊಂದಾಣಿಕೆ ಮಾಡಿಕೊಳ್ಳಲಾಯಿತು. ಇದರಿಂದಾಗಿ ಗೆಲ್ಲಬಹುದಾಗಿದ್ದ ನಾಲ್ಕೈದು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಪ್ರಧಾನಿ ನರೇಂದ್ರ ಮೋದಿ ಅಲೆಯ ಪರಿಣಾಮಗಳನ್ನು ಅರಿತು, ಅದನ್ನು ನಿಯಂತ್ರಿಸುವ ಬಗ್ಗೆ ಯಾರೊಬ್ಬರೂ ಆಲೋಚಿಸಲಿಲ್ಲ. ಬಿಜೆಪಿ ಹಣದ ಹೊಳೆಯನ್ನೇ ಹರಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಗಳು ಆರ್ಥಿಕ ಸಂಪನ್ಮೂಲದ ಕೊರತೆ ಎದುರಿಸಿದ್ದೂ ಸೋಲಿಗೆ ಕಾರಣವಾಯಿತು ಎಂದು ಮನದಟ್ಟುಮಾಡಿಕೊಟ್ಟಿದ್ದಾರೆ.

ಕಾಂಗ್ರೆಸ್ ಶಾಸಕರು ಇರುವ ಕ್ಷೇತ್ರಗಳಲ್ಲೂ ಕಡಿಮೆ ಮತಗಳು ಬಂದಿರುವ ಬಗ್ಗೆಯೂ ಗಂಭೀರ ಚರ್ಚೆಗಳು ನಡೆದಿವೆ. ಮೈತ್ರಿ ಪಕ್ಷದವರು ಸಹಕಾರ ನೀಡಲಿಲ್ಲ. ಆ ಹೊತ್ತಿನಲ್ಲಿ ನಮ್ಮ ಪಕ್ಷದ ಶಾಸಕರು ಸಮರ್ಥವಾಗಿ ತೊಡಗಿಸಿಕೊಂಡಿದ್ದರೆ ಕಡಿಮೆ ಅಂತರದಿಂದ ಸೋತಿರುವ ಕಡೆಗಳಲ್ಲಿ ಗೆಲ್ಲುವ ಸಾಧ್ಯತೆಗಳಿದ್ದವು. ಈ ಬಗ್ಗೆಯೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿದ್ಯುನ್ಮಾನ ಮತಯಂತ್ರ ಬಳಕೆ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಗಳಲ್ಲಿ ಇವಿಎಂ ಬಳಕೆ ತಡೆಯುವ ಪ್ರಯತ್ನ ಆಗಬೇಕು ಎಂದು ಸಲಹೆ ನೀಡಿದ್ದಾರೆ.

ಹಿರಿಯರ ಸಭೆ: ಪಕ್ಷದ ಹಿರಿಯ ಮುಖಂಡರ ಜತೆಗೂ ಸುಧೀರ್ಘ ಚರ್ಚೆ ನಡೆಸಿದರು. ಲೋಕಸಭೆ ಸೋಲಿನ ಪರಾಮರ್ಶೆ ಜತೆಗೆ ಪಕ್ಷ ಸಂಘಟನೆ, ಮುಂದಿನ ಚುನಾವಣೆಗೆ ಪಕ್ಷ ಸಜ್ಜುಗೊಳಿಸುವುದು, ಪಕ್ಷದಲ್ಲಿ ಮತ್ತಷ್ಟು ಶಿಸ್ತು ತರುವ ಬಗ್ಗೆಯೂ ವಿಸ್ತೃತವಾಗಿಚರ್ಚಿಸಲಾಯಿತು ಎಂದು ಗೊತ್ತಾಗಿದೆ.

ಮುಖಂಡರಾದ ಸಿದ್ದರಾಮಯ್ಯ, ಜಿ.ಪರಮೇಶ್ವರ, ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದರು.

ಗೈರಾದವರು: ಮಲ್ಲಿಕಾರ್ಜುನ ಖರ್ಗೆ, ಬಿ.ಕೆ.ಹರಿಪ್ರಸಾದ್, ಡಿ.ಆರ್.ಪಾಟೀಲ್, ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ, ಸಿ.ಎಚ್. ವಿಜಯಶಂಕರ್, ಆರ್.ಧ್ರುವನಾರಾಯಣ್

ಮೂರು ವಾರದಲ್ಲಿ ನೂತನ ಪದಾಧಿಕಾರಿಗಳು

‘ಪಕ್ಷ ಸಂಘಟನೆಗೆ ಒತ್ತು ನೀಡುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗಿದ್ದು, ಕೆಪಿಸಿಸಿ ಪದಾಧಿಕಾರಿಗಳನ್ನು ಮೂರು ವಾರದಲ್ಲಿ ನೇಮಕ ಮಾಡಲಾಗುವುದು. ಇದಕ್ಕೆ ಸ್ಪಷ್ಟವಾದ ಮಾರ್ಗಸೂಚಿಸಿ ಸಿದ್ಧಪಡಿಸಲಾಗಿದೆ’ ಎಂದು ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಕೆಪಿಸಿಸಿ ಪದಾಧಿಕಾರಿಗಳ ನೇಮಕದ ನಂತರ ಡಿಸಿಸಿ, ಬ್ಲಾಕ್ ಮಟ್ಟದಲ್ಲೂ ನೇಮಕ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಪಂಚಾಯಿತಿ ಮಟ್ಟದಲ್ಲೂ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT