ನೀರು ನೀಡಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ

7
ರೈತ ಸೇನಾ–ಕರ್ನಾಟಕ ಸಂಘಟನೆಯಿಂದ ಚಳವಳಿ

ನೀರು ನೀಡಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ

Published:
Updated:

ಬೆಳಗಾವಿ: ‘ರಾಜ್ಯಕ್ಕೆ ಮಹದಾಯಿ ನದಿ ನೀರು ಹಂಚಿಕೆ ಮಾಡಬೇಕು. ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಆ. 11ರಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪತ್ರ ಚಳವಳಿ ನಡೆಸಲಾಗುವುದು’ ಎಂದು ರೈತ ಸೇನಾ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಸೋಮು ರೈನಾಪುರ ತಿಳಿಸಿದರು.

‘ದಯಾಮರಣಕ್ಕೆ ಅನುಮತಿ ಕೊಡುವಂತೆ ಕೋರಿ 250 ರೈತರು ಏಪ್ರಿಲ್‌ನಲ್ಲಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದೆವು. ಈವರೆಗೂ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಚಳವಳಿಗೆ 1300 ಸಂಘಟನೆಗಳು ಬೆಂಬಲ ನೀಡಿವೆ. ಬೆಳಗಾವಿಯಿಂದ 500ಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಹೋಗುತ್ತಿದ್ದೇವೆ. ನ್ಯಾಯಮಂಡಳಿಯಿಂದ ತೀರ್ಪು ಬರುವವರೆಗೂ ಅಲ್ಲಿಯೇ ಧರಣಿ ನಡೆಸಲಾಗುವುದು’ ಎಂದರು.

‘ಬೆಳಗಾವಿ ಜಿಲ್ಲೆಯೊಂದರಲ್ಲೇ 500ಕ್ಕೂ ಹೆಚ್ಚು ಸೇರಿದಂತೆ, ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ಇತರ ಜಿಲ್ಲೆಗಳಾದ ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳ 4000ಕ್ಕೂ ಹೆಚ್ಚು ಮಂದಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಕುಡಿಯಲು ಹಾಗೂ ಕೃಷಿ ಕೈಗೊಳ್ಳಲು ನೀರೇ ಸಿಗದ ಮೇಲೆ ನಾವು ಬದುಕಿದ್ದು ಏನು ಪ್ರಯೋಜನ?’ ಎಂದು ಕೇಳಿದರು.

‘ಪತ್ರ ಚಳವಳಿ ಮೂಲಕ ನ್ಯಾಯಮಂಡಳಿ ಮೇಲೆ ಒತ್ತಡ ಹೇರಲಾಗುವುದು. ವಿವಾದ ಬಗೆಹರಿಸಿ, ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಒಂದು ವೇಳೆ, ನ್ಯಾಯಮಂಡಳಿಯಿಂದಲೂ ನ್ಯಾಯ ದೊರೆಯದಿದ್ದಲ್ಲಿ ಹೋರಾಟ ತೀವ್ರಗೊಳಿಸಿ, ಸಾರ್ವಜನಿಕ ಆಸ್ತಿಪಾಸ್ತಿ ನಾಶಕ್ಕೆ ಕಾರಣವಾಗುವುದಿಲ್ಲ. ನಮಗೆ ದಯಾಮರಣಕ್ಕೆ ಅವಕಾಶ ಮಾಡಿಕೊಡಲಿ’ ಎಂದು ಸ್ಪಷ್ಟಪಡಿಸಿದರು.

ಸಂಘಟನೆಯ ರಾಮದುರ್ಗ ತಾಲ್ಲೂಕು ಘಟಕದ ಅಧ್ಯಕ್ಷ ಗಿರಿಯಪ್ಪ ಹಂಜಿ, ಪ್ರಧಾನ ಕಾರ್ಯದರ್ಶಿ ಹನಮಂತ ಮಡಿವಾಳರ, ಮುಖಂಡರಾದ ಮಾಯಪ್ಪ ವಡಕೇನವರ, ಮಾರುತಿ ಹರಿಮನಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !