ಸರ್ಕಾರ ಮಾಡಬೇಕಾದ ಕೆಲಸ ಆಳ್ವಾಸ್‌ನಿಂದ

7
ವಿರಾಸತ್‌ ಪ್ರಶಸ್ತಿ ಸ್ವೀಕರಿಸಿದ ಹರಿಹರನ್‌ ಗುಣಗಾನ

ಸರ್ಕಾರ ಮಾಡಬೇಕಾದ ಕೆಲಸ ಆಳ್ವಾಸ್‌ನಿಂದ

Published:
Updated:
Prajavani

ಮೂಡುಬಿದಿರೆ: ರಜತ ಮಹೋತ್ಸವದ ಸಂಭ್ರಮದಲ್ಲಿರುವ ನಾಡಿನ ಪ್ರಸಿದ್ಧ ಸಾಂಸ್ಕೃತಿಕ ಉತ್ಸವ ಆಳ್ವಾಸ್‌ ವಿರಾಸತ್‌ ಅತ್ಯದ್ಭುತ ಪರಿಕಲ್ಪನೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಆಳ್ವಾಸ್ ಸಂಸ್ಥೆ ಬೃಹತ್ ಮಟ್ಟದಲ್ಲಿ ಮಾಡುತ್ತಿರುವುದು ಎಲ್ಲರಿಗೂ ಮಾದರಿ ಎಂದು ಜನಪ್ರಿಯ ಗಾಯಕ ಹರಿಹರನ್‌ ಹೇಳಿದರು.

ಇಲ್ಲಿನ ವಿವೇಕಾನಂದನಗರದಲ್ಲಿ ಶುಕ್ರವಾರ ಆರಂಭವಾದ 25ನೇ ವರ್ಷದ ಆಳ್ವಾಸ್‌ ವಿರಾಸತ್‌ನಲ್ಲಿ 2019ರ ವಿರಾಸತ್‌ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪ್ರಶಸ್ತಿ ₹ 1 ಲಕ್ಷ ನಗದು ಒಳಗೊಂಡಿದೆ.

‘ಸಂಗೀತ ಹೃದಯ ಮತ್ತು ಮನಸ್ಸನ್ನು ಪ್ರಶಾಂತವಾಗಿಡಲು ಉತ್ತಮ ಚಿಕಿತ್ಸೆಯಾಗಿದೆ. ಯೋಗ, ಅಧ್ಯಾತ್ಮವು ಹೇಗೆ ವ್ಯಕ್ತಿಯನ್ನು ಧ್ಯಾನಸ್ಥ ‌ಸ್ಥಿತಿಗೆ ಕೊಂಡೊಯ್ಯುತ್ತದೋ, ಸಂಗೀತವು ಕೂಡ ವ್ಯಕ್ತಿಯ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ’ ಎಂದು ಹೇಳಿದರು.

ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಜನರ ಜೀವನವು ಸಾಮರಸ್ಯದಿಂದ ಕೂಡಿದರೆ, ರಾಷ್ಟೀಯ ಜೀವನವು ಸಂಗೀತದಂತೆ ಸುಂದರವಾಗಿ ಸಾಗಬಲ್ಲುದು ಎಂದರು.

‘ಸಂಗೀತ, ತತ್ವಶಾಸ್ತ್ರ, ಕಲೆ, ಯೋಗ ಮುಂತಾದ ಪರಿಕಲ್ಪನೆ ಪೂರ್ವದಿಂದ  ಪಶ್ಚಿಮ ದೇಶಗಳಿಗೆ ತೆರಳಿದ ಮಹಾನ್ ವಿಚಾರಗಳು. ಆದರೆ ಪಶ್ಚಿಮದಿಂದ ವಿಕೃತಿಯೇ ಪೂರ್ವಕ್ಕೆ ಬಂದವು’ ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, 'ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನಮ್ಮ ದೇಶದ ಶಾಸ್ತ್ರೀಯ ಕಲಾ ಪ್ರಕಾರಗಳನ್ನು ಹೊಸ ತಲೆಮಾರಿಗೆ ದಾಟಿಸಿ ಸಂರಕ್ಷಣೆ ಮಾಡುವ ಯಾವ ವಿಶ್ವಾಸವೂ ಉಳಿದಿಲ್ಲ. ಈ ಜವಾಬ್ದಾರಿಯನ್ನು ಶೈಕ್ಷಣಿಕ ಸಂಸ್ಥೆಗಳು ವಹಿಸಿಕೊಳ್ಳಬೇಕು' ಎಂದು ಹೇಳಿದರು.

ವಿರಾಸತ್‌ ರಜತ ಮಹೋತ್ಸವದ ಸಂದರ್ಭದಲ್ಲಿ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. 

ಬಳಿಕ ಹರಿಹರನ್‌–ಲೆಸ್ಲೆ ಲಿವಿಸ್‌ ಅವರಿಂದ (ಕೊಲೊನಿಯಲ್‌ ಕಸಿನ್ಸ್‌) ರಸ ಸಂಯೋಗ ನಡೆಯಿತು. 50 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಈ ಗಾನಸುಧೆಯಲ್ಲಿ ಮಿಂದೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !