ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ಪೊಲೀಸ್‍ಗಿರಿ ಸಲ್ಲ: ಮಲ್ಲಿಕಾ ಘಂಟಿ

ರಾಜಕೀಯ ಉದ್ದೇಶಿತ ಧರ್ಮ ಕಾರಣಗಳು ಅಡ್ಡಿಯಾಗುತ್ತಿರುವುದು ಸಂಕಟದ ಸಂಗತಿ
Last Updated 16 ನವೆಂಬರ್ 2018, 20:24 IST
ಅಕ್ಷರ ಗಾತ್ರ

ಮೂಡುಬಿದಿರೆ:‘ಜೈನ ಕಾಶಿ ಎಂದೇ ಹೆಸರು ಪಡೆದ ಮೂಡುಬಿದಿರೆಯಲ್ಲಿ ಈಗಲೂ ಬಸದಿಗಳು ಇವೆ. ಆದರೆ ಸಾಮರಸ್ಯ ವಾತಾವರಣ ಇಲ್ಲ. ಇಲ್ಲಿ ನೈತಿಕ ಪೊಲೀಸಗಿರಿ ಇರಬಾರದು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್‌.ಘಂಟಿ ಅಭಿಪ್ರಾಯ ಪಟ್ಟರು.

ಇಲ್ಲಿನ ವಿದ್ಯಾಗಿರಿಯಲ್ಲಿ ಶುಕ್ರವಾರ ಆರಂಭವಾದ 15ನೇ ವರ್ಷದ ಆಳ್ವಾಸ್‌ ನುಡಿಸಿರಿಯ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದ ಅವರು, 'ಬಯಲುಸೀಮೆಯಲ್ಲಿ ನೈತಿಕ ಪೊಲೀಸ್‍ಗಿರಿ ಇಲ್ಲ. ಎಲ್ಲ ಧರ್ಮದ ಮಕ್ಕಳೂ ಕೂಡಿ ಆಟವಾಡುತ್ತಾರೆ. ಕರಾವಳಿ ನೆಲದಲ್ಲಿ ಜನರು ಕೂಡಿ ಬದುಕಲು ಹಂಬಲಿಸುತ್ತಿದ್ದರೂ ರಾಜಕೀಯ ಉದ್ದೇಶಿತ ಧರ್ಮ ಕಾರಣಗಳು ಅಡ್ಡಿಯಾಗುತ್ತಿರುವುದು ಸಂಕಟದ ಸಂಗತಿ. ಜೈನ ಮುನಿಗಳು ನಡೆದಾಡಿದ, ಇಂದಿಗೂ ಬಸದಿಗಳು ಇರುವ ಈ ಸಂಪದ್ಭರಿತ ನೆಲದಲ್ಲಿ ಹಿಂಸೆ ಏಕೆ ವಿಜೃಂಭಿಸುತ್ತಿದೆ' ಎಂದು ಪ್ರಶ್ನಿಸಿದರು.

ಉದ್ಘಾಟನಾ ಭಾಷಣ ಮಾಡಿದ ಸಂಶೋಧಕ ಪ್ರೊ.ಷ.ಶೆಟ್ಟರ್, ‘ಕನ್ನಡ ಸಾಹಿತ್ಯ ಚರಿತ್ರೆ, ಲಿಪಿ ಚರಿತ್ರೆ ಮುಂತಾದ ಅಧ್ಯಯನಗಳು ನಡೆದಿವೆ. ಆದರೆ ಕನ್ನಡ ಭಾಷಾ ಚರಿತ್ರೆ ಇನ್ನೂ ನಿರ್ಮಾಣ ಆಗಿಲ್ಲ. ಈ ನಿಟ್ಟಿನಲ್ಲಿ ಸಂಶೋಧಕರು ಪ್ರಯತ್ನಿಸಬೇಕು. ಕನ್ನಡ ಭಾಷೆಯು ಹಲ್ಮಿಡಿ ಶಾಸನಕ್ಕಿಂತ ಪೂರ್ವದಲ್ಲಿಯೇ ಅಭಿವೃದ್ಧಿ ಹೊಂದಿತ್ತು. ಗಂಗ ಸಾಮ್ರಾಜ್ಯದ ಶಾಸನಗಳ ಅಧ್ಯಯನ ಮಾಡಿದಲ್ಲಿ ಇನ್ನಷ್ಟು ಹೊಸ ವಿಷಯಗಳು ಬೆಳಕಿಗೆ ಬರಲಿವೆ' ಎಂದರು.

ಸಮ್ಮೇಳನ ಉದ್ಘಾಟನೆಗೆ ಮುನ್ನ ರಾಜ್ಯದ ವಿವಿಧೆಡೆಯ ಸಾಂಸ್ಕೃತಿಕ ಲೋಕವನ್ನು ಬಿಂಬಿಸುವ ದೀರ್ಘ ಮೆರವಣಿಗೆಯಲ್ಲಿ ಸರ್ವಾಧ್ಯಕ್ಷೆ ಪ್ರೊ.ಮಲ್ಲಿಕಾ ಘಂಟಿ ಅವರನ್ನು ಕರೆತರಲಾಯಿತು. ಪಲ್ಲಕ್ಕಿಯಲ್ಲಿ ಕುಳಿತುಕೊಳ್ಳದೆ ನಡೆದುಕೊಂಡೇ ಬಂದ ಅವರು, ತಮ್ಮ ಭಾಷಣಕ್ಕೆ ಮುನ್ನ ‘ಸರ್ವಾಧ್ಯಕ್ಷೆಯ ನನ್ನ ಆಯ್ಕೆಯಲ್ಲ. ಅದು ನನ್ನ ಒಪ್ಪಿಗೆ’ ಎಂದು ಹೇಳಿದರು.

ಪ್ರೊ.ಷ.ಶೆಟ್ಟರ್‌ ಅವರು ದೀಪಬೆಳಗಿ ಉತ್ಸವ ಉದ್ಘಾಟಿಸಿದ ನಂತರ ವ್ಯಾಸಪೀಠದಲ್ಲಿದ್ದ ಗ್ರಂಥದ ಪುಟವನ್ನು ತಿರುವಿ ಹಾಕಿದರು. ಬಳಿಕ ತುಳುನಾಡಿನ ಸಂಪ್ರದಾಯದಂತೆ ಭತ್ತದ ಕಳಸದ ಮೇಲಿನ ಭತ್ತದ ತೆನೆಯ ಮೇಲೆ ಹಾಲು ಸುರಿದರು.

ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕ ಮಾತನಾಡಿದರು. ಮಧ್ಯಾಹ್ನ ಪ್ರಾದೇಶಿಕ ಸಿನಿಮಾ ವೈವಿಧ್ಯಕ್ಕೆ ವೇದಿಕೆ ಕಲ್ಪಿಸುವ 'ಸಿನಿಸಿರಿ'ಯನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು.

ರತ್ನಾಕರವರ್ಣಿ ವೇದಿಕೆಯ ಸಂತ ಶಿಶುನಾಳ ಷರೀಫ ಸಭಾಂಗಣದಲ್ಲಿ ಸುಮಾರು 32 ಸಾವಿರ ಮಂದಿ ಸೇರಿದ್ದರು. ಮುಖ್ಯವೇದಿಕೆಯಲ್ಲಿ ಸಾಹಿತ್ಯ ಗೋಷ್ಠಿಗಳು ನಡೆದರೆ ಸಮಾನಾಂತರ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

**

ಮುಖ್ಯಾಂಶಗಳು

ಕನ್ನಡ ಭಾಷಾ ಚರಿತ್ರೆ ನಿರ್ಮಾಣಕ್ಕೆ ಆಗ್ರಹ

ಉದ್ಘಾಟನೆ ವೇಳೆ ಸೇರಿದ್ದ 32 ಸಾವಿರಕ್ಕೂ ಅಧಿಕ ಕನ್ನಡ ಅಭಿಮಾನಿಗಳು

ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ‘ಸಿನಿಸಿರಿ’ಗೆ ಚಾಲನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT