ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಗೌರವಗಳೊಂದಿಗೆ ಅಂಬರೀಷ್‌ ಪಂಚಭೂತದಲ್ಲಿ ಲೀನ, ಕಣ್ಣೀರ ವಿದಾಯ

Last Updated 26 ನವೆಂಬರ್ 2018, 14:42 IST
ಅಕ್ಷರ ಗಾತ್ರ

ಬೆಂಗಳೂರು:ನಾಡಿನ ಜನರ ಮೆಚ್ಚಿನ ನಟನಾಗಿ, ರಾಜಕಾರಣಿಯಾಗಿ, ಆಪ್ತ ಗೆಳೆಯನಾಗಿದ್ದ ಅಂಬರೀಷ್‌ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಕಂಠೀರವ ಸ್ಟುಡಿಯೊದಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಅಂಬರೀಷ್‌ ಪುತ್ರ ಅಭಿಷೇಕ್‌, ತಂದೆಯ ದೇಹವನ್ನು ಇರಿಸಿದ್ದ ಚಿತೆಗೆ 5.55ಕ್ಕೆಅಗ್ನಿ ಸ್ಪರ್ಶ ಮಾಡಿದರು. ಅಂಬರೀಷ್‌ ಅವರ ಪತ್ನಿ ಸುಮಲತಾ ಅವರ ಮಾರ್ಗದರ್ಶನದಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಅಭಿಷೇಕ್‌ ಹಾಗೂ ಕುಟುಂಬದವರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ಅಂಬರೀಷ್‌ಗೆ ವಿದಾಯದ ಮುತ್ತನಿತ್ತ ಸುಮಲತಾ
ಅಂಬರೀಷ್‌ಗೆ ವಿದಾಯದ ಮುತ್ತನಿತ್ತ ಸುಮಲತಾ

ಅಂತ್ಯಕ್ರಿಯೆ ಸ್ಥಳಕ್ಕೆ ಬರುತ್ತಿದ್ದಂತೆ ಸುಮಲತಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದರು. ಸ್ಥಳದಲ್ಲೇ ಹಾಜರಿದ್ದ ವೈದ್ಯರು ಚಿಕಿತ್ಸೆ ನೀಡಿದ ಬಳಿಕ, ಅವರು ಚೇತರಿಸಿಕೊಂಡರು.

ಅಂತ್ಯಕ್ರಿಯೆ ಪೂಜಾ ಕೈಂಕರ್ಯದಲ್ಲಿ ‍‍ಪರೋಹಿತರು ವಿಷ್ಣು ಸಹಸ್ರನಾಮ, ಶಾಂತಿ ಮಂತ್ರ ಪಠಣ ಮಾಡಿದರು. ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಬಳಿಕ, ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಸಿಎಂಗೆ ನೀಡಲಾಯಿತು. ಸಿಎಂ ಅದನ್ನು ಸುಮಲತಾ ಅವರಿಗೆ ನೀಡಿದರು.

ಪತಿಯ ಪಾದ ಹಿಡಿದು ಕಣ್ಣೀರಿಟ್ಟ ಸುಮಲತಾ
ಪತಿಯ ಪಾದ ಹಿಡಿದು ಕಣ್ಣೀರಿಟ್ಟ ಸುಮಲತಾ

ಧ್ವಜ ಹಸ್ತಾಂತರ; ಕಣ್ಣೀರಿಟ್ಟ ಸುಮಲತಾ
ಅಂಬರೀಷ್‌ ಅವರ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರ ಧ್ವಜವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಂಬರೀಷ್

ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಿದರು. ಧ್ವಜ ಸ್ವೀಕರಿಸಿದ ಸುಮಲತಾ ಅವರಿಗೆ ದುಃಖ ಉಮ್ಮಳಿಸಿ ಬಂತು, ಧ್ವಜ ಹಿಡಿದು ಕಣ್ಣೀರಿಟ್ಟರು.

ಇದಕ್ಕೂ ಮೊದಲು ನಟರಾದ ಅಜಯ್‌, ದ್ರುವ ಸರ್ಜಾ, ಶ್ರೀನಗರ ಕಿಟ್ಟಿ, ದುನಿಯಾ ವಿಜಯ್‌, ಸಾಧು ಕೊಕಿಲಾ, ಶ್ರೀನಾಥ್‌, ತೆಲುಗು ನಟ ಮೋಹನ್‌ ಬಾಬು, ರವಿಚಂದ್ರನ್‌, ಶಿವರಾಜ್‌ ಕುಮಾರ್‌, ದರ್ಶನ್, ಯಶ್‌, ಪುನೀತ್‌ ರಾಜ್‌ಕುಮಾರ್‌, ಅರ್ಜುನ್‌ ಸರ್ಜಾ, ದೊಡ್ಡಣ್ಣ, ಜಗ್ಗೇಶ್‌, ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ಮಾಜಿ ಡಿಸಿಎಂ ಆರ್‌.ಅಶೋಕ್‌, ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಸಚಿವರುಗಳಿಂದ ಅಂತಿಮ ನಮನ ಸಲ್ಲಿಸಿದರು.

ಚಿತ್ರನಟ, ಮಾಜಿ ಸಚಿವ ಅಂಬರೀಷ್ ಅವರ ಅಂತಿಮ ಯಾತ್ರೆ ಸೋಮವಾರ ಬೆಂಗಳೂರಿನಲ್ಲಿ ಯಶವಂತಪುರ ಮೇಲುಸೇತುವೆ ಮೂಲಕ ಹಾದು ಹೋಯಿತು -ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.
ಚಿತ್ರನಟ, ಮಾಜಿ ಸಚಿವ ಅಂಬರೀಷ್ ಅವರ ಅಂತಿಮ ಯಾತ್ರೆ ಸೋಮವಾರ ಬೆಂಗಳೂರಿನಲ್ಲಿ ಯಶವಂತಪುರ ಮೇಲುಸೇತುವೆ ಮೂಲಕ ಹಾದು ಹೋಯಿತು -ಪ್ರಜಾವಾಣಿ ಚಿತ್ರ/ ಕೃಷ್ಣಕುಮಾರ್‌ ಪಿ.ಎಸ್.
ಕಣ್ಣೀರಿಟ್ಟ ಸುಮಲತಾ
ಕಣ್ಣೀರಿಟ್ಟ ಸುಮಲತಾ

13 ಕಿ.ಮೀ. ದೂರ ಸಾಗಿದ ಯಾತ್ರೆ; ಅಭಿಮಾನಿಗಳ ಸಾಗರ
ಕಂಠೀರವ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೊವರೆಗೆ 13 ಕಿ.ಮೀ. ದೂರ ಸಾಗಿ ಬಂದ ಅಂತಿಮ ಯಾತ್ರೆಯಲ್ಲಿ ಅಭಿಮಾನಿಗಳು ಸಾಗರವೇ ಹರಿದುಬಂತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟರು.

ಕಂಠೀರವ ಸ್ಟುಡಿಯೊ ಸುತ್ತ ಮುತ್ತ ಸಂಚಾರ ಬಂದ್ ಆಗಿತ್ತು. ಭದ್ರತೆಗಾಗಿ ಬೆಂಗಳೂರು ನಗರದಲ್ಲಿ 11 ಸಾವಿರ ಪೊಲೀಸರ ನಿಯೋಜನೆ ಮಾಡಲಾಗಿತ್ತು.

ಪಾರ್ಥಿವ ಶರೀರವನ್ನು ಹೊತ್ತು ಮೆರವಣಿಗೆ ತೆರಳಿದ ವಾಹನಕ್ಕೆ 1,800 ಕೆ.ಜಿ. ಹೂವಿನಿಂದ ಅಲಂಕಾರ ಮಾಡಲಾಗಿತ್ತು.

ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್‌ ಅವರು ಅಂಬರೀಷ್‌ ಪತ್ನಿ ಸುಮಲತಾ ಅವರಿಗೆ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. –ಪ್ರಜಾವಾಣಿ ಚಿತ್ರ
ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್‌ ಅವರು ಅಂಬರೀಷ್‌ ಪತ್ನಿ ಸುಮಲತಾ ಅವರಿಗೆ ಪಾರ್ಥಿವ ಶರೀರದ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. –ಪ್ರಜಾವಾಣಿ ಚಿತ್ರ

ಅಂಬರೀಷ್‌ ಕುರಿತು ಓದಲೇ ಬೇಕಾದ ಈ ಹತ್ತು ಸುದ್ದಿಗಳು

ದಿಗ್ಗಜ ನಟ ಅಂಬರೀಷ್‌ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ತಬ್ಬಲಿಯಾಗಿದೆ. ಅಂಬರೀಷ್‌ ಅವರ ಸಿನಿಯಾನಮತ್ತು ಜೀವನ ರೋಚಕವಾಗಿದ್ದು ಅವರ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಷಯಗಳು ಸಾಕಷ್ಟಿವೆ. ಈ ಕುರಿತು ಓದಲೆಬೇಕಾದಹತ್ತು ಸುದ್ದಿಗಳು ಇಲ್ಲಿವೆ.

1)ಅಂಬಿ: ‘ತೆರೆದ ಪುಸ್ತಕ’ಕ್ಕೆ ಉದಾಹರಣೆ
ಅಂಬರೀಷ್ ಅವರನ್ನು ‘ಜೇಡರಬಲೆ’ಯಲ್ಲಿ ಸಂದರ್ಶನ ಮಾಡಬೇಕು ಅನ್ನುವ ಆಸೆ ನನಗೆ ಬಹಳ ದಿನಗಳಿಂದ ಇತ್ತು. ಆದರೆ ಅವರು ಕಾರ್ಯಕ್ರಮದಲ್ಲಿ ಏನು ಹೇಳುತ್ತಾರೋ, ನನ್ನನ್ನು ಹೇಗೆ ನನ್ನ ಬಲೆಯಲ್ಲೇ ಕೆಡವಿಬಿಡುತ್ತಾರೋ ಎಂಬ ಆತಂಕವೂ ಇತ್ತು. ನನ್ನ ಟಿ.ವಿ. ಸಂದರ್ಶನ ಕಾರ್ಯಕ್ರಮಗಳ ಆರಂಭದ ದಿನದಲ್ಲೇ ಅಂಬರೀಷ್ ಅವರನ್ನು ಭೇಟಿಯಾಗಿದ್ದಾಗ, ‘ಕಾರ್ಯಕ್ರಮದಲ್ಲಿ ಭಾಗವಹಿಸಿ’ ಎಂದು ಅವರನ್ನು ಆಹ್ವಾನಿಸಿದ್ದೆ...ದೀಪಕ್‌ ತಿಮ್ಮಯ

2)ಅಂಬಿ ಅಜಾತಶತ್ರು; ಆದರೆ ಅವನಿಗೆ ಅವನೇ ಶತ್ರು
ನನ್ನ 50 ವರ್ಷಗಳ ಗೆಳೆಯ ಅಂಬಿ. ಅವನು ಎಲ್ಲರಿಗೂ ಅಜಾತಶತ್ರುವಾಗಿದ್ದ; ಆದರೆ ಅವನಿಗೆ ಅವನೇ ಶತ್ರುವಾಗಿಬಿಟ್ಟ. ಎಲ್ಲ ವಿಷಯಗಳಲ್ಲೂ ಡೋಂಟ್‌ಕೇರ್‌ ಸ್ವಭಾವ. ಅವನ ಬಗ್ಗೆಯೇ ಅವನು ಕೇರ್‌ ತಗೊಳ್ಳಿಲ್ಲ...ರಾಜೇಂದ್ರ ಸಿಂಗ್ ಬಾಬು

3)ಮಂಡ್ಯ ಮಿಠಾಯಿ, ಮೊಟ್ಟೆ, ಕೈಮಾ ಸಾರು!
ನಗರದ ಕಾರೆಮನೆ ಗೇಟ್‌ನಲ್ಲಿರುವ ಮಿಠಾಯಿ ಅಂಗಡಿ ಬೆಳಕಿಗೆ ಬಂದಿದ್ದೇ ರೆಬಲ್‌ಸ್ಟಾರ್‌ ಅಂಬರೀಷ್‌ ಅವರಿಂದ. ಮಹದೇವಯ್ಯನ ಕೈಯಿಂದ ತಯಾರಾಗುತ್ತಿದ್ದ ತೆಂಗಿನಕಾಯಿ, ಬೆಲ್ಲದ ಮಿಠಾಯಿ ಎಂದರೆ ಅಂಬರೀಷ್‌ ಬಾಯಲ್ಲಿ ಸದಾ ನೀರು ಬರುತ್ತಿತ್ತು.

4)ಕಾರು ಕೊಡಿಸದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಅಂಬಿ
ಅಪ್ಪ ಕಾರು ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಅಂಬರೀಷ್‌ ಅವರು ಗಲಾಟೆ ಮಾಡಿ ಮನೆಬಿಟ್ಟು ಸುಮಾರು ಏಳು ತಿಂಗಳ ಕಾಲ ಮೈಸೂರಿನಲ್ಲೇ ಇದ್ದ ನಮ್ಮ ಮನೆಯಲ್ಲಿ ಬಂದು ನೆಲೆಸಿದ್ದರು. ಕೊನೆಗೂ ಅವರ ಅಪ್ಪ ಕಾರು ಖರೀದಿಸಲು ದುಡ್ಡು ಕೊಟ್ಟ ಬಳಿಕ ಮನೆಗೆ ವಾಪಸಾಗಿದ್ದರು. ಹಾಗೆ ಅವರು ಮೊದಲು ಖರೀದಿಸಿದ ಕಾರು ಹೆರಾಲ್ಡ್‌, ಅದರ ನಂಬರ್‌ 1011. ಆ ಬಳಿಕ ಆರು ತಿಂಗಳಿಗೊಂದರಂತೆ ಕಾರು ಬದಲಾಯಿಸಿದ್ದರು...ವಿಜಯಲಕ್ಷ್ಮಿ ಸಿಂಗ್

5)ಜಾತಕದ ಬೆನ್ನು ಹತ್ತಿದ್ದರೇ ಅಂಬಿ?
ಉಸಿರಾಟದ ತೊಂದರೆಗೆ ಚಿಕಿತ್ಸೆ ‍ಪಡೆಯಲು ಸಿಂಗಪುರಕ್ಕೆ ಹೋಗಿ ಬಂದ ಬಳಿಕ ರೆಬೆಲ್‌ಸ್ಟಾರ್‌ ಅಂಬರೀಷ್ ತಮ್ಮ ಆರೋಗ್ಯದ ಕುರಿತು ಸ್ವಲ್ಪ ಹೆಚ್ಚೇ ಚಿಂತಿತರಾಗಿದ್ದರು. ತೀರಾ ಇತ್ತೀಚೆಗೆ ತಮ್ಮ ಜಾತಕವನ್ನೂ ಹಲವು ಆಪ್ತರಿಗೆ ಕಳುಹಿಸಿಕೊಟ್ಟು, ಸಲಹೆ ಪಡೆದಿದ್ದರು ಎನ್ನುವುದು ಗೊತ್ತಾಗಿದೆ.

6)ಅಭಿಮಾನಿಗಳಿಗೆ ಅಂಬರೀಷ್ ಬರೆದಿದ್ದ ಪತ್ರ
ಎಲ್ರಿಗು ನಮಸ್ಕಾರ, ಇದೇನಪ್ಪಾ, ಅಂಬರೀಷ್‌ ಅವ್ರು ನಮಸ್ಕಾರ– ನಮಸ್ಕಾರ ಅಂತ ಹೇಳ್ತ ಇದ್ದಾರೆ. ಅವ್ರಿಗೆ ವಯಸ್ಸಾಯ್ತು ಅಂತಾ ಅಂದ್ಕೋಬೇಡಿ. ತುಂಬಾ ವರ್ಷಗಳ ನಂತರ ನಿಮ್ಮ ಜತೆ ಈ ಪತ್ರದ ಮುಖಾಂತರ ಮಾತಾಡ್ಬೇಕು ಅನಿಸ್ತು. ಅದಕ್ಕೆ ಒಂದು ಕಾರಣಾನೂ ಇದೆ. ಹುಟ್ಟಿದ್ದು ಮಂಡ್ಯ, ಕುಡಿದಿದ್ದು ಕಾವೇರಿ.

7)ಸಿಗರೇಟ್ ಬಿಟ್ರೆ ಎರಡು ದಿನ ಹೆಚ್ಚು ಬದುಕ್ತೀನಿ ಅಷ್ಟೆ..!
ಸಿಗರೇಟಿನ ಹೊಗೆ. ಸ್ವಲ್ಪ ಕೆಮ್ಮು. ಅದ್ಯಾಕೋ ಕಣ್ಣಿನಿಂದ ಆಗಾಗ್ಗೆ ನೀರು ತೊಟ್ಟಿಕ್ಕುತ್ತಿತ್ತು. ಕೈಗೆಟಕುವಂತೆಯೇ ಒಂದು ಟವೆಲ್ ಇಟ್ಟುಕೊಂಡಿದ್ದ ಅವರು ಪದೇ ಪದೇ ಕಣ್ಣೀರು ಒರೆಸುತ್ತಿದ್ದರು. "ಡ್ರಿಂಕ್ಸ್ ಬಿಟ್ಟಿದ್ದೀರಂತೆ, ಈ ಸಿಗರೇಟ್ ಏಕೆ ಬಿಟ್ಟಿಲ್ಲ..?' ಎಂದು ಮಾತಿನ ಮಧ್ಯೆ ಕೇಳಿದ್ದೆ. "ಬಿಡಬೇಕೂಂತ ಮಾಡಿದ್ದೆ. ಏ... ಏನ್... ಬಿಟ್ರೆ ಎರಡು ದಿನ ಹೆಚ್ಚು ಬದುಕ್ತೀನಿ. ಇಲ್ಲಾಂದ್ರೆ ಎರಡು ದಿನ ಮೊದಲು ಹೋಗ್ತೀನಿ ಅಷ್ಟೆ...'

8)ಅಂಬರೀಷ್‌: ನಟನಷ್ಟೇ ಅಲ್ಲ
ಅವರ ಬಳಿ ಇರುವ ಬೌನ್ಸಾದ ಚೆಕ್ಕುಗಳನ್ನು ಲೆಕ್ಕ ಹಾಕಿದರೆ ಏಳು ಕೋಟಿ ರೂಪಾಯಿ ಮೀರೀತು. ಅವರದ್ದು ಒರಟು ಮಾತು, ಹೃದಯ ಮೃದು. ಅಷ್ಟೊಂದು ಅಸ್ತವ್ಯಸ್ತವಾಗಿ ಬದುಕುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಇಂಥ ಒರಟೊರಟಾದ ಒಬ್ಬ ನಟನಿಗೆ ಇಷ್ಟೊಂದು ಅಭಿಮಾನಿಗಳು ಸಿಕ್ಕಿದ್ದಾದರೂ ಹೇಗೆ?- ಹೀಗೆ ಹಲವು ಸಿಕ್ಕುಗಳ ಸಮೇತ ಗುರುತು ಮೂಡಿಸಿದ ವ್ಯಕ್ತಿತ್ವ ಅಂಬರೀಷ್‌ ಅವರದು.

9)ರಾಜಕೀಯದಲ್ಲೂ ಅಂಬಿ ರೆಬೆಲ್‌
ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂದೇ ಗುರುತಿಸಿಕೊಂಡಿದ್ದ ಅಂಬರೀಷ್‌, ರಾಜಕಾರಣಿಯಾದ ಮೇಲೂ ‘ರೆಬೆಲ್‌’ ಗುಣವನ್ನು ಬಿಟ್ಟಿರಲಿಲ್ಲ.ಸಿನಿಮಾದಿಂದ ರಾಜಕೀಯಕ್ಕೆ ಹೊರಳಿದ್ದ ಅಂಬರೀಷ್‌, ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಸಮ್ಮುಖದಲ್ಲಿ 1994ರಲ್ಲಿ ಕಾಂಗ್ರೆಸ್ ಸೇರಿದ್ದರು.

10)ಅಂಬಿಗೆ ನಿಜಕ್ಕೂ ವಯಸ್ಸಾಯ್ತಾ?
ಅಂಬರೀಶ್‌ ಜೊತೆಗಿನ ಸಂದರ್ಶನವೆಂದರೆ ಸಂತೆಯಲ್ಲಿ ಮಾತು ಹೆಕ್ಕಿದಂತೆ. ಅವರ ತುಂಡರಿಸಿದ ಮಾತುಗಳಲ್ಲಿ ಕನ್ನಡ ಸಿನಿಮಾ ಹಾಗೂ ಕರ್ನಾಟಕ ರಾಜಕಾರಣಕ್ಕೆ ಸಂಬಂಧಿಸಿದ ಅಮೂಲ್ಯ ವಿವರಗಳು ಸುಳಿದುಹೋಗುತ್ತವೆ. ‘ಸಿನಿಮಾ ಮತ್ತು ರಾಜಕಾರಣ ಸಾಕು’ ಎನ್ನುತ್ತಲೇ ತಮ್ಮ ನೆಚ್ಚಿನ ಎರಡೂ ಕ್ಷೇತ್ರಗಳ ಬಗ್ಗೆ ಮಾತನಾಡಿದ ಅವರ ಉತ್ಸಾಹವನ್ನು ನೋಡಿದರೆ, ಅವರು ಮಾಡಬೇಕಾದ ಕೆಲಸ ಇನ್ನೂ ಸಾಕಷ್ಟು ಬಾಕಿಯುಳಿದಿದೆ ಎನ್ನಿಸುತ್ತದೆ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT