ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಅಂಬರೀಷ್‌ಗೆ ಕಂಬನಿ ಮಿಡಿದ ಜನಸಾಗರ

ಕನ್ನಡ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಮಠಾಧೀಶರ ನುಡಿನಮನ
Last Updated 12 ಜನವರಿ 2019, 16:00 IST
ಅಕ್ಷರ ಗಾತ್ರ

ಮಂಡ್ಯ: ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶನಿವಾರ ವಿವಿಧ ಪಕ್ಷಗಳ ಮುಖಂಡರು, ಚಿತ್ರರಂಗದ ಗಣ್ಯರು, ಮಠಾಧೀಶರು ಅಂಬರೀಷ್‌ಗೆ ನುಡಿನಮನ ಸಲ್ಲಿಸಿದರು.

ಅಖಿಲ ಕರ್ನಾಟಕ ಅಂಬರೀಷ್‌ ಅಭಿಮಾನಿಗಳ ಸಂಘ ಆಯೋಜಿಸಿದ್ದ ಕಾರ್ಯಕ್ರಮವನ್ನು ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಉದ್ಘಾಟಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂವಾವ್‌ ಅವರು, ‘ಅಂಬರೀಷ್‌ ವ್ಯಕ್ತಿತ್ವ ಮತ್ತೊಬ್ಬರಿಗೆ ಬರಲು ಸಾಧ್ಯವಿಲ್ಲ. ಅವರಿಗೆ ಅವರೇ ಸಾಟಿ. ರಾಜ್ಯಕ್ಕೆ, ದೇಶಕ್ಕೆ ಅವರು ವಿಶೇಷ ವ್ಯಕ್ತಿಯಾಗಿದ್ದರು. ನೇರ ನುಡಿಗಾಗಿ ಜನರು ಇಷ್ಟಪಡುತ್ತಿದ್ದರು. ಅವರು ರಾಜಕೀಯ ಕ್ಷೇತ್ರದಲ್ಲಿ ಇದ್ದರೂ ನಮ್ಮಂಥ ರಾಜಕಾರಣಿ ಆಗಿರಲಿಲ್ಲ. ಅಂಬರೀಷ್ ವ್ಯಕ್ತಿತ್ವ ರಾಜಕೀಯ ಹಾಗು ಚಿತ್ರರಂಗ ಸೇರಿ ನಿಜಜೀವನದ ನಾಯಕತ್ವ ಬಿಂಬಿಸುವಂತಿತ್ತು. ಕನ್ನಡ ಚಿತ್ರರಂಗದಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ. ಆದರೆ ಅಂಬರೀಷ್ ಅವರಂತೆ ಜನರೊಂದಿಗೆ ಮುಕ್ತವಾಗಿ, ಮುಗ್ಧವಾಗಿ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಅಂಬರೀಷ್ ಚಿತ್ರರಂಗ, ರಾಜಕೀಯ ಹಾಗೂ ಹಾಗೂ ನೈಜ ಜೀವನವನ್ನು ಸಂತೋಷದಿಂದ ಕಳೆದಿದ್ದಾರೆ’ ಎಂದರು.

‘ಇಂದು ರಾಜಕಾರಣಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನೂ ಬಿಟ್ಟುಕೊಡುವುದಿಲ್ಲ. ಆದರೆ ಅವರು ಕಾವೇರಿ ನೀರಿಗಾಗಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸಾಧನೆ ಶಾಶ್ವತವಾಗಿರಲಿದೆ. ಅಭಿಷೇಕ್ ಕೂಡ ಎತ್ತರಕ್ಕೆ ಬೆಳೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಅವರ ಬೆಳವಣಿಗೆಗೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು’ ಎಂದರು.

ನಟ ಜಗ್ಗೇಶ್‌ ಮಾತನಾಡಿ ‘ಅಂಬರೀಷ್‌ ಆತ್ಮ ಅಭಿಷೇಕ್‌ ಮೂಲಕ ವಾಪಸ್‌ ಖಂಡಿತಾ ಬರುತ್ತದೆ. ಅವರಲ್ಲಿ ಬಡವರಿಗೆ ಅನ್ನ ಹಾಕುವ, ಸಹಾಯ ಮಾಡುವ, ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣವಿತ್ತು. ನಾನು ಚಿತ್ರರಂಗದಲ್ಲಿ ನಾಯಕನಾಗಲು ಬಹಳ ಸಹಾಯ ಮಾಡಿದರು. ಅವರ ಪುತ್ರ ಅಭಿಷೇಕ್‌ ಚಿತ್ರರಂಗ ಪ್ರವೇಶ ಮಾಡುತ್ತಿದ್ದಾರೆ. ಅವರಿಗೆ ಎಲ್ಲರ ಆಶೀರ್ವಾದ ಬೇಕಾಗಿದೆ’ ಎಂದರು.

ನಟ ಶಿವರಾಜ್ ಕುಮಾರ್ ಮಾತನಾಡಿ ‘ಅಂಬರೀಷ್ ಮಾಮ ನಮ್ಮೊಂದಿಗೆ ಸದಾ ಇರುತ್ತಾರೆ. ಅವರ ಮಾತುಗಳು ನಮ್ಮೊಡನೆ ಶಾಶ್ವತವಾಗಿರುತ್ತವೆ. ಅವರು ನಮ್ಮನ್ನು ಬಿಟ್ಟು ಹೋಗಿಲ್ಲ. ರಾಜಕೀಯ, ಚಿತ್ರರಂಗ ಹಾಗೂ ಸಾರ್ವಜನಿಕ ರಂಗಕ್ಕೆ ಅಂಬರೀಷ್ ಆಶೀರ್ವಾದ ಶಾಶ್ವತವಾಗಿರುತ್ತದೆ’ ಎಂದರು.

ಹಿರಿಯ ನಟಿ ಬಿ.ಸರೋಜಾದೇವಿ ಅವರು, ‘ಅಂಬರೀಷ್ ನನ್ನ ತಮ್ಮನಂತಿದ್ದ. ಯಾವುದನ್ನೂ ಆಸೆ ಪಟ್ಟವನಲ್ಲ. ಸುಮಲತಾ ಅವರನ್ನು ಮಾತ್ರ ಆಸೆ ಪಟ್ಟಿದ್ದು ದೇವರು ಅವರನ್ನು ಪತ್ನಿಯಾಗಿ ಕರುಣಿಸಿದ್ದಾನೆ. ರಾಜಕಾರಣಿಗಳೇ ನಿಮಗೆ ಒಂದು ಮಾತು ಹೇಳುತ್ತೇನೆ, ಅಂಬರೀಷ್ ಮೊದಲು ನಮ್ಮವನು, ನಂತರ ನಿಮ್ಮವನು’ ಎಂದರು.

ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಅನ್ನದಾನೀಶ್ವರ ಸ್ವಾಮೀಜಿ, ಅಂಬರೀಷ್‌ ಪತ್ನಿ ಸುಮಲತಾ, ಪುತ್ರ ಅಭಿಷೇಕ್‌, ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಆತ್ಮಾನಂದ, ಅಂಬರೀಷ್‌ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌, ಚಲನಚಿತ್ರ ಕಲಾವಿದರಾದ ಬಿ.ಸರೋಜಾದೇವಿ, ಯಶ್‌, ಸಾಧುಕೋಕಿಲ, ದೊಡ್ಡಣ್ಣ, ರಾಕ್‌ಲೈನ್‌ ವೆಂಕಟೇಶ್‌, ಯೋಗರಾಜ್‌ ಭಟ್‌ ಇದ್ದರು.

ಕ್ರೀಡಾಂಗಣದಲ್ಲಿ ಸಾವಿರಾರು ಜನರು ತುಂಬಿದ್ದರು. ಹಾಕಲಾಗಿದ್ದ ಕುರ್ಚಿಗಳು, ಕ್ರೀಡಾಂಗಣದ ಸುತ್ತಲೂ ಇದ್ದ ಕಟ್ಟೆಯ ಮೇಲೆ ಜನರು ಕುಳಿತಿದ್ದರು. ಮಂಡ್ಯದ ಗಂಡಿಗೆ ಜೈಹಾರ ಹಾಕಿದರು.

ಜೆಡಿಎಸ್ ಶಾಸಕರ ಗೈರು
ನುಡಿನಮನ ಕಾರ್ಯಕ್ರಮಕ್ಕೆ ಜಿಲ್ಲೆಯ ಏಳೂ ಜನ ಶಾಸಕರು ಗೈರುಹಾಜರಾಗಿದ್ದರು. ಪಕ್ಷಾತೀತ ಕಾರ್ಯಕ್ರಮವಾಗಿ ಆಯೋಜಿಸಿದ್ದರೂ, ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ ಸೇರಿ ಹಲವು ಜೆಡಿಎಸ್‌ ಮುಖಂಡರು ಕ್ರೀಡಾಂಗಣದ ಕಡೆ ತಲೆ ಹಾಕಲಿಲ್ಲ. ಸಚಿವ ಡಿ.ಸಿ.ತಮ್ಮಣ್ಣ ಅಂಬರೀಷ್‌ಗೆ ಆತ್ಮೀಯವಾಗಿದ್ದರೂ ಶ್ರದ್ಧಾಂಜಲಿ ಸಭೆಗೆ ಗೈರಾದರು. ಇದರಿಂದ ಕಾರ್ಯಕ್ರಮ ರಾಜಕೀಯ ಬಣ್ಣ ಪಡೆದುಕೊಂಡಿತು.

ನಗರಸಭಾ ಸದಸ್ಯರ ವಾಗ್ವಾದ
ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆ ಬಳಿಗೆ ಬಿಡದೆ ತಳ್ಳಿದರು ಎಂಬ ಕಾರಣಕ್ಕೆ ನಗರಸಭೆ ಸದಸ್ಯರು ಪೊಲೀಸರೊಂದಿಗೆ ಗಲಾಟೆ ಮಾಡಿದರು. ವಾಗ್ವಾದ ನಡೆಸಿದ ಕಾರಣ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಜನರು ಒಂದೇ ಬಾರಿ ನುಗ್ಗಿದ ಕಾರಣ ಎಲ್ಲರನ್ನೂ ಪೊಲೀಸರು ತಳ್ಳಿದರು. ಇದರಿಂದ ನಗರಸಭಾ ಸದಸ್ಯರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಅಂಬರೀಷ್‌ಗೆ ಭಾವಚಿತ್ರಕ್ಕೆ ಕೈಮುಗಿದ ಸುಮಲತಾ
ಅಂಬರೀಷ್‌ಗೆ ಭಾವಚಿತ್ರಕ್ಕೆ ಕೈಮುಗಿದ ಸುಮಲತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT