ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧನದ ಮುನ್ನಾದಿನ ರೇಸ್ ನೋಡಿದ್ದರು..

ಕಬಡ್ಡಿ ಆಟಗಾರ, ಕುದುರೆ ರೇಸ್‌ಪ್ರಿಯ ರೆಬೆಲ್ ಸ್ಟಾರ್‌
Last Updated 25 ನವೆಂಬರ್ 2018, 20:22 IST
ಅಕ್ಷರ ಗಾತ್ರ

ಬೆಂಗಳೂರು: ‘ಶುಕ್ರವಾರ ಮಧ್ಯಾಹ್ನ ಬೆಂಗಳೂರು ರೇಸ್‌ಗೆ ಬಂದಿದ್ದರು. ಸುಮಾರು ಹೊತ್ತು ಇದ್ದು ರೇಸ್‌ ನೋಡಿ ಮನೆಗೆ ತೆರಳಿದ್ದರು. ಆದರೆ ಶನಿವಾರ ರಾತ್ರಿ ಅವರು ನಿಧನರಾದ ಸುದ್ದಿಯನ್ನು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ’–

ಬೆಂಗಳೂರು ರೇಸ್‌ ಕ್ಲಬ್‌ (ಬಿಟಿಸಿ)ಯಲ್ಲಿ ಭಾನುವಾರವಿಡೀ ದಿನ ಇದೇ ಮಾತುಗಳು ಪ್ರತಿಧ್ವನಿಸುತ್ತಿದ್ದವು. ಅಲ್ಲಿಯ ಕೆಲಸಗಾರರಿಂದ ಹಿಡಿದು ಅಧ್ಯಕ್ಷರವರೆಗೆ ಎಲ್ಲರೂ ಚಿತ್ರನಟ ಅಂಬರೀಷ್ ನಿಧನದಿಂದ ಆಘಾತಕ್ಕೊಳಗಾಗಿದ್ದಾರೆ. ಆಪ್ತ ಮಿತ್ರನನ್ನು ಅಗಲಿದ ಭಾವ ಅಲ್ಲಿ ಮಡುಗಟ್ಟಿತ್ತು. ಶೂಟಿಂಗ್‌, ಮೀಟಿಂಗ್, ಸದನ ಸಭೆಗಳ ನಡುವೆಯೂ ರೇಸ್‌ಗಳನ್ನು ವೀಕ್ಷಿಸಲು ಬರುತ್ತಿದ್ದ ಅಂಬರೀಶ್ ಕ್ಲಬ್‌ನಲ್ಲಿದ್ದವರೆಗೆಲ್ಲ ಪರಿಚಿತರು. ಡರ್ಬಿ ರೇಸ್‌ಗಳಿದ್ದಾಗಂತೂ ಅವರೇ ಇಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿದ್ದರು. ರೂಪದರ್ಶಿಗಳು, ಚಿತ್ರನಟಿಯರು ಅವರನ್ನು ಸುತ್ತುವರಿದಿರುತ್ತಿದ್ದರು. ಅವರೆಲ್ಲರೊಂದಿಗೆ ಸಲುಗೆಯಿಂದ ಹಾಸ್ಯ ಚಟಾಕಿ ಹಾರಿಸುತ್ತ, ಸಿಗರೇಟ್ ಸೇದುತ್ತ, ಸೂಟು ಬೂಟಿನಲ್ಲಿ ಅಂಬಿ ಮಿಂಚುತ್ತಿದ್ದರು. ಈಗ ಅದೆಲ್ಲ ಬರೀ ನೆನಪು ಅಷ್ಟೇ.

‘ಅದ್ಭುತ ಮನುಷ್ಯ, ಆತ್ಮೀಯ ಗೆಳೆಯ. ಮೊನ್ನೆ (ನವೆಂಬರ್ 23) ರೇಸ್‌ ನೋಡಲು ಬಂದಿದ್ದರು. ಬೆಂಗಳೂರಲ್ಲಿ ಇದ್ದಾಗ ಇಲ್ಲಿಗೆ ಬರುವುದನ್ನು ತಪ್ಪಿಸಿದವರೇ ಅಲ್ಲ. ಮೈಸೂರಿಗೆ ಹೋದಾಗ ಅಲ್ಲಿಯ ರೇಸ್‌ ಕ್ಲಬ್‌ಗೂ ಹೋಗುತ್ತಿದ್ದರು. 1992ರಲ್ಲಿ ನಮ್ಮ ಕ್ಲಬ್ ಸದಸ್ಯತ್ವ ಪಡೆದಿದ್ದರು. ಆದರೆ ಅದಕ್ಕಿಂತಲೂ ಮೊದಲೇ ಹಲವು ವರ್ಷಗಳಿಂದ ಅವರು ರೇಸ್‌ಗಳಿಗೆ ಬರುತ್ತಿದ್ದರು. ಅವರ ಕುದುರೆಗಳೂ ಇಲ್ಲಿವೆ’ ಎಂದು ಬಿಟಿಸಿ ಮುಖ್ಯಸ್ಥ ಹರಿಮೋಹನ್ ನಾಯ್ಡು ಭಾವುಕರಾದರು.

ಅವರಿಗೆ ಸೇರಿದ ‘ಸ್ಪೀಡ್‌ ಹಾಕ್’ ಎಂಬ ಕುದುರೆ ಇಲ್ಲಿದೆ. ಹೋದ ಜುಲೈನಲ್ಲಿ ಅದು ರೇಸ್‌ವೊಂದರಲ್ಲಿ ಕಪ್ ಗೆದ್ದಿತ್ತು ಎಂದು ಬಿಟಿಸಿ ಕಚೇರಿ ಮೂಲಗಳು ಹೇಳುತ್ತವೆ.

‘ಅವರು ಇಲ್ಲಿಗೆ ಬಂದರೆ ವಾತಾವರಣವೇ ಬದಲಾಗಿಬಿಡುತ್ತಿತ್ತು. ಉಲ್ಲಾಸ, ಗಡಿಬಿಡಿ, ಸಂಭ್ರಮಗಳು ತುಂಬುತ್ತಿದ್ದವು. ಇತ್ತೀಚೆಗೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರೂ ರೇಸ್‌ಪ್ರೀತಿ ಮತ್ತು ಸ್ನೇಹಮಯ ವ್ಯಕ್ತಿತ್ವದಲ್ಲಿ ಕಡಿಮೆಯಾಗಿರಲಿಲ್ಲ. ಎಲ್ಲ ಜಾಕಿಗಳನ್ನೂ. ಟ್ರೇನರ್‌ಗಳನ್ನೂ ಕರೆದು ಮಾತನಾಡಿಸಿ ಬೆನ್ನು ತಟ್ಟುತ್ತಿದ್ದರು. ದೊಡ್ಡ ನಟ, ರಾಜಕಾರಣಿ ಎಂಬ ಹಮ್ಮುಬಿಮ್ಮು ಅವರಲ್ಲಿ ಇರಲೇ ಇಲ್ಲ’ ಎಂದು ಇಲ್ಲಿಯ ಸಿಬ್ಬಂದಿ ನೆನಪಿಸಿಕೊಳ್ಳುತ್ತಾರೆ.

ಅಂಬರೀಷ್ ಕುದುರೆ ರೇಸ್ ಮಾತ್ರ ಅಲ್ಲ. ಕಾರ್ಡ್‌ಗೇಮ್‌ ಪ್ರಿಯರೂ ಆಗಿದ್ದರು. ಅಷ್ಟೇ ಅಲ್ಲ, ಕಾಲೇಜು ದಿನಗಳಲ್ಲಿ ಕಬಡ್ಡಿ ಆಟಗಾರನಾಗಿಯೂ ಮಿಂಚಿದ್ದರು.

‘ಅವರು ನನಗಿಂತ ಒಂದು ವರ್ಷ ಸೀನಿಯರ್. ಶಾರದಾವಿಲಾಸ ಕಾಲೇಜು ತಂಡದಲ್ಲಿ ಆಡುತ್ತಿದ್ದರು. ಉತ್ತಮ ಕಬಡ್ಡಿಪಟುವಾಗಿದ್ದು. ನಾನು ಅವರ ಆಟವನ್ನು ನೋಡಿದ್ದೇನೆ. ಸ್ನೇಹಿತರ ದೊಡ್ಡ ಗುಂಪು ಅವರದ್ದು. ಅವರು ಚಿತ್ರರಂಗಕ್ಕೆ ಹೋಗುವ ಮುನ್ನವೇ ಅವರ ಪರಿಚಯ ಇತ್ತು. ಟೆನಿಸ್, ಕೇರಂ, ಬ್ಯಾಡ್ಮಿಂಟನ್ ಕೂಡ ಆಡುತ್ತಿದ್ದರು’ ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿವೃತ್ತ ಮುಖ್ಯಸ್ಥ ಡಾ. ಸಿ. ಕೃಷ್ಣ ನೆನಪಿಸಿಕೊಳ್ಳುತ್ತಾರೆ.

2013ರಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ‘ಅಂಬಿ ಗೋಲ್ಡ್‌ ಕಪ್’ 60ನೇ ರಾಷ್ಟ್ರಮಟ್ಟದ ಪುರುಷ ಮತ್ತು ಮಹಿಳೆಯರ ಕಬಡ್ಡಿ ಚಾಂಪಿಯನ್‌ಷಿಪ್‌ ನಡೆದಿತ್ತು. ಆ ಟೂರ್ನಿ ನಡೆಯುವಾಗ ಪ್ರತಿದಿನವೂ ಮೈದಾನಕ್ಕೆ ಭೇಟಿ ನೀಡುತ್ತಿದ್ದರು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರುತ್ತಿದ್ದ ಅಭಿಮಾನಿಗಳು ‘ಅಂಬಿ ಅಣ್ಣ..ಜೈ’ ಎಂದು ಘೋಷಣೆ ಕೂಗುತ್ತಿದ್ದರು.

ಶನಿವಾರ ಸಂಜೆ ಅದೇ ಮೈದಾನದಲ್ಲಿ ಅವರು ಶಾಂತವಾಗಿ ಮಲಗಿದ್ದರು. ಅವರನ್ನು ನೋಡಲು ಬರುತ್ತಿರುವ ಅಭಿಮಾನಿಗಳ ದುಃಖದ ಕಟ್ಟೆ ಒಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT