ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾಷೆ ಜೀವಂತವಿದ್ದರೆ ಸಂಸ್ಕೃತಿ ಜೀವಂತ’

ಕೂ.ಗಿ. ಗಿರಿಯಪ್ಪ ಅವರ 'ಸರಳ ಕನ್ನಡ ಕಲಿಕಾ ಕ್ರಮ' ಪುಸ್ತಕ ಬಿಡುಗಡೆ ಕಾರ್ಯಕ್ರಮ
Last Updated 19 ಮಾರ್ಚ್ 2018, 11:42 IST
ಅಕ್ಷರ ಗಾತ್ರ

ರಾಮನಗರ: ‘ಭಾಷೆ ಜೀವಂತವಾಗಿರುವವರೆಗೆ ನಾವು, ನಮ್ಮ ಸಂಸ್ಕೃತಿ ಜೀವಂತವಾಗಿರುತ್ತದೆ. ಆದರೆ ಆಧನೀಕರಣಕ್ಕೆ ಒಳಗಾಗುತ್ತಿರುವ ಪದವೀಧರರು ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯುವ ಭರಾಟೆಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸುತ್ತಿದ್ದಾರೆ’ ಎಂದು ಜಯ ಕರ್ನಾಟಕ ಸಂಘಟನೆಯ ಗೌರವ ಅಧ್ಯಕ್ಷ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಸ್ಫೂರ್ತಿ ಭವನದಲ್ಲಿ ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಕೂ.ಗಿ. ಗಿರಿಯಪ್ಪ ಅವರ ‘ಸರಳ ಕನ್ನಡ ಕಲಿಕಾ ಕ್ರಮ’ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದ ಅಭಿವೃದ್ಧಿಯಲ್ಲಿ ಭಾಷೆಗಳು ಪ್ರಮುಖ ಪಾತ್ರ ವಹಿಸಿವೆ. ಸಂವಹನ ಮಾಡಲು ಭಾಷೆ ಅತ್ಯವಶ್ಯಕವಾಗಿದೆ. ಆದರೆ, 20 ವರ್ಷಗಳಿಂದ ಈಚೆಗೆ ಜಾಗತೀಕರಣದ ಪ್ರಭಾವದಿಂದ ಭಾಷೆಗಳು ಸೊರಗುತ್ತಿವೆ. ಕನ್ನಡ ನಾಡಿನಲ್ಲಿ ಕನ್ನಡಿಗರೇ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಕನ್ನಡಿಗರೇ ಹೋರಾಟ ನಡೆಸುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಇಂತಹ ಸಂದರ್ಭದಲ್ಲಿ ಕೂ.ಗಿ. ಗಿರಿಯಪ್ಪ ಅವರ ಪುಸ್ತಕ ಸರಳವಾಗಿ ಕನ್ನಡ ಭಾಷೆ ಕಲಿಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್‌ ಮಾತನಾಡಿ, ಇಂದು ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಭಾಷೆಯನ್ನು ವ್ಯಾಕರಣಬದ್ಧವಾಗಿ ಕಲಿಸುತ್ತಿಲ್ಲ. ಮಕ್ಕಳಿಗೆ ಶಾಲಾ ಹಂತದಲ್ಲೇ ಕನ್ನಡ ಭಾಷೆಯನ್ನು ಕ್ರಮಬದ್ಧವಾಗಿ ಕಲಿಸಬೇಕು ಎಂದು ತಿಳಿಸಿದರು.

ಪುಸ್ತಕ ಕುರಿತು ಶಾಂತಿನಿಕೇತನ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಕೆ.ಪಿ. ಶಿವಪ್ಪ ಮಾತನಾಡಿ, ಈ ಪುಸ್ತಕದಲ್ಲಿ ಆಧುನಿಕ ಬೋಧನಾ ಪದ್ಧತಿಯನ್ನು ಅಳವಡಿಸಿಕೊಂಡು ಕನ್ನಡ ಭಾಷೆಯನ್ನು ಪರಿಣಾಮಕಾರಿಯಾಗಿ ಹೇಗೆ ಕಲಿಸಬಹುದು ಎಂಬುದನ್ನು ವಿಸ್ತೃತವಾಗಿ ತಿಳಿಸಿ ಕೊಡಲಾಗಿದೆ. ಶಿಕ್ಷಕರು, ವಿದ್ಯಾರ್ಥಿಗಳು ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸ್ನೇಹ ಕೂಟ ಸಂಸ್ಥೆಯ ಅಧ್ಯಕ್ಷ ಎಚ್.ಪಿ. ನಂಜೇಗೌಡ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಪೋಷಕರೇ ಕಡೆಗಣಿಸುತ್ತಿದ್ದಾರೆ. ಕನ್ನಡ ಭಾಷೆ ಉಳಿಸುವುದು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು, ಆಚರಣೆಗೆ ಬರಬೇಕು ಎಂದು ತಿಳಿಸಿದರು.

ಕೂ.ಗಿ. ಗಿರಿಯಪ್ಪ ಮಾತನಾಡಿ ‘ಇದು ನನ್ನ 53ನೇ ಪುಸ್ತಕವಾಗಿದೆ. ಕನ್ನಡ ಭಾಷೆಯನ್ನು ಸರಳವಾಗಿ ಹೇಗೆ ಕಲಿಯಬಹುದು ಎಂಬುದನ್ನು ಈ ಕೃತಿಯಲ್ಲಿ ತಿಳಿಸಿಕೊಟ್ಟಿದ್ದೇನೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಗಾಯಕರಾದ ವಿ.ರಾಜು, ವಿಜಯ್‌ ಜಂಬೇ, ಅಭಿಷೇಕ್‌, ಪುಟ್ಟರಾಜು, ಮಧು, ವಿಜಯ್‌ ಗೀತಗಾಯನ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಸಂಘಟಕರಾದ ಕವಿತಾ ರಾವ್, ರಾ.ಬಿ. ನಾಗರಾಜ್, ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಕೆ.ಎಸ್. ಭಾಸ್ಕರ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಸಂಶೋಧಕ ಎಸ್. ರುದ್ರೇಶ್ವರ, ಗಾಯಕ ಶಿವವೆಂಕಟಯ್ಯ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ಜಿಲ್ಲಾ ಲೇಖಕರ ವೇದಿಕೆಯ ಉಪಾಧ್ಯಕ್ಷ ಬಿ. ಚಲುವರಾಜು ಮತ್ತೀಕೆರೆ, ನಮನ ಎಂ. ಚಂದ್ರು, ರೈತ ಸಂಘದ ಮುಖಂಡ ಚೀಲೂರು ಮುನಿರಾಜು ಇದ್ದರು.

ಜಿ.ಟಿ. ಕೃಷ್ಣ ಸ್ವಾಗತಿಸಿದರು. ಶಿಕ್ಷಕಿ ಎಚ್.ಕೆ. ಶೈಲಾ ಶ್ರೀನಿವಾಸ್ ನಿರೂಪಿಸಿದರು. ಜಿಲ್ಲಾ ಲೇಖಕರ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಸ್ನೇಹಕೂಟ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT