ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ: ಜಿ.ಟಿ.ದೇವೇಗೌಡ ಭರವಸೆ

ವಿಧಾನಪರಿಷತ್ತಿನಲ್ಲಿ ಉತ್ತರ
Last Updated 4 ಜುಲೈ 2018, 12:16 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿಯವರು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಕಾಲೇಜು ಆರಂಭಿಸುವುದನ್ನು ತಡೆಯಲು ಶೀಘ್ರವೇ ಖಾಸಗಿ ವಿಶ್ವವಿದ್ಯಾಲಯಗಳ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಬಿಜೆಪಿಯ ಎನ್‌.ರವಿಕುಮಾರ್‌ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ಈಗಾಗಲೇ ಕೃಷಿ ಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಕಾಯ್ದೆ ತಿದ್ದುಪಡಿ ಬಳಿಕ ಕೃಷಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳನ್ನು ಕೃಷಿ ಇಲಾಖೆಗೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಧಾರವಾಡ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ಕಾಲೇಜುಗಳ ವಿದ್ಯಾರ್ಥಿಗಳು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣವೇ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರವಿಕುಮಾರ್‌ ಆಗ್ರಹಿಸಿದರು.

ದೊಡ್ಡಬಳ್ಳಾಪುರದಲ್ಲಿ ಸ್ಥಾಪನೆಯಾಗಿರುವ ಖಾಸಗಿ ಕೃಷಿ ವಿಶ್ವವಿದ್ಯಾಲಯವು ಎಲ್ಲ ನಿಯಮಗಳನ್ನು ಗಾಳಿಗೆ ತೂರಿದೆ. ಸರ್ಕಾರ ನಿಗದಿ ಮಾಡಿರುವ ಶುಲ್ಕಕ್ಕಿಂತ 10 ಪಟ್ಟು ಅಧಿಕ ಶುಲ್ಕ ಪಡೆಯುತ್ತಿದೆ. ಸರ್ಕಾರದ ಆದೇಶಗಳಿಗೂ ಬೆಲೆ ನೀಡುತ್ತಿಲ್ಲ ಎಂದು ಅವರು ದೂರಿದರು.

ಆಗ ಮಧ್ಯಪ್ರವೇಶಿಸಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಇದೊಂದು ಗಂಭೀರ ವಿಚಾರ. ಸರ್ಕಾರ ಹೇಳಿಕೆ ನೀಡಲೇಬೇಕು ಎಂದು ಒತ್ತಾಯಿಸಿದರು.

ಕಾಯ್ದೆಗೆ ತಿದ್ದುಪಡಿ ತರುವಾಗ ಅದರ ಸಾಧಕ– ಬಾಧಕಗಳನ್ನೂ ನೋಡಬೇಕಾಗುತ್ತದೆ. ಖಾಸಗಿಯವರು ನ್ಯಾಯಾಲಯದ ಮೆಟ್ಟಲು ಹತ್ತಲೂ ಬಹುದು. ಸರ್ಕಾರ ನ್ಯಾಯೋಚಿತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಕಾನೂನು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT