ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡದಿಗಾಗಿ ರೂಪುಗೊಂಡ ‘ಅಮೂಲ್ಯ ಶೋಧ’

ಪುರಾತನ ಸಂಸ್ಕೃತಿ ಬಿಂಬಿಸುವ ವಸ್ತು ಸಂಗ್ರಹಾಲಯ
Last Updated 21 ನವೆಂಬರ್ 2018, 20:30 IST
ಅಕ್ಷರ ಗಾತ್ರ

ಶಿವಮೊಗ್ಗ:ಇಲ್ಲಿನ ನಿವೃತ್ತ ಪ್ರಾಂಶುಪಾಲರೊಬ್ಬರು ಅಗಲಿದ ತಮ್ಮ ಮಡದಿಯ ನೆನಪಿಗಾಗಿ ಭಾರತೀಯ ಪುರಾತನ ಸಂಸ್ಕೃತಿ ಪ್ರತಿಬಿಂಬಿಸುವ ಬೃಹತ್ ವಸ್ತು ಸಂಗ್ರಹಾಲಯ ನಿರ್ಮಿಸಿದ್ದಾರೆ.

ಮೊಗಲರ ದೊರೆ ಶಹಜಹಾನ್ ತನ್ನ ಮಡದಿಗಾಗಿ ತಾಜ್‌ಮಹಲ್‌ ನಿರ್ಮಿಸಿದ್ದ ಸಂಗತಿಯನ್ನು ಇತಿಹಾಸ ತಿಳಿದ ಎಲ್ಲರೂ ಬಲ್ಲರು. ಅದೇ ರೀತಿ ಎಚ್. ಖಂಡೋಬರಾವ್ ಅವರು ಇತಿಹಾಸ ಪ್ರಾಧ್ಯಾಪಕಿಯಾಗಿದ್ದ ಪತ್ನಿ ಯಶೋದಾ ಅವರ ನೆನಪಿಗಾಗಿ ಸುಂದರ ಕಟ್ಟಡ ನಿರ್ಮಿಸಿ, ‘ಅಮೂಲ್ಯ ಶೋಧ’ ಆರಂಭಿಸಿದ್ದಾರೆ.

ನೆರೆಮನೆ ಹುಡುಗಿಯ ಪ್ರೇಮದ ಪರಿ: 1960ರ ದಶಕದಲ್ಲಿ ಭದ್ರಾ ಜಲಾಶಯದ ಹಿನ್ನೀರಿನಿಂದ ಊರು ಮುಳುಗಿದ ನಂತರ ಯಶೋದಾ ಅವರ ಕುಟುಂಬ ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರದಿಂದ ಶಿವಮೊಗ್ಗಕ್ಕೆ ಬಂದು ನೆಲೆಸಿತ್ತು. ಅಪ್ಪಾಜಿ ರಾವ್ ಕಾಂಪೌಂಡ್‌ನಲ್ಲಿದ್ದ ಖಂಡೋಬರಾವ್ ಪರಿಚಯವಾಗಿತ್ತು. ನಂತರ ಅವರ ನಡುವೆ ಪ್ರೇಮ ಚಿಗುರೊಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಅತ್ಯಂತ ಸಂಭ್ರಮದ ಜೀವನ ಸಾಗುವಾಗಲೇ ಯಶೋದಾ ಅವರ ಎರಡುಕಿಡ್ನಿಗಳುವಿಫಲವಾಗಿದ್ದವು. ಪತ್ನಿಯನ್ನು ಉಳಿಸಿಕೊಳ್ಳಲು ಖಂಡೋಬರಾವ್ ತಮ್ಮ ಒಂದು ಕಿಡ್ನಿಯನ್ನು ಕಸಿಗಾಗಿ ದಾನ ಮಾಡಿದ್ದರು. ಕೆಲವು ವರ್ಷ ಆರೋಗ್ಯವಾಗಿದ್ದ ಯಶೋದಾ 2007ರಲ್ಲಿ ಕೊನೆಯುಸಿರೆಳೆದರು. ಮಡದಿ ಅಗಲಿಕೆಯ ನೋವು ಮರೆಯಲು ಸಾಧ್ಯವಾಗದ ಅವರು ಕುವೆಂಪು ವಿಶ್ವವಿದ್ಯಾಲಯದ ಮಾರ್ಗದ ಲಕ್ಕಿನಕೊಪ್ಪ ಸರ್ಕಲ್‌ನಲ್ಲಿದ್ದ ತೋಟದಲ್ಲಿ ಅವರಿಗಾಗಿ ಒಂದು ಸ್ಮಾರಕ ನಿರ್ಮಿಸಿದರು. ಪತಿ–ಪತ್ನಿ ಇಡೀ ಜೀವನ ಗಳಿಸಿದ್ದ ದುಡಿಮೆಯ ಹಣವನ್ನೆಲ್ಲ ಸುರಿದು ‘ಅಮೂಲ್ಯ ಶೋಧ’ ಆರಂಭಿಸಿದರು. ಆ ಮೂಲಕ ಪತ್ನಿ ಮೇಲಿನ ಪ್ರೀತಿ ಅಮರವಾಗಿಸಿದರು.

ಮೂರು ಎಕರೆಯಲ್ಲಿ ಮೈದಳೆದ ‘ಶೋಧ’: ಶಿವಮೊಗ್ಗ ನಗರದಿಂದ 10 ಕಿ.ಮೀ ದೂರದಲ್ಲಿರುವ ಲಕ್ಕಿನಕೊಪ್ಪ ವೃತ್ತದ 3 ಎಕರೆ ಪ್ರದೇಶದಲ್ಲಿ ‘ಅಮೂಲ್ಯ ಶೋಧ’ ಮೈದಳೆದಿದೆ. ನಾಣ್ಯ ದರ್ಶಿನಿ, ಮಲೆನಾಡು ದರ್ಶನಿ ಹಾಗೂ ಭಾರತ ದರ್ಶಿನಿ ಎಂಬ ಮೂರು ವಿಭಾಗಗಳಲ್ಲಿ ಈ ವಸ್ತು ಸಂಗ್ರಹಾಲಯವಿದೆ.

ನಾಣ್ಯ ವಿಭಾಗದಲ್ಲಿ ಭಾರತದ ಮೊದಲ ರಾಜವಂಶಗಳ ಆಳ್ವಿಕೆಯ ಕಾಲದ ನಾಣ್ಯಗಳಿಂದ ಹಿಡಿದು ದೇಶ, ವಿದೇಶಗಳದ್ದೂ ಸೇರಿದಂತೆ ಎಲ್ಲ ಕಾಲಘಟ್ಟಗಳ ನಾಣ್ಯಗಳು, ಕರೆನ್ಸಿಗಳು ಇವೆ. ವಿಜಯನಗರಅರಸರ ಕಾಲದ ಬಂಗಾರದ ನಾಣ್ಯಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.ಮಲೆನಾಡಿನ ಜನರು ಅನಾದಿಕಾಲದಿಂದಲೂ ಬಳಸುತ್ತಿದ್ದ ಮರದ ಸಾಮಗ್ರಿಗಳು, ಕೃಷಿ ಪದ್ಧತಿ, ಜನಜೀವನ, ಬದುಕಿನ ರೀತಿ ಬಿಂಬಿಸುವ ಪರಿಕರಗಳನ್ನು ಪ್ರತ್ಯೇಕ ವಿಭಾಗದಲ್ಲಿ ಜೋಡಿಸಿಡಲಾಗಿದೆ.ಭಾರತ ದರ್ಶಿನಿಯಲ್ಲಿ ಭಾರತವನ್ನು ಆಳಿದ ರಾಜ ಮಹಾರಾಜರು ಬಳಸುತ್ತಿದ್ದ ಉಡುಪುಗಳು, ಕತ್ತಿ, ತಲಾರಿ, ಈಟಿ, ಭರ್ಜಿ, ನಗಾರಿ, ಕಹಳೆಗಳು. ತಾಳೆಗರಿ, ಗ್ರಾಮಾಫೋನ್, ರೇಡಿಯೊ, ಸಂಗೀತ ಪರಿಕರಗಳು, ಹಳೆಯ ವೈವಿಧ್ಯಮಯ ಸಾಮಗ್ರಿಗಳನ್ನು ಕಾಣಬಹುದು.

ಕೆಳದಿ ಸಾಮ್ರಾಜ್ಯದ ಪ್ರಸಿದ್ಧ ಅರಸ ಶಿವಪ್ಪನಾಯಕನ ಅರಮನೆ ತದ್ರೂಪ ನೋಡುಗರ ಮನ ಸೂರೆಗೊಳ್ಳುತ್ತದೆ. ಭಾನುವಾರದಿಂದ ಮಂಗಳವಾರದವರೆಗೆ ಮೂರು ದಿನ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ಇರುತ್ತದೆ. ದೂರದಿಂದ ಬಂದವರಿಗೆ ಅಲ್ಲಿ ಕ್ಯಾಂಟಿನ್ ಸೌಲಭ್ಯವೂ ಇದೆ.

‘ಭಾರತೀಯ ಸಂಸ್ಕೃತಿ, ಮಲೆನಾಡಿನ ಬದುಕು ಈಚೆಗೆ ಕಣ್ಮೆರೆಯಾಗುತ್ತಿದೆ. ಪತ್ನಿಯ ನೆನಪಿನಲ್ಲಿ ದೇಶದ ಪ್ರಾಚೀನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ‘ಅಮೂಲ್ಯ ಶೋಧ’ ಆರಂಭಿಸಿದೆ’ ಎನ್ನುತ್ತಾರೆ ಖಂಡೋಬರಾವ್.

ಸರ್ಕಾರ, ಸಂಘ, ಸಂಸ್ಥೆಗಳಿಗೇ ಸಾಧ್ಯವಾಗದ ಇಂತಹ ಕಾರ್ಯ ಒಬ್ಬರಿಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಗೆ, ಸಭಾಂಗಣದ ಮಧ್ಯದಲ್ಲಿ ಇರುವ ಮಡದಿಯ ಅತಿದೊಡ್ಡ ಭಾವಚಿತ್ರದತ್ತ ಬೆರಳು ತೋರಿಸುತ್ತಾಮೌನಕ್ಕೆ ಜಾರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT