ಬಾಲ್ಯದಿಂದಲೇ ಹೋರಾಟದ ಕಿಚ್ಚು: ಕನಸಾಗಿಯೇ ಉಳಿಯಿತು ಪ್ರಧಾನಿಯಾಗುವ ಆಸೆ

7

ಬಾಲ್ಯದಿಂದಲೇ ಹೋರಾಟದ ಕಿಚ್ಚು: ಕನಸಾಗಿಯೇ ಉಳಿಯಿತು ಪ್ರಧಾನಿಯಾಗುವ ಆಸೆ

Published:
Updated:
Deccan Herald

ಹುಬ್ಬಳ್ಳಿ: ಬಾಲ್ಯದಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿದ್ದ ಅನಂತಕುಮಾರ್‌, ವಿದ್ಯೆ ಕಲಿತ ವಾಣಿಜ್ಯ ನಗರಿಯಲ್ಲಿಯೇ ಹೋರಾಟದ ಕಿಚ್ಚು ಮೈಗೂಡಿಸಿಕೊಂಡಿದ್ದರು. ಯಾರೇ ವಿರೋಧಿಸಿದರೂ, ತಮಗೆ ಸರಿ ಅನಿಸಿದ್ದನ್ನು ಮಾಡಲು ಅವರು ಹಿಂದೆ–ಮುಂದೆ ನೋಡುತ್ತಿರಲಿಲ್ಲ.

1980ಕ್ಕೂ ಮೊದಲು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಿಯಮಿತವಾಗಿ ಪರೀಕ್ಷೆಗಳು ನಡೆಯುತ್ತಿರಲಿಲ್ಲ. ಪರೀಕ್ಷೆ ಹತ್ತಿರಕ್ಕೆ ಬಂದಾಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ಮಾಡಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸುತ್ತಿದ್ದರು. ಆದ್ದರಿಂದ, 1981ರಲ್ಲಿ ಕುಲಪತಿಯಾಗಿ ಬಂದ ಡಿ.ಎಂ. ನಂಜುಂಡಪ್ಪ ಅವರು ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದರು.

ಇದಕ್ಕೆ ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿತ್ತು. ಆದರೆ, ನಂಜುಂಡಪ್ಪ ಅವರ ನಿರ್ಧಾರವನ್ನು ಆಗ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿದ್ದ ಅನಂತಕುಮಾರ್‌ ಬೆಂಬಲಿಸಿದ್ದರು.

ಇದರಿಂದ ಮತ್ತಷ್ಟು ಕುಪಿತರಾದ ವಿದ್ಯಾರ್ಥಿಗಳು ಕಾಡಸಿದ್ಧೇಶ್ವರ ಕಲಾ ಕಾಲೇಜಿನಲ್ಲಿ ಅವರಿಗೆ ಘೇರಾವ್‌ ಹಾಕಿದ್ದರು. ಆದರೂ, ಅವರು ವಿದ್ಯಾರ್ಥಿಗಳ ಮನವೊಲಿಸಿ ಆ ವರ್ಷದಿಂದ ವೇಳಾಪಟ್ಟಿಯಂತೆ ಪರೀಕ್ಷೆ ಸರಿಯಾಗಿ ನಡೆಯುವಂತೆ ನೋಡಿಕೊಂಡರು.

ಹೀಗೆ, ಅಂದುಕೊಂಡಿದ್ದನ್ನು ಮಾಡಿ ತೋರಿಸುವಲ್ಲಿ ಅವರು ನಿಷ್ಣಾತರಾಗಿದ್ದರು. ಅವರೊಂದಿಗೆ ಎಬಿವಿಪಿ ಚಟುವಟಿಕೆಗಳಲ್ಲಿ ಜೊತೆ ಜೊತೆಗೆ ಹೆಜ್ಜೆಹಾಕಿದ ಎಬಿವಿಪಿ ಹಿರಿಯ ಮುಖಂಡ ಅಚ್ಯುತ್‌ ಲಿಮಯೆ ಅವರ ಎಲ್ಲ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಆ ನೆನಪುಗಳನ್ನು ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

‘1975ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿ ನಾವು ಹೋರಾಟ ಮಾಡಿದ್ದೆವು. ಆ ವರ್ಷದ ಡಿ. 8ರಂದು ಪಿ.ಸಿ. ಜಾಬಿನ ಕಾಲೇಜಿನಲ್ಲಿ ಸತ್ಯಾಗ್ರಹ ಮಾಡಿದ್ದ ನಮ್ಮನ್ನು ಬಂಧಿಸಿ 40 ದಿನ ಜೈಲಿನಲ್ಲಿಟ್ಟಿದ್ದರು. ಆಗ ಅವರೊಂದಿಗೆ ನಾನೂ ಜೈಲಿಗೆ ಹೋಗಿದ್ದೆ. ಈ ಘಟನೆ ನಮ್ಮನ್ನು ಹತ್ತಿರಗೊಳಿಸಿತು. ಆಗ ನಾನು ದ್ವಿತೀಯ ಪಿಯುಸಿ ಓದುತ್ತಿದ್ದೆ. ಅನಂತ್‌ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದ’ ಎಂದು ಅನಂತಕುಮಾರ್‌ ಅವರೊಂದಿಗಿನ ಒಡನಾಟವನ್ನು ಬಿಚ್ಚಿಟ್ಟರು.

‘ಈದ್ಗಾ ಮೈದಾನದ ಹೋರಾಟದ ಬಗ್ಗೆ ಪ್ರಹ್ಲಾದ ಜೋಶಿ ಜೊತೆ ಸೇರಿ ರೂಪುರೇಷೆ ಸಿದ್ಧಪಡಿಸಿದ್ದರು. ಸಂಘಟನಾ ಚತುರತೆಯನ್ನು ಮೈಗೂಡಿಸಿಕೊಂಡಿದ್ದರು’ ಎಂದರು.

ವಿದ್ಯಾರ್ಥಿ ಹಂತದಲ್ಲಿದ್ದಾಗಲೇ ರಾಜಕಾರಣದಲ್ಲಿ ಉತ್ತುಂಗಕ್ಕೆ ಏರುವ ಕನಸು ಕಂಡಿದ್ದರು. ಅದಕ್ಕೆ ಬೇಕಾದ ನಾಯಕತ್ವ ಗುಣ  ಕೂಡ ಅವರಲ್ಲಿತ್ತು ಎಂದು ಲಿಮಯೆ ನೆನಪಿಸಿಕೊಂಡರು.

‘ಕಾಂಗ್ರೆಸ್‌ ಬಿಟ್ಟು ಬೇರೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದ್ದ ಕಾಲದಲ್ಲೂ, ‘ನಾನು  ಪ್ರಧಾನಿಯಾಗುತ್ತೇನೆ’ ಎಂದಿದ್ದರು. ಪ್ರಥಮ ಪಿಯು ಇದ್ದಾಗಲೇ ಅವರಲ್ಲಿ ಆ ಗುರಿಯಿತ್ತು. ಬದುಕಿನುದ್ದಕ್ಕೂ ಅನೇಕ ಹೋರಾಟಗಳನ್ನು ಮಾಡಿ ರಾಜಕೀಯದಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದರೂ ಪ್ರಧಾನಿಯಾಗುವ ಕನಸು ಮಾತ್ರ ಈಡೇರಲಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !