ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಮ್ಯಾಚ್‌ ರಾಜಕಾರಣಿ ನಾನಲ್ಲ, ಟ್ವೆಂಟಿ–20 ಆಡುವವನು: ಆನಂದ್‌ ಸಿಂಗ್‌

ಬಿಜೆಪಿ ಬಿಟ್ಟು 14 ತಿಂಗಳು ವನವಾಸ ಅನುಭವಿಸಿದ್ದೇನೆ
Last Updated 24 ನವೆಂಬರ್ 2019, 11:18 IST
ಅಕ್ಷರ ಗಾತ್ರ

ಹೊಸಪೇಟೆ: ‘ಶ್ರೀರಾಮಚಂದ್ರ 14 ವರ್ಷ ವನವಾಸಕ್ಕೆ ಹೋದಂತೆ ನಾನು ಬಿಜೆಪಿ ಬಿಟ್ಟು 14 ತಿಂಗಳು ವನವಾಸ ಅನುಭವಿಸಿದ್ದೇನೆ. ಈಗ ಪುನಃ ಬಿಜೆಪಿಗೆ ಬಂದಿರುವುದಕ್ಕೆ ಸಂತಸವಾಗಿದೆ.ಟೆಸ್ಟ್‌ ಮ್ಯಾಚ್‌ ರಾಜಕಾರಣಿ ನಾನಲ್ಲ. ಟ್ವೆಂಟಿ–20 ಆಡುವವನು. ಇದು ನನ್ನ ಕೊನೆ ಚುನಾವಣೆ. ನಮ್ಮ ಕುಟುಂಬದಲ್ಲಿ ನನ್ನಿಂದಲೇ ರಾಜಕೀಯ ಕೊನೆಯಾಗುತ್ತದೆ' ಎಂದು ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಹೇಳಿದರು.

ತಾಲ್ಲೂಕಿನ ಭುವನಹಳ್ಳಿಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ‘2018ರ ವಿಧಾನಸಭೆ ಚುನಾವಣೆಯಲ್ಲಿ ನನ್ನ ಮೇಲೆ ಕ್ಷೇತ್ರದ ಜನ ಭರವಸೆ ಇಟ್ಟು ಕಾಂಗ್ರೆಸ್‌ನಿಂದ ಗೆಲ್ಲಿಸಿದ್ದರು. ಆದರೆ, ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಏರ್ಪಟ್ಟಿದ್ದರಿಂದಾಗಿ ಕ್ಷೇತ್ರಕ್ಕೆ ಏನೂ ಮಾಡಲು ಆಗಲಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವೊಮ್ಮೆ ಸ್ವಾರ್ಥಿಗಳಾಗಬೇಕಾಗುತ್ತದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕ್ಷೇತ್ರದಲ್ಲಿ ನೀರಾವರಿ ಯೋಜನೆ ಜಾರಿಗೊಳಿಸುವ ವಿಚಾರ ಪ್ರಸ್ತಾಪಿಸಿದಾಗ ತಕ್ಷಣವೇ ಅದಕ್ಕೆ ಒಪ್ಪಿಗೆ ಕೊಟ್ಟು ಅನುದಾನ ಬಿಡುಗಡೆ ಮಾಡಿದರು. ನೂತನ ವಿಜಯನಗರ ಜಿಲ್ಲೆ ಮಾಡುವ ಭರವಸೆಯೂ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಮಂತ್ರಿ ಬೇಕಾ? ಅಥವಾ ವಿಜಯನಗರ ಜಿಲ್ಲೆ ಬೇಕಾ? ಎಂಬ ಎರಡು ಆಯ್ಕೆಗಳು ನನ್ನ ಮುಂದೆ ಬಂದರೆ ಖಂಡಿತವಾಗಿಯೂ ಮಂತ್ರಿ ಸ್ಥಾನ ತ್ಯಾಗ ಮಾಡಿ, ಜಿಲ್ಲೆ ಮಾಡಬೇಕು ಎನ್ನುವುದರ ಪರ ನಿಲ್ಲುವೆ’ ಎಂದು ಹೇಳಿದರು.

‘ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಶಾಸಕ ಸೋಮಶೇಖರ್‌ ರೆಡ್ಡಿ ಅವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಹೊರತು ಅದನ್ನು ವಿರೋಧಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ತಿಳಿಸುವ ಸ್ವಾತಂತ್ರ್ಯ ಇದೆ. ರೆಡ್ಡಿ ಅವರು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಆದರೆ, ಎಲ್ಲೂ ವಿರೋಧಿಸಿಲ್ಲ. ಖುದ್ದು ನಾನೇ ಅವರೊಂದಿಗೆ ಮಾತನಾಡಿರುವೆ. ಆದರೆ, ಮಾಧ್ಯಮಗಳಲ್ಲಿ ವಿರೋಧಿಸಿದ್ದಾರೆ ಎಂಬರ್ಥದಲ್ಲಿ ಸುದ್ದಿಗಳು ಬರುತ್ತಿವೆ’ ಎಂದು ಪ್ರತಿಕ್ರಿಯಿಸಿದರು.

‘ವಿಜಯನಗರ ಜಿಲ್ಲೆ ರಚನೆ ಮಾಡಲು ಬಿಡೊಲ್ಲ’ ಎಂದು ಶನಿವಾರ ವಿಜಯನಗರ ಕ್ಷೇತ್ರದ ಚುನಾವಣೆಯಲ್ಲಿ ಆನಂದ್‌ ಸಿಂಗ್‌ ಪರ ಪ್ರಚಾರ ಕೈಗೊಂಡಿದ್ದ ವೇಳೆ ಸೋಮಶೇಖರ್‌ ರೆಡ್ಡಿ ಹೇಳಿಕೆ ಕೊಟ್ಟಿದ್ದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT