ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನಂದ್‌ ಸಿಂಗ್‌ ಮಹಲ್‌ ನೋಡಿ ಜಗ ಮೆಚ್ಚಿರಬಹುದು’

Last Updated 14 ಜುಲೈ 2019, 13:55 IST
ಅಕ್ಷರ ಗಾತ್ರ

ಹೊಸಪೇಟೆ: ‘ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಶಾಸಕ ಆನಂದ್‌ ಸಿಂಗ್‌ ಅವರ ಮಹಲ್‌ ನೋಡಿ ಜಗ ಅವರನ್ನು ಮೆಚ್ಚಿರಬಹುದು. ಹೀಗಾಗಿ ಜಗಮೆಚ್ಚಿದ ಮಗ ಎಂದು ಕರೆಯಿಸಿಕೊಳ್ಳುತ್ತಿರಬಹುದು’ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ವ್ಯಂಗ್ಯವಾಡಿದರು.

‘ನಾನು ದಾರಿ ತಪ್ಪಿದ ಮಗನಲ್ಲ. ಜಗಮೆಚ್ಚಿದ ಮಗ’ ಎಂದು ಇತ್ತೀಚೆಗೆ ಆನಂದ್‌ ಸಿಂಗ್‌ ನೀಡಿದ್ದ ಹೇಳಿಕೆಗೆ ಉಗ್ರಪ್ಪನವರುಭಾನುವಾರ ಸಂಜೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ವಿಜಯನಗರ ಕ್ಷೇತ್ರಕ್ಕೆ ಆನಂದ್‌ ಸಿಂಗ್‌ ಅವರ ಕೊಡುಗೆ ಏನು? ತುಂಗಭದ್ರಾ ಜಲಾಶಯದಲ್ಲಿ ಅಪಾರ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಸಕ್ಕರೆ ಕಾರ್ಖಾನೆ ಬಂದ್‌ ಆಗಿದೆ. ಈ ವಿಷಯಗಳ ಕುರಿತು ಎಂದಾದರೂ ಸದನದಲ್ಲಿ ಮಾತನಾಡಿದ್ದಾರೆಯೇ?ಸಮಾಜಕ್ಕೆ ಅವರ ಕೊಡುಗೆ ಏನು’ ಎಂದು ಕೇಳಿದರು.

‘ಅನೇಕ ವಿಷಯಗಳ ಕುರಿತು ಆನಂದ್‌ ಸಿಂಗ್‌ ಈಗ ಮಾತನಾಡುತ್ತಿದ್ದಾರೆ. ಆದರೆ, ಅವರು ಶಾಸಕರಿದ್ದಾಗ, ಮಂತ್ರಿಯಿದ್ದಾಗ ಏಕೆ ಮಾತನಾಡಲಿಲ್ಲ. ಆ ಕೆಲಸಗಳನ್ನು ಏಕೆ ಮಾಡಲಿಲ್ಲ. ಅವರು ತಮ್ಮ ವ್ಯವಹಾರ, ಸಂಪತ್ತು, ಅವರ ಮೇಲಿರುವ ಆರೋಪಗಳಿಂದ ಬಚಾವ್‌ ಆಗಲು ಬಿಜೆಪಿ ಓಲೈಸುತ್ತಿದ್ದಾರೆ. ಅವರಿಗೆ ಈಗಲೂ ಅವಕಾಶವಿದೆ. ನಾನು ಎಡವಿದ್ದೇನೆ. ಕ್ಷಮಿಸಿ ಎಂದು ಹೇಳಿ ಪಕ್ಷಕ್ಕೆ ವಾಪಸ್‌ ಬರಬಹುದು. ಅವರಿಗೆ ಗೌರವ ಬರುತ್ತದೆ. ಆಗ ಅವರನ್ನು ಜಗ ಮೆಚ್ಚುತ್ತದೆ’ ಎಂದರು.

‘ಆನಂದ್ ಸಿಂಗ್‌ ಅವರು ಆರಂಭದಲ್ಲಿ ತೋರಿಸಿದ ಉತ್ಸಾಹದಿಂದ ಪಕ್ಷಕ್ಕೆ ಸೇರಿಸಿಕೊಂಡೆವು. ಜತೆಗೆ ಚುನಾವಣೆಯಲ್ಲಿ ಟಿಕೆಟ್‌ ಕೂಡ ನೀಡಿದೆವು. ಆದರೆ, ಡೊಂಕು ಹೋಗಿಲ್ಲ. ಅವರು ದಾರಿ ತಪ್ಪಿ ಬಹಳ ದಿನಗಳೇ ಆಯ್ತು. ಒಂದು ನಂಬಿಕೆಯಿಂದ ಅವರಿಗೆ ಟಿಕೆಟ್‌ ಕೊಟ್ಟಿದ್ದೆವು. ಅವರಿಗೆ ಕಾಂಗ್ರೆಸ್‌ನಿಂದ ಯಾವುದೇ ಅನ್ಯಾಯವಾಗಿಲ್ಲ. ಈಗೇಕೇ ಏಕಾಏಕಿ ರಾಜೀನಾಮೆ ಕೊಡುತ್ತಿದ್ದಾರೆ’ ಎಂದು ಪ್ರಶ್ನೆ ಮಾಡಿದರು.

‘ಜನರ ಕೈಕಾಲು ಹಿಡಿದು ಚುನಾವಣೆಯಲ್ಲಿ ಗೆದ್ದ ಶಾಸಕರು ತಮ್ಮ ಸ್ವಾರ್ಥ ಸಾಧನೆಗೆ ಪಕ್ಷಕ್ಕೆ ದ್ರೋಹ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ತತ್ವ, ಸಿದ್ಧಾಂತಗಳ ಮೇಲೆ ನಂಬಿಕೆಯಿಲ್ಲ. ಅವರು ವ್ಯಾಪಾರಿ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆಯುವುದು ತಾಯಿಗೆ ದ್ರೋಹ ಬಗೆದಂತೆ’ ಎಂದು ಎಚ್ಚರಿಸಿದರು.

ಮುಖಂಡರಾದಅಮಾಜಿ ಹೇಮಣ್ಣ, ಮೊಹಮ್ಮದ್‌ ಇಮಾಮ್ ನಿಯಾಜಿ, ತಮ್ಮನಳ್ಳೆಪ್ಪ, ಗುಜ್ಜಲ ನಾಗರಾಜ್, ತಾರಿಹಳ್ಳಿ ವೆಂಕಟೇಶ್, ಸೋಮಪ್ಪ, ತಿಪ್ಪೇಸ್ವಾಮಿ, ಪಾಂಡು ಗುಜರಿ ಷಾಷ, ಗೋಪಿ, ಶ್ರೀನಿವಾಸ, ವಿಜಯಕುಮಾರ್, ಬಾಣದ ಗಣೇಶ್, ವಿನಾಯಕ ಶೆಟ್ಟರ್, ತಾರಿಹಳ್ಳಿ ಹನುಮಂತಪ್ಪ, ನಿಂಬಗಲ್ ರಾಮಕೃಷ್ಣ, ಡಿ.ವೆಂಕಟರಮಣಪ್ಪ, ಎಚ್.ಎಲ್.ಕೋಟ್ರೆಶ್, ಸಿ.ಕೃಷ್ಣ, ಎಚ್.ಮಂಜುನಾಥ್, ಅಬುಲ್ ಕಲಾಂ ಅಜಾದ್, ಲಿಯಾಕತ್, ರಮೇಶ, ಕನ್ನೇಶ್ವರ, ಪರಮೆಶ್ವರಪ್ಪ, ಕೆ.ರಾಮಪ್ಪ, ಕ್ಯಾರಾಲಿನ್ ಲೂಸಿಯಾ, ಬಾನೂಬಿ, ಸರಸ್ವತಿ, ರೋಫಿಯಾ ನನ್ನೆಮ್ಮಾ, ಶಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT