ಗುರುವಾರ , ಸೆಪ್ಟೆಂಬರ್ 19, 2019
29 °C

ಸೆಂಥಿಲ್ ‘ರಾಜದ್ರೋಹಿ’: ಅನಂತಕುಮಾರ ಹೆಗಡೆ

Published:
Updated:

ಕಾರವಾರ: ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌  ವಿರುದ್ಧ ಸಂಸದ ಅನಂತಕುಮಾರ ಹೆಗಡೆ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಸೋಮವಾರ ರಾತ್ರಿ ವಿಡಿಯೊ ಅಪ್‌ಲೋಡ್ ಮಾಡಿರುವ ಅವರು, ಸೆಂಥಿಲ್‌ ಅವರನ್ನು ‘ರಾಜದ್ರೋಹಿ’ ಎಂದು ಕರೆದಿದ್ದಾರೆ.

ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಾಜೀನಾಮೆ 

‘ಸೆಂಥಿಲ್ ರಾಜೀನಾಮೆಯನ್ನು ಕೇವಲ ವ್ಯಕ್ತಿಯ ರಾಜೀನಾಮೆ ಎಂದು ಭಾವಿಸಬಾರದು. ಭಾರತೀಯ ಆಡಳಿತ ಸೇವೆಯ ಒಬ್ಬ ಅಧಿಕಾರಿ, ಸಂಸತ್ತು ಬಹುಮತದ ಆಧಾರದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಪ್ರಶ್ನಿಸುವ ದುಃಸ್ಸಾಹಸಕ್ಕೆ ಕೈಹಾಕಿದ್ದಾರೆ. ಬಹುಶಃ ಸರ್ಕಾರಕ್ಕೆ ಇದಕ್ಕಿಂತ ದೊಡ್ಡ ದ್ರೋಹ ಇನ್ನೊಂದು ಇಲ್ಲ ಎಂದು ಭಾವಿಸಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು. ರಾಜ್ಯಪಾಲರಿಗೆ ಸಂಪೂರ್ಣವಾದ ಅಧಿಕಾರವಿದೆ. ಜನ ಕೂಡ ಇದನ್ನೇ ಬಯಸುತ್ತಿದ್ದಾರೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಅತಿಯಾದ ಸ್ವಚ್ಛಂದವಿದು, ಇದನ್ನು ನಾನು ಸ್ವಾತಂತ್ರ್ಯ ಎಂದು ಭಾವಿಸುವುದಿಲ್ಲ. ಸ್ವೇಚ್ಛಾಚಾರ ಈ ರೀತಿಯ ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಈ ರೀತಿಯ ದುಷ್ಕೃತ್ಯ ನಡೆದಿರುವುದರ ಕಾರಣವನ್ನು ಬಯಲಿಗೆಳೆಯಬೇಕು. ಇದರ ಹಿಂದಿರುವ ಕಾಣದ ಕೈವಾಡವೇನಿದೆ ಎಂಬುದನ್ನು ಜನರ ಮುಂದಿಡಬೇಕು. ಖಂಡಿತವಾಗಿ ಇದು ಅಕ್ಷಮ್ಯ ಅಪರಾಧ’ ಎಂದು ಅವರು ಹೇಳಿದ್ದಾರೆ.

‘ಸರ್ಕಾರ ತೆಗೆದುಕೊಂಡಿರುವ ತೀರ್ಮಾನವನ್ನು ಆಡಳಿತ ಸೇವೆಯಲ್ಲಿರುವ ಅಧಿಕಾರಿ ಪ್ರಶ್ನಿಸಲು ಸಾಧ್ಯವೇ ಇಲ್ಲ, ಮಾಡಲೂ ಬಾರದು. ಬಹುಮತದ ಆಧಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಪ್ರಶ್ನಿಸುವುದು ಅವನ ದುರಂಹಕಾರ, ಅಸಭ್ಯತೆ’ ಎಂದು ಏಕವಚನದಲ್ಲಿ ಟೀಕಿಸಿದ್ದಾರೆ.

ಇದನ್ನೂ ಓದಿ: ಮರಳು ಮಾಫಿಯಾಕ್ಕೆ ಮೂಗುದಾರ ಹಾಕಿದ್ದ ಸೆಂಥಿಲ್‌

Post Comments (+)