ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ ಕುಮಾರ್‌ ಹೆಗಡೆಗೆ ಕೊಕ್‌

ಬಿಜೆಪಿ ತಾರಾ ಪ್ರಚಾರಕರ ಪಟ್ಟಿ
Last Updated 27 ಮಾರ್ಚ್ 2019, 19:12 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಗೆ 36 ತಾರಾ ಪ್ರಚಾರಕರ ಪಟ್ಟಿಯನ್ನು ಬಿಜೆಪಿ ರಾಜ್ಯ ಘಟಕ ಸಿದ್ಧಪಡಿಸಿದ್ದು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಸ್ಥಾನ ಸಿಕ್ಕಿಲ್ಲ. ಮೊದಲ ಬಾರಿಗೆ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಹೆಸರು ಪಟ್ಟಿಗೆ ಸೇರ್ಪಡೆಯಾಗಿದೆ.

‘ಸಂವಿಧಾನವನ್ನು ಬದಲಿಸಲೆಂದೇ ನಾವು ಬಂದಿದ್ದೇವೆ’ ಎಂದು ಅನಂತ ಕುಮಾರ್‌ ಹೆಗಡೆ ಹೇಳಿಕೆ ನೀಡಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಹೆಗಡೆ ಅವರು ಪಕ್ಷದ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇತ್ತೀಚೆಗೆ ಹೇಳಿದ್ದರು. ‘ಅವರು ಜಾಸ್ತಿ ಮಾತನಾಡುತ್ತಾರೆ. ಹಲವಾರು ಬಾರಿ ಅವರು ಶಕ್ತಿ, ಹಲವಾರು ಸಂದರ್ಭದಲ್ಲಿ ಅವರು ಹೊಡೆತ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿಪಾದಿಸಿದ್ದರು. ಲೋಕಸಭಾ ಚುನಾವಣೆಗೆ ಟಿಕೆಟ್‌ ಹಂಚಿಕೆ ವೇಳೆಯೂ ಉತ್ತರ ಕನ್ನಡ ಕ್ಷೇತ್ರಕ್ಕೆ ಇಬ್ಬರ ಹೆಸರನ್ನು ಬಿಜೆಪಿ ರಾಜ್ಯ ಘಟಕ ಶಿಫಾರಸು ಮಾಡಿತ್ತು. ಇದೀಗ, ತಾರಾ ಪ್ರಚಾರಕ ಪಟ್ಟಿಯಿಂದಲೂ ಹೆಸರು ಕೈಬಿಟ್ಟಿದೆ. ಜತೆಗೆ, ಪಕ್ಷದ ಅಭ್ಯರ್ಥಿಗಳ ಪೈಕಿ ಶ್ರೀನಿವಾಸ ಪ್ರಸಾದ್‌ ಅವರಿಗೆ ಮಾತ್ರ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಪಕ್ಷದ ರಾಜ್ಯ ಉಸ್ತುವಾರಿ ಪಿ.ಮುರಳೀಧರ ರಾವ್‌, ಸಹ ಉಸ್ತುವಾರಿ ಪುರಂದರೇಶ್ವರಿ, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೆಸರು ಅಗ್ರಪಂಕ್ತಿಯಲ್ಲಿದೆ.

ಶಾಸಕರಾದ ಎಂ. ಗೋವಿಂದ ಕಾರಜೋಳ, ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ಆರ್.ಅಶೋಕ್‌, ಶ್ರೀರಾಮುಲು, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ವಿ.ಸೋಮಣ್ಣ, ಎಸ್‌.ಸುರೇಶ್‌ ಕುಮಾರ್‌, ವಿ.ಸುನೀಲ್‌ ಕುಮಾರ್‌, ಬಸವರಾಜ ಬೊಮ್ಮಾಯಿ, ರಾಜೂ ಗೌಡ ನಾಯಕ್‌ ಅವರಿಗೆ ಸ್ಥಾನ ನೀಡಲಾಗಿದೆ. ನಟರಾದ ಜಗ್ಗೇಶ್‌, ತಾರಾ ಅನೂರಾಧ, ಶ್ರುತಿ, ಮಾಳವಿಕಾ ಅವಿನಾಶ್ ಹೆಸರು ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT