ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಸಿರು ಬೆಂಗಳೂರು’ ಕನಸು ಕಂಡ ಅದಮ್ಯ ಚೇತನ ಅನಂತಕುಮಾರ್

Last Updated 12 ನವೆಂಬರ್ 2018, 20:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಹಸಿರೀಕರಣದ ಕನಸು ಕಂಡಿದ್ದ ‘ಅದಮ್ಯ ಚೇತನ’ ಅನಂತ್‌ ಕುಮಾರ್‌. ಅವರು ಆರಂಭಿಸಿದ ‘ಹಸಿರು ಬೆಂಗಳೂರು’ ಅಭಿಯಾನದಡಿ ನಗರದಲ್ಲಿ 1 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಈ ‘ಹಸಿರು ಯಜ್ಞ’ದಲ್ಲಿ ಯುವಜನ ಉತ್ಸಾಹದಿಂದ ಸ್ವಯಂಸೇವಕರಾಗಿ ಭಾಗವಹಿಸುತ್ತಿದ್ದಾರೆ.

ರಾಜಧಾನಿಯಲ್ಲಿ ದಿನೇ ದಿನೇ ಹಸಿರು ಕ್ಷೀಣಿಸುತ್ತಿರುವ ಕುರಿತು ಅಧ್ಯಯನ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿತ್ತು. ರಾಜಧಾನಿಯಲ್ಲಿ ಪ್ರತಿ ಏಳು ಮಂದಿಗೆ ಒಂದು ಮರ ಮಾತ್ರ ಇದೆ ಎಂಬ ಕಳವಳಕಾರಿ ಅಂಶವನ್ನು ಈ ವರದಿ ಬಹಿರಂಗಪಡಿಸಿತ್ತು. ಪ್ರತಿ ವ್ಯಕ್ತಿಗೆ ಒಂದು ಮರವಾದರೂ ಇರಬೇಕು ಎಂಬ ಉದ್ದೇಶದಿಂದ ಅನಂತ್‌ ಕುಮಾರ್‌ ಅವರು ‘ಅದಮ್ಯ ಚೇತನ’ ಸಂಸ್ಥೆಯ ವತಿಯಿಂದ ‘ಹಸಿರು ಬೆಂಗಳೂರು’ ಅಭಿಯಾನವನ್ನು ಆರಂಭಿಸಿದ್ದರು.

ಗಿಡಗಳನ್ನು ನೆಟ್ಟು ಬೆಳೆಸುವ ಸಲುವಾಗಿ 2015ರ ಡಿಸೆಂಬರ್‌ನಲ್ಲಿ ‘ಹಸಿರು ಭಾನುವಾರ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಅಭಿಯಾನದ 150ನೇ ಕಾರ್ಯಕ್ರಮ ಲಾಲ್‌ಬಾಗ್‌ನಲ್ಲಿ ಭಾನುವಾರವಷ್ಟೇ (ನ.11) ಆಯೋಜನೆಯಾಗಿತ್ತು.

‘ಕಾರ್ಯಕ್ರಮ ಆರಂಭವಾದ ಬಳಿಕ ಒಂದು ಭಾನುವಾರವೂ ಗಿಡ ನೆಡುವುದು ನಿಂತಿಲ್ಲ. ಅನಂತ್‌ ಕುಮಾರ್‌ ಅವರುಕಾರ್ಯಬಾಹುಳ್ಯದ ನಡುವೆಯೂ ಬಿಡುವು ಮಾಡಿಕೊಂಡು ಆಗಾಗ್ಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. 2018ರ ಜುಲೈ 1ರಂದು ನಡೆದ ಹಸಿರು ಭಾನುವಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆರೋಗ್ಯ ಕ್ಷೀಣಿಸಿದ್ದರಿಂದ ಆನಂತರದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರಲಿಲ್ಲ’ ಎಂದು ಅನಂತ್‌ ಕುಮಾರ್‌ ಆಪ್ತ ಮುರಳೀಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಸಿರು ಜೀವನಶೈಲಿಯನ್ನು ಉತ್ತೇಜಿಸುವ ಸಲುವಾಗಿ ಸಂಸ್ಥೆ ‘ಸಸ್ಯಾಗ್ರಹ’ ಆಂದೋಲನ ಆರಂಭಿಸಿತ್ತು. ಮಹಾತ್ಮ ಗಾಂಧಿಯವರು ಚಂಪಾರಣ್‌ನಲ್ಲಿ ಆರಂಭಿಸಿದ್ದ ‘ಸತ್ಯಾಗ್ರಹ’ ಚಳವಳಿಗೆ 100 ವರ್ಷ ತುಂಬಿದ ಸಂದರ್ಭ ಆರಂಭಿಸಿದ್ದ ಈ ಕಾರ್ಯಕ್ರಮದಿಂದ ಪ್ರಭಾವಿತರಾಗಿ ಅನೇಕರು ನಿಸರ್ಗಸ್ನೇಹಿ ಬದುಕಿನ ಶೈಲಿಯನ್ನು ಅಳವಡಿಸಿಕೊಂಡಿದ್ದರು. ಗಿಡ ನೆಟ್ಟು ಬೆಳೆಸುವುದು, ಕೆರೆಗಳ ಸಂರಕ್ಷಣೆ, ಸಾತ್ವಿಕ ಆಹಾರ, ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಉಡುಪುಗಳ ಬಳಕೆ, ಪರಿಸರಸ್ನೇಹಿ ಮನೆಗಳ ನಿರ್ಮಾಣ,ಅಡುಗೆಮನೆಯ ಕಸದ ಮರುಬಳಕೆ, ಅಡುಗೆಗೆ ಜೈವಿಕ ಇಂಧನ ಬಳಕೆ, ಸೌರ ವಿದ್ಯುತ್‌ ಬಯೋಗ್ಯಾಸ್‌ ಉತ್ಪಾದನೆಗೆ ಉತ್ತೇಜನ ಈ ಆಂದೋಲನದ ಪ್ರಮುಖ ಅಂಶಗಳು.

ಅನಂತ್‌ ಕುಮಾರ್‌ ಅವರು ಜಯನಗರದ ಶಾಸಕರಾಗಿದ್ದ ಬಿ.ಎನ್‌. ವಿಜಯಕುಮಾರ್‌ ಜೊತೆ ಸೈಕಲ್‌ ಸವಾರಿ ಹೊರಟಿದ್ದ ಕ್ಷಣ.
ಅನಂತ್‌ ಕುಮಾರ್‌ ಅವರು ಜಯನಗರದ ಶಾಸಕರಾಗಿದ್ದ ಬಿ.ಎನ್‌. ವಿಜಯಕುಮಾರ್‌ ಜೊತೆ ಸೈಕಲ್‌ ಸವಾರಿ ಹೊರಟಿದ್ದ ಕ್ಷಣ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT