ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಮ ವಹಿಸದೇ ಯಶಸ್ಸು ಪಡೆಯುವುದು ಅಸಾಧ್ಯ: ಸಚಿವ ಅನಂತಕುಮಾರ ಹೆಗಡೆ

Last Updated 10 ಫೆಬ್ರುವರಿ 2019, 4:10 IST
ಅಕ್ಷರ ಗಾತ್ರ

ಬೆಳಗಾವಿ: ‘ಯುವಕರು ದೇಶದ ಭವಿಷ್ಯ ಎಂದು ನಾವೆಲ್ಲ ಹೇಳುತ್ತೇವೆ. ಆದರೆ, ಅದಕ್ಕೆ ಪೂರಕವಾಗಿಯುವಕರು ತಯಾರಾಗುತ್ತಿದ್ದಾರೆಯೇ’ ಎಂದು ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಪ್ರಶ್ನಿಸಿದರು.

ನಗರದ ಅಂಗಡಿ ತಾಂತ್ರಿಕ ಕಾಲೇಜಿನ ಆವರಣದಲ್ಲಿ ಕೇಂದ್ರ ಕೌಶಲ ಮಂತ್ರಾಲಯ ಸ್ಕಿಲ್ ಇಂಡಿಯಾ ಹಾಗೂ ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆಯಡಿ ಶನಿವಾರ ಏರ್ಪಡಿಸಿದ್ದ ರೋಜಗಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಬದುಕನ್ನು ರೂಪಿಸಿಕೊಳ್ಳುವ ಹಂತದಲ್ಲಿರುವ ಯುವಕರು, ಕೌಶಲಗಳನ್ನು ಅಳವಡಿಸಿಕೊಂಡು, ತಮ್ಮ ಇಷ್ಟದ ಕ್ಷೇತ್ರದಲ್ಲಿ ಮುನ್ನುಗ್ಗಬೇಕಿದೆ’ ಎಂದರು.

‘ಕಲಿಕೆ ಹಾಗೂ ಅಂಕಗಳಿಕೆಗಾಗಿ ಮಾತ್ರ ಅಧ್ಯಯನ ಮಾಡುವವರು ಹೆಚ್ಚಿನ ಸಾಧನೆ ಮಾಡುವುದು ಕಷ್ಟ. ಬದುಕಿನ ಬಗ್ಗೆ ಹುಡುಕಾಟ ನಡೆಸುವವರು ಅಸಾಧ್ಯವಾದುದನ್ನು ಸಾಧಿಸಿ ಗೆಲ್ಲುತ್ತಾರೆ. ಹೀಗಾಗಿ, ನಾವು ಸದಾಕಾಲ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರಬೇಕು. ರಕ್ತ ಕೊಡದೇ ಯುದ್ಧ ಗೆಲ್ಲಲಾಗುವುದಿಲ್ಲ. ಬೆವರು ಹರಿಸದೇ ಬದುಕಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ’ ಎಂದು ಹೇಳಿದರು.

ಕೌಶಲ ಯಶಸ್ಸಿನ ಅಸ್ತ್ರ: ‘ಸಂಸದ ಸುರೇಶ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕೌಶಲ ಎಂಬುದು ಕೇವಲ ಉದ್ಯೋಗ ನೀಡುವುದಲ್ಲ. ಅದು ಯಶಸ್ಸಿನ ಅಸ್ತ್ರವಾಗಿದೆ. ಯುವಕರು ಶಿಕ್ಷಣ ಪಡೆದ ನಂತರ ಪಾಲಕರಿಗೆ ಹೊರೆಯಾಗಿರದೇ ಕೌಶಲಗಳನ್ನು ಅಳವಡಿಸಿಕೊಂಡು, ಸ್ವಉದ್ಯೋಗ ಕೈಗೊಳ್ಳಬೇಕು’ ಎಂದು ಹೇಳಿದರು.

‘ಶಿಕ್ಷಣ ಪೂರೈಸಿದ ನಂತರ ನಮಗೆ ಉದ್ಯೋಗ ಸಿಕ್ಕೇ ಬಿಡುತ್ತದೆ ಎಂದು ವಿದ್ಯಾರ್ಥಿಗಳು ಭಾವಿಸುವುದು ತಪ್ಪು. ಶಿಕ್ಷಣ ಪಡೆದ ಕ್ಷೇತ್ರದಲ್ಲೇ ಉದ್ಯೋಗ ಮಾಡಬೇಕೇಂಬ ನಿಯಮವೂ ಇಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಹಂತದಲ್ಲೇ ಯಾವ ಉದ್ಯೋಗ ಕೈಗೊಳ್ಳಬೇಕೆಂದು ಮುಂದಾಲೋಚನೆ ಮಾಡಿ, ಪೂರ್ವತಯಾರಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಯುವಕರಲ್ಲಿ ವೃತ್ತಿ ಕೌಶಲ ವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಯವಕರು ಸದುಪಯೋಗ ಪಡೆಯಬೇಕು’ ಎಂದು ಹೇಳಿದರು.

ಶಾಸಕ ಅನಿಲ ಬೆನಕೆ ಮಾತನಾಡಿ, ‘ಅಗತ್ಯ ಕೌಶಲ ಇದ್ದರೂ ಕೂಡ ಕೆಲವೊಮ್ಮೆ ಅರ್ಹ ಅಭ್ಯರ್ಥಿಗಳಿಗೆ ಅವಕಾಶಗಳು ಸಿಗುವುದಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ, ಸತತ ಪ್ರಯತ್ನ ಮಾಡಬೇಕು’ ಎಂದರು.

ರೋಜಗಾರ್ ಮೇಳ: ಉದ್ಯೋಗ ಮೇಳದಲ್ಲಿ 45ಕ್ಕಿಂತ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.ಸಂಸದ ಅನಂತಕುಮಾರ ಹೆಗಡೆ ಹಾಗೂ ಇನ್ನಿತರರು ಕಂಪನಿಗಳ ಸ್ಟಾಲ್‌ಗಳನ್ನು ವೀಕ್ಷಿಸಿದರು. ಜಿಲ್ಲೆ ಹಾಗೂ ವಿವಿಧ ಜಿಲ್ಲೆಗಳ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡು, ನಾನಾ ಕಂಪನಿಗಳ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT