ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ: ಸಹಕಾರಿ ಒಕ್ಕೂಟ ವ್ಯವಸ್ಥೆ ಸಾಕಾರಗೊಳ್ಳಲಿ

Last Updated 19 ಜೂನ್ 2018, 5:46 IST
ಅಕ್ಷರ ಗಾತ್ರ

ನವದೆಹಲಿಯಲ್ಲಿ ಎಎಪಿ ಸರ್ಕಾರ ಹಾಗೂ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ರಾಜಕೀಯ ಬಿಕ್ಕಟ್ಟು ಮುಂದುವರಿದಿದ್ದಂತೆಯೇ ನೀತಿ ಆಯೋಗದ ನಾಲ್ಕನೇ ಆಡಳಿತ ಮಂಡಳಿ ಸಭೆ ದೆಹಲಿಯಲ್ಲಿ ನಡೆಯಿತು. ಸಹಕಾರಿ ಒಕ್ಕೂಟ ತತ್ವ ಧ್ವನಿಸುವ ಆಶಯದ ಉಲ್ಲಂಘನೆಗಾಗಿ ಪ್ರತಿಪಕ್ಷಗಳು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸಿವೆ. ಪ್ರತಿಪಕ್ಷಗಳ ಬಹುತೇಕ ಮುಖ್ಯಮಂತ್ರಿಗಳು ತಮ್ಮ ಭಾಷಣಗಳಲ್ಲಿ ಅನೇಕ ವಿಚಾರಗಳಲ್ಲಿ ಕೇಂದ್ರದ ನಿಲುವನ್ನು ಪ್ರಶ್ನಿಸಿವೆ.

ಈ ವಿರೋಧಗಳ ಮಧ್ಯೆಯೂ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳನ್ನು ಕುರಿತಂತೆ ‘ಟೀಮ್ ಇಂಡಿಯಾ’ ಎಂದು ನೀತಿ ಆಯೋಗದ ಸಭೆಯಲ್ಲಿ ಕರೆದಿದ್ದಾರೆ. ‘ಸಹಕಾರ ಹಾಗೂ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆ’ಯ ಆಶಯದಡಿ ಆಡಳಿತದ ಸಂಕೀರ್ಣ ವಿಚಾರಗಳನ್ನು ನಿರ್ವಹಿಸಿದ್ದಕ್ಕಾಗಿ ಮುಖ್ಯಮಂತ್ರಿಗಳನ್ನು ಪ್ರಧಾನಿಯವರು ಅಭಿನಂದಿಸಿಯೂ ಇದ್ದಾರೆ. ಈ ಸಂಬಂಧದಲ್ಲಿ ಜಿಎಸ್‍ಟಿಯ ಸುಗಮ ಅನುಷ್ಠಾನವನ್ನು ಪ್ರಮುಖ ಉದಾಹರಣೆಯಾಗಿಯೂ ಪ್ರಧಾನಿ ಪ್ರಸ್ತಾಪಿಸಿದ್ದಾರೆ.

ರಾಷ್ಟ್ರದ ಆರ್ಥಿಕ ವೃದ್ಧಿದರವನ್ನು ಎರಡಂಕಿಗೆ ಒಯ್ಯುವುದು ಭಾರತದ ಮುಂದಿರುವ ದೊಡ್ಡ ಸವಾಲು ಎಂದಿರುವ ಮೋದಿಯವರು ಖಾಸಗಿ ಹೂಡಿಕೆ ಆಕರ್ಷಿಸುವ ನೀತಿಗಳನ್ನು ರೂಪಿಸಲು ರಾಜ್ಯಗಳಿಗೆ ಕರೆಯನ್ನೂ ನೀಡಿದರು. ಆದರೆ, ಈ ಮಧ್ಯೆಯೇ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ನಿವಾಸದಲ್ಲಿ ಮೂವರು ಸಂಪುಟ ಸಹೋದ್ಯೋಗಿಗಳೊಡನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಧರಣಿಗೆ ಕೇಂದ್ರ ಸರ್ಕಾರ ಸ್ಪಂದಿಸದೇ ಇರುವುದು ಪ್ರತಿಪಕ್ಷಗಳ ಟೀಕೆಗಳಿಗೆ ಕಾರಣವಾಯಿತು.

ನೀತಿ ಆಯೋಗದ ಸಭೆಯ ಸಂದರ್ಭದಲ್ಲೇ ಪ್ರಧಾನಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎಎಪಿ ಹಾಗೂ ಲೆಫ್ಟಿನೆಂಟ್ ಗವರ್ನರ್ ನಡುವೆ ಉದ್ಭವಿಸಿರುವ ಸಂಘರ್ಷ ಕೊನೆಗಾಣಿಸಲು ಮನವಿಯನ್ನೂ ಮಾಡಿದರು.

ನೀತಿ ಆಯೋಗದ ಸಭೆಗೂ ಕೇಜ್ರಿವಾಲ್ ಹಾಜರಾಗಲಿಲ್ಲ. ಮೆರವಣಿಗೆ ನಡೆಸಲು ಪ್ರಯತ್ನಿಸಿದ ಎಎಪಿ ಕಾರ್ಯಕರ್ತರನ್ನು ಪೊಲೀಸರು ತಡೆದ ವಿದ್ಯಮಾನವೂ ನಡೆಯಿತು. ಈ ಎಲ್ಲಾ ತಿಕ್ಕಾಟಗಳ ನಡುವೆ, ನೀತಿ ಆಯೋಗದ ಸಭೆ, ಪ್ರತಿಪಕ್ಷಗಳ ಏಕತೆಯನ್ನು ಬಿಂಬಿಸುವ ಮತ್ತೊಂದು ಸಂದರ್ಭವಾಗಿ ಪರಿಣಮಿಸಿದ್ದು ವಿಶೇಷ.

ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿಯ ಬೇಡಿಕೆಯನ್ನು ಎನ್‍ಡಿಎ ಮೈತ್ರಿಕೂಟದ ಭಾಗವಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಬೆಂಬಲಿಸಿದ್ದಾರೆ. ಅಷ್ಟೇ ಅಲ್ಲ, ಬಿಹಾರಕ್ಕೂ ವಿಶೇಷ ಸ್ಥಾನಮಾನ ಬೇಕು ಎಂದೂ ಒತ್ತಾಯಿಸಿದ್ದಾರೆ. 15ನೇ ಹಣಕಾಸು ಆಯೋಗಕ್ಕೆ ವಿಧಿಸಲಾಗಿರುವ ಕಾರ್ಯಷರತ್ತುಗಳ ಬಗ್ಗೆ ದಕ್ಷಿಣದ ರಾಜ್ಯಗಳು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿವೆ.

ನೀತಿ ಆಯೋಗದ ಸಭೆಯಲ್ಲೂ ಇದು ಅನುರಣಿಸಿತು. ಆಯೋಗದ ಕಾರ್ಯಷರತ್ತುಗಳನ್ನು ಮರುರಚನೆ ಮಾಡಬೇಕೆಂಬ ಆಗ್ರಹ ಈ ಸಭೆಯಲ್ಲೂ ಕೇಳಿಬಂತು. ಸಂಪನ್ಮೂಲ ವಿತರಣೆಯಲ್ಲಿ ರಾಜ್ಯಗಳಿಗೆ ನ್ಯಾಯ ದಕ್ಕಬೇಕು ಎಂದು ಕೇರಳ ಮುಖ್ಯಮಂತ್ರಿ ತಮ್ಮ ಭಾಷಣದಲ್ಲಿ ಒತ್ತಾಯಿಸಿದರು. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಕೇರಳ ರಾಜ್ಯಗಳು ರೈತರ ಸಾಲ ಮನ್ನಾ ವಿಚಾರವನ್ನು ಪ್ರಸ್ತಾಪಿಸಿದವು. ಸಾಲ ಮನ್ನಾ ಯೋಜನೆ ಅನುಷ್ಠಾನಕ್ಕೆ ಕೇಂದ್ರದಿಂದ ಶೇ 50ರಷ್ಟು ಬೆಂಬಲವನ್ನು ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಕೋರಿದ್ದಾರೆ.

ರಾಜ್ಯಗಳ ವ್ಯವಹಾರಗಳಲ್ಲಿ ಕೇಂದ್ರದ ಅನಗತ್ಯ ಹಸ್ತಕ್ಷೇಪವೂ ಸಲ್ಲದು ಎಂಬುದು ಮಮತಾ ಬ್ಯಾನರ್ಜಿಯವರ ಆಗ್ರಹವಾಗಿತ್ತು. ಧರಣಿನಿರತ ದೆಹಲಿ ಮುಖ್ಯಮಂತ್ರಿಯ ಬೇಡಿಕೆಗಳಿಗೆ ಪ್ರಧಾನಿಯವರು ಸ್ಪಂದಿಸದಿರುವುದು ಹಾಗೂ ನಾಲ್ವರು ಮುಖ್ಯಮಂತ್ರಿಗಳ ಪ್ರತಿರೋಧವನ್ನು ‘ಬರೀ ರಾಜಕೀಯ’ ಎಂದು ತಳ್ಳಿಹಾಕುವುದು ‘ಸ್ಪರ್ಧಾತ್ಮಕ, ಸಹಕಾರ ಒಕ್ಕೂಟ ವ್ಯವಸ್ಥೆ’ಯ ಮೌಲ್ಯಗಳನ್ನು ಕುಂದಿಸುವಂತಹದ್ದು ಎಂಬಂತಹ ಮಾತುಗಳು ಈ ಸಂದರ್ಭದಲ್ಲಿ ಕೇಳಿಬಂದಿವೆ.

ಪರಸ್ಪರ ಒಳಗೊಳ್ಳುವಿಕೆಯ ಮಹತ್ವವನ್ನು ಕೇಂದ್ರ ಹಾಗೂ ರಾಜ್ಯಗಳು ಅರಿತುಕೊಳ್ಳಬೇಕು. ಬಿಜೆಪಿಯ ಮಿತ್ರಪಕ್ಷಗಳಾದ ಜೆಡಿಯು ಹಾಗೂ ಶಿವಸೇನೆ ಸಹ ಎಎಪಿಗೆ ಪೂರ್ಣ ಬೆಂಬಲ ಸೂಚಿಸಿವೆ ಎಂಬುದನ್ನು ಗಮನಿಸಬೇಕು. ಅಷ್ಟೇ ಅಲ್ಲ, ಕೇಂದ್ರದ ವಿರುದ್ಧ ಕೇಜ್ರಿವಾಲ್ ಪ್ರತಿಭಟನೆಯನ್ನು ಬೆಂಬಲಿಸಿ, ನಾಲ್ವರು ಬಿಜೆಪಿಯೇತರ ಮುಖ್ಯಮಂತ್ರಿಗಳು ಮತ್ತೊಂದು ಸಂದೇಶವನ್ನೂ ನೀಡಿದ್ದಾರೆ. ಬಿಜೆಪಿ ವಿರೋಧಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಮಾತ್ರವೇ ಮುಂಚೂಣಿಯಲ್ಲಿರಬೇಕೆಂದೇನೂ ಇಲ್ಲ ಎಂಬುದು ಆ ಹೊಸ ಸಂದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT