ಕಾಡ ಜೊತೆಗಿನ ಬುಡಕಟ್ಟು ಬದುಕು

7

ಕಾಡ ಜೊತೆಗಿನ ಬುಡಕಟ್ಟು ಬದುಕು

Published:
Updated:

ಇತ್ತೀಚೆಗೆ ಅಂಡಮಾನಿನ ಸೆಂಟಿನೆಲ್ ದ್ವೀಪದಲ್ಲಿ ಒಂದು ಅನಾಹುತ ನಡೆದುಹೋಯಿತು. ಅಮೆರಿಕದ 27 ವರ್ಷದ ಜಾನ್ ಚೌವ್ ಎಂಬ ಪ್ರವಾಸಿಯನ್ನು ಸೆಂಟಿನೆಲ್ ಬುಡಕಟ್ಟು ಜನರು ಬಾಣಗಳಿಂದ ಹೊಡೆದು ಸಾಯಿಸಿದ ಕಾರಣ ವಿವಾದ ಹುಟ್ಟಿಕೊಂಡಿತು. ಅದು ನಿಷೇಧಿತ ದ್ವೀಪವಾದರೂ, ಜಾನ್ ಸ್ಥಳೀಯ ಮೀನುಗಾರರಿಗೆ 25ಸಾವಿರ ಲಂಚ ಕೊಟ್ಟು ದ್ವೀಪಕ್ಕೆ ಹೋಗಿ ಬುಡಕಟ್ಟು ಜನರನ್ನ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಪ್ರಯತ್ನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದರು. ಅಂಡಮಾನ್ ದ್ವೀಪಗಳಲ್ಲಿ ಮುಖ್ಯವಾಗಿ ಐದು ಬುಡಕಟ್ಟು ಗುಂಪುಗಳಿದ್ದು ಅವು ಜರವಾಸ್, ಸೆಂಟಿನೆಲೀಸ್, ಗ್ರೇಟ್ ಅಂಡಮಾನೀಸ್, ಓಂಗ್ ಮತ್ತು ಶೊಂಪೆನ್. ಜರವಾಸ್ ಮತ್ತು ಸೆಂಟಿನೆಲೀಸ್ ಇದುವರೆಗೂ ಮುಖ್ಯವಾಹಿನಿಯ ಕಡೆಗೆ ಮುಖ ಮಾಡಿಲ್ಲ. ಅಂಡಮಾನ್ ದ್ವೀಪಗಳಿಗೆ ವರ್ಷಕ್ಕೆ ಐದು ಲಕ್ಷ ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ ಇವರಿಗೆ ಬುಡಕಟ್ಟು ಜನರನ್ನು ದೂರದಿಂದಲೇ ತೋರಿಸಿ ಅವರ ಜೊತೆಗೆ ಬೆರೆಯದಂತೆ ನೋಡಿಕೊಳ್ಳಲಾಗುತ್ತದೆ. ಇದು ಈ ದ್ವೀಪಗಳ ದೊಡ್ಡ ಆದಾಯವಾಗಿದೆ.

ಇದೇ ವರ್ಷದ ಪ್ರಾರಂಭದಲ್ಲಿ ಗೃಹ ವ್ಯವಹಾರಗಳ ಸಚಿವಾಲಯ 29 ದ್ವೀಪಗಳಿಗೆ ಪರವಾನಗಿಯನ್ನು ಪಡೆದು ಹೋಗಬಹುದು ಎಂದು ಆದೇಶ ನೀಡಿತ್ತು. ಇದರಲ್ಲಿ ಪುರಾತನ ಬುಡಕಟ್ಟುಗಳಿರುವ 11 ದ್ವೀಪಗಳು ಸೇರಿವೆ. ಪರವಾನಗಿ ಇದ್ದರೂ ದ್ವೀಪಕ್ಕೆ ಹೋಗುವವರು ಸ್ಥಳೀಯ ಜಿಲ್ಲಾಧಿಕಾರಿಗಳಿಂದ ಅಪ್ಪಣೆ ಪಡೆದುಕೊಳ್ಳಬೇಕಿದೆ ಎಂಬ ಕಾನೂನಿದೆ. ಪ್ರವಾಸಿಗರನ್ನು ವಾಹನಗಳಲ್ಲಿ ಪೋರ್ಟ್‌ಬ್ಲೇರ್‌ನಿಂದ ಬರಾಟಾಂಗ್ ಮಧ್ಯದ ಟ್ರಂಕ್ ರಸ್ತೆಯಲ್ಲಿ ಕರೆದುಕೊಂಡು ಹೋಗಲಾಗುತ್ತದೆ. ದಾರಿಯಲ್ಲಿ ದಟ್ಟ ಅರಣ್ಯವಿದ್ದು ಸುಣ್ಣದ ಕಲ್ಲಿನ ಗುಹೆಗಳು ಮತ್ತು ಜ್ವಾಲಾಮುಖಿಯ ಮಣ್ಣಿನ ಕುಳಿಗಳನ್ನು ತೋರಿಸಲಾಗುತ್ತದೆ. ಕೆಲವೊಮ್ಮೆ ಪ್ರವಾಸಿಗರು ಹಣ ಕೊಟ್ಟು ಬುಡಕಟ್ಟು ಜನರ ಜೊತೆಗೆ ಫೋಟೊಗಳನ್ನು ತೆಗೆದುಕೊಳ್ಳುವುದು, ಅವರ ಜೊತೆಗೆ ನೃತ್ಯ ಮಾಡುವ ಪ್ರಸಂಗಗಳು ನಡೆಯುತ್ತಿದ್ದವು.

ಜಾನ್ ಚೌವ್ ಇದಕ್ಕೆ ಮುಂಚೆಯೇ ಐದು ಸಲ ಸೆಂಟಿನೆಲ್ ದ್ವೀಪಕ್ಕೆ ಬಂದಿದ್ದು ಈ ಸಲ ಮೀನುಗಾರರ ಜೊತೆಗೂಡಿ ಕಾವಲು ಕಾಯುತ್ತಿದ್ದ ಕರಾವಳಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಯಾವುದೇ ಅಪ್ಪಣೆ ಇಲ್ಲದೆ ದ್ವೀಪ ತಲುಪಿದ್ದನು. ಅದನ್ನ ಪ್ರತಿಭಟಿಸಿದ ಸೆಂಟಿನೆಲೀಸ್ ಬುಡಕಟ್ಟು ಜನರು ಬಾಣಗಳಿಂದ ಹೊಡೆದು ಸಾಯಿಸಿದ್ದಾರೆ ಎಂಬುದಾಗಿ ಪೊಲೀಸರು ಹೇಳುತ್ತಾರೆ. ಆದರೆ ನಿಜವಾಗಿ ಏನು ನಡೆಯಿತು ಎನ್ನುವ ಮಾಹಿತಿ ಹೊರ ಪ್ರಪಂಚಕ್ಕೆ ಇನ್ನೂ ನಿಖರವಾಗಿ ದೊರಕಿಲ್ಲ. ಚೌವ್ ಪ್ರತಿಸಲವೂ ಇವರನ್ನು ಕ್ರಿಶ್ಚಿಯನ್ನರಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದನೆಂದು ಹೇಳಲಾಗುತ್ತಿದೆ. ಚೌವ್ ಕೆಲವು ಸ್ಥಳೀಯ ಅಧಿಕಾರಿಗಳ ಸಹಾಯವನ್ನು ಪಡೆದುಕೊಂಡಿದ್ದನೆಂದು ಉನ್ನತ ಮೂಲಗಳಿಂದ ತಿಳಿದುಬರುತ್ತದೆ.

ಚೌವ್ ಮತ್ತು ಸ್ಥಳೀಯ ಮೀನುಗಾರರು ನವೆಂಬರ್ 14ರಂದು ರಾತ್ರಿ 8 ಗಂಟೆಗೆ ಪೋರ್ಟ್‌ಬ್ಲೇರ್ ಬಿಟ್ಟು ಮಧ್ಯರಾತ್ರಿ 12 ಗಂಟೆಗೆ ಉತ್ತರ ಸೆಂಟಿನೆಲ್ ತಲುಪಿದರು. ರಾತ್ರಿಯೆಲ್ಲ ದೋಣಿಯಲ್ಲಿಯೇ ಇದ್ದು ಮರುದಿನ ಬೆಳಿಗ್ಗೆ ಮೀನುಗಾರರು ಚೌವ್‌ನನ್ನು ಕಡಲದಂಡೆಯಲ್ಲಿ ಬಿಟ್ಟುಹೋದರು. ಸೆಂಟಿನೆಲೀಸ್ ಜನರು ಶಿಲಾಯುಗದ ಬದುಕು ನಡೆಸುತ್ತಿದ್ದರೂ 2014ರಲ್ಲಿ ಬಂದ ದೈತ್ಯ ಸುನಾಮಿಯಲ್ಲಿ ಯಾರ ಸಹಾಯವೂ ಇಲ್ಲದೆ ಉಳಿದುಕೊಂಡಿದ್ದರು. 2011ರ ಜನಗಣತಿಯ ಪ್ರಕಾರ 12 ಗಂಡಸರು ಮತ್ತು 3 ಮಹಿಳೆಯರು ಇರುವುದಾಗಿ ದಾಖಲಾಗಿತ್ತು. ಆದರೆ ಅವರ ಸಂಖ್ಯೆ 400ರವರೆಗೂ ಇರುವ ಅಂದಾಜಿದೆ ಎನ್ನಲಾಗಿದೆ. ಚೌವ್ ದೇಹವನ್ನು ಇದುವರೆಗೂ ಸೆಂಟಿನೆಲ್ ದ್ವೀಪದಿಂದ ಹೊರಕ್ಕೆ ತರಲಾಗಿಲ್ಲ. ಈತನಿಗೆ ಸಹಾಯ ಮಾಡಿದ 7 ಜನರನ್ನು ಬಂಧಿಸಲಾಗಿದೆ.

ಸೆಂಟಿನೆಲೀಸ್ ಉಗ್ರ ರೀತಿಯ ಬುಡಕಟ್ಟು ಜನರಾಗಿರುವುದು ಚೌವ್‌ಗೆ ಗೊತ್ತಿದ್ದರೂ ಇಲ್ಲಿನ ಜನರನ್ನು ಕ್ರಿಶ್ಚಿಯನ್ನರಾಗಿ ಪರಿವರ್ತಿಸುವ ಸಾಹಸದಲ್ಲಿ ತೊಡಗಿಕೊಂಡಿದ್ದನು! ಈತನ ಸಾವಿನಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬುಡಕಟ್ಟು ಜನರ ರಕ್ಷಣೆಯ ಬಗ್ಗೆ ವಾದವಿವಾದಗಳು ಹುಟ್ಟಿಕೊಂಡಿವೆ. ಭಾರತ ಇದರ ಬಗ್ಗೆ ಉನ್ನತ ತನಿಖೆ ನಡೆಸುವುದಾಗಿ ಹೇಳಿದೆ. ಚೌವ್ ಅಮೆರಿಕದ ವಾಷಿಂಗ್ಟನ್ ರಾಜ್ಯಕ್ಕೆ ಸೇರಿದವನಾಗಿದ್ದು, ಯು.ಎಸ್ ಇವ್ಯಾಂಜಿಕಲ್ ಸಮುದಾಯ ಆತ್ಮಶೋಧನೆಗೆ ಪ್ರೇರೇಪಿಸಿದೆ. ಜಾನ್ ಹುತಾತ್ಮನೇ ಅಥವಾ ಮೂರ್ಖನೇ ಅಥವಾ ಮೆಸ್ಸಿಯಾ ಸಂಕೀರ್ಣದಿಂದ ಸಾವಿಗೆ ತುತ್ತಾದನೇ ಎಂಬುದು ಸಮುದಾಯದ ಪ್ರಶ್ನೆಯಾಗಿದೆ. ಚೌವ್ ಸಾಯುವುದಕ್ಕೆ ಮುಂಚೆ ದೋಣಿಯಲ್ಲಿ ಕುಳಿತಿದ್ದಾಗ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾನೆ. ‘ದೇವರೇ, ನಾನು ಸಾಯಲು ಇಚ್ಛಿಸುವುದಿಲ್ಲ. ನಾನು ಸತ್ತರೆ ನನ್ನ ಸ್ಥಾನವನ್ನು ಯಾರು ತೆಗೆದುಕೊಳ್ಳುತ್ತಾರೆ?’ ಕ್ರಿ.ಶ.1969ರಲ್ಲಿ ಚೀನಾದಲ್ಲಿ ಸಾಂಸ್ಕೃತಿಕ ಕ್ರಾಂತಿ ನಡೆದಾಗ ಚೀನಾದಿಂದ ಅಮೆರಿಕಾಗೆ ಓಡಿಹೋದ ಒಬ್ಬ ವೈದ್ಯನ ಮಗ ಚೌವ್. ಈತ ಮೊದಲಿನಿಂದಲೇ ಸಾಹಸಿ ಮನೋಭಾವವುಳ್ಳ ಹುಡುಗನಾಗಿದ್ದನು.

ಜಗತ್ತು ಎಷ್ಟೇ ವೇಗದಲ್ಲಿ ಸಾಗಿದರೂ ಭೂಮಿಯ ಮೇಲೆ ಇನ್ನೂ ಎಷ್ಟೋ ಕಡೆ ಪುರಾತನ ಜಗತ್ತಿಗೆ ಸೇರಿದ ಬುಡಕಟ್ಟು ಜನರು ಆಧುನಿಕ ನಾಗರಿಕ ಸಂಪರ್ಕಕ್ಕೆ ಬಾರದೇ ದೂರವೇ ಉಳಿದುಕೊಂಡಿದ್ದಾರೆ. ಅಂತಹ ಕೆಲವು ಬುಡಕಟ್ಟುಗಳು ಈಗಲೂ ಶಿಲಾಯುಗದ ಮಾದರಿಯಲ್ಲಿ ಬದುಕುತ್ತಿವೆ. ಆದರೆ ಆಧುನಿಕ ಜಗತ್ತಿನ ಕೆಲವು ಕುತೂಹಲಿ ಜನರು ಅವರನ್ನ ಸಂಪರ್ಕಿಸಲು ಹೋಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ನಮ್ಮ ದೇಶದ ವಿವಿಧ ಪ್ರದೇಶಗಳಿಂದ ಬಂಧಿಸಿತಂದ 220 ಸ್ವಾತಂತ್ರ್ಯ ಹೋರಾಟಗಾರರನ್ನು ಪೋರ್ಟ್‌ಬ್ಲೇರ್‌ನ ಸೆಲ್ಯುಲಾರ್ ಜೈಲಿನಲ್ಲಿ ಕೂಡಿ ಹಾಕಿದರು. ಇವರೆಲ್ಲ ರಾತ್ರೋರಾತ್ರಿ ಸಮುದ್ರಕ್ಕೆ ಧುಮುಕಿ ತಪ್ಪಿಸಿಕೊಳ್ಳಲು ಹೋಗಿ ಸುತ್ತಲಿನ ದ್ವೀಪಗಳ ಬುಡಕಟ್ಟು ಜನರ ಬಾಣಗಳಿಗೆ ಸಿಕ್ಕಿ 140 ಜನರು ಪ್ರಾಣ ಕಳೆದುಕೊಂಡರು.

ಸ್ವಾತಂತ್ರ್ಯದ ನಂತರ ಇದೇ ರೀತಿಯ ಇನ್ನಷ್ಟು ದುರಂತಗಳು ಘಟಿಸಿದ್ದವು.  ಪ್ರಸ್ತುತ ಈ ದ್ವೀಪಗಳಲ್ಲಿ ಒಟ್ಟು 12 ಬುಡಕಟ್ಟುಗಳ ಜನರಿದ್ದು ಕೆಲವು ಬುಡಕಟ್ಟುಗಳು ಹೊರಗಿನ ಜನರ ಜೊತೆಗೆ ಸಂಪರ್ಕ ಮಾಡಿದರೂ ಉಳಿದ ಬುಡಕಟ್ಟುಗಳು ಆಧುನಿಕ ನಾಗರಿಕತೆಯಿಂದ ದೂರವೇ ಉಳಿದುಕೊಂಡಿವೆ.

***

ಒಟ್ಟು 572 ಅಂಡಮಾನ್-ನಿಕೋಬಾರ್ ದ್ವೀಪ ಸಮೂಹ ಭಾರತದ ಪೂರ್ವ ತಟದಿಂದ 1,200 ಕಿ.ಮೀ. ದೂರವಿದ್ದರೆ ಇಂಡೋನೇಷ್ಯಾ, ಮ್ಯಾನ್ಮಾರ್ ದೇಶಗಳಿಗೆ ಕೇವಲ 150ಕಿ.ಮೀ. ದೂರದಲ್ಲಿವೆ. ದ್ವೀಪಗಳ ಒಟ್ಟು ಭೂವಿಸ್ತೀರ್ಣ 8,249 ಚ.ಕಿ.ಮೀ ಇದ್ದು ಈ ದ್ವೀಪಗಳ ಕಮಾನು ಉತ್ತರದಿಂದ ದಕ್ಷಿಣ ದಿಕ್ಕಿನಲ್ಲಿ 901 ಕಿ.ಮೀ.ಗಳ ಉದ್ದ ಹಾಸಿಕೊಂಡಿದೆ. ಕೇವಲ 38 ದ್ವೀಪಗಳಲ್ಲಿ ಜನಜೀವನವಿದೆ. ಈ ದ್ವೀಪಗಳನ್ನು ಬ್ರಿಟಿಷರು ಭಾರತದ ಜೊತೆಗಿನ ಸಂಬಂಧ ಕಳೆದುಕೊಳ್ಳಲು ಇಚ್ಛಿಸದೆ ಭಾರತಕ್ಕೆ ಒಪ್ಪಿಸಿಹೋದರು.

ಇಲ್ಲಿನ ಬುಡಕಟ್ಟು ಜನರು ಇಂದಿಗೂ ನಾಗರಿಕ ಜನರಿಂದ ಸಂಪೂರ್ಣವಾಗಿ ದೂರ ಉಳಿದುಕೊಂಡಿದ್ದು ಪೇಲಿಯೋಲಿಥಿಕ್ ಯುಗದ ಬದುಕನ್ನೇ ನಡೆಸುತ್ತಿದ್ದಾರೆ. ಈ ಬುಡಕಟ್ಟುಗಳು ಮಧ್ಯ ಪೇಲಿಯೊಲಿಥಿಕ್ ಕಾಲದಿಂದ (30,000 ವರ್ಷಗಳ ಹಿಂದೆ) ಇತರ ಜನಾಂಗಗಳಿಂದ ಪ್ರತ್ಯೇಕಗೊಂಡಿರುವುದಾಗಿ ಹೇಳಲಾಗುತ್ತದೆ. ಅಲ್ಲಿಂದಲೇ ಇವರ ಭಾಷೆ ಮತ್ತು ಸಂಸ್ಕೃತಿ ಭಿನ್ನವಾಗಿ ಬೆಳೆದುಬಂದಿರಬೇಕು! ಆದರೆ ನಿಕೋಬಾರ್ ದ್ವೀಪಗಳಲ್ಲಿ ಹಲವು ಭಿನ್ನ ಬುಡಕಟ್ಟು ಗುಂಪುಗಳು ಕಂಡುಬರುತ್ತವೆ. ಯುರೋಪಿಯನ್ನರ ಸಂಪರ್ಕ ಬರುವ ಕಾಲಕ್ಕೆ ಇವರು ಮೊನ್-ಖೆಮೇರ್ ಗುಂಪಿನ ಭಾಷೆ ಕಲಿತುಕೊಂಡಿದ್ದರು. ಈ ಗುಂಪುಗಳು ಅಂಡಮಾನ್ ಜನರಿಗೆ ಸಂಬಂಧವಿಲ್ಲದ ದಕ್ಷಿಣ ಏಷ್ಯಾದ ಭಾಷೆಯನ್ನು ಮಾತನಾಡುತ್ತಿದ್ದವು.

ಚೋಳ ರಾಜೇಂದ್ರ (ಕ್ರಿ.ಶ.1014 ರಿಂದ 1042) ಈ ಎರಡೂ ದ್ವೀಪಗಳನ್ನು ಇಂಡೋನೇಷ್ಯಾದ ಶ್ರೀವಿಜಯ ಸಾಮ್ರಾಜ್ಯದ ಮೇಲೆ ದಂಡಯಾತ್ರೆ ಮಾಡಲು ಆಯಕಟ್ಟಿನ ಸ್ಥಳವಾಗಿ ಬಳಸಿಕೊಂಡಿದ್ದನು. ಕ್ರಿ.ಶ.1755ರಲ್ಲಿ ಮೊದಲ ಬಾರಿಗೆ ಯುರೋಪಿಯನ್ ಡ್ಯಾನಿಶ್ ಈಸ್ಟ್ ಇಂಡಿಯಾ ಕಂಪನಿ ನಿಕೋಬಾರ್ ದ್ವೀಪಗಳಿಗೆ ಕಾಲಿರಿಸಿತು. ಆದರೆ ಇವರು ಹಲವಾರು ಸಲ ಮಲೇರಿಯಾ ರೋಗದಿಂದ ದ್ವೀಪಗಳನ್ನ ಬಿಟ್ಟು ಓಡಿಹೋಗಬೇಕಾಯಿತು. ಕ್ರಿ.ಶ.1789ರಲ್ಲಿ ಬ್ರಿಟಿಷ್ ವಸಾಹತು ಮೊದಲಿಗೆ ಅಂಡಮಾನಿನ ಚಾತಮ್ ದ್ವೀಪದಲ್ಲಿ ನೆಲೆಯೂರಿ ಕೊನೆಗೆ 1872ರಲ್ಲಿ ಎಲ್ಲಾ ದ್ವೀಪಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಎರಡನೇ ಮಹಾಯುದ್ಧದಲ್ಲಿ ಸಂಪೂರ್ಣವಾಗಿ ಜಪಾನೀಯರ ವಶದಲ್ಲಿದ್ದರೂ ಸುಭಾಷ್ ಚಂದ್ರ ಬೋಸ್ ಅವರ ‘ಅರ್ಝಿ ಹುಮೇಟ್ ಅಜಾದ್ ಹಿಂದ್’ ಸೈನ್ಯ ಸಣ್ಣ ಪ್ರಮಾಣದಲ್ಲಿ ನೆಲೆಯೂರಿತ್ತು.

ಈ ದ್ವೀಪಗಳಲ್ಲಿ ಶೇಕಡ 86ರಷ್ಟು ಅರಣ್ಯವಿದ್ದು ಜೀವ ವೈವಿಧ್ಯ ಇದೆ. ಅಮೂಲ್ಯ ಸಸ್ಯಜಾತಿಗಳು, ಕಾಡುಪ್ರಾಣಿಗಳು, ಹಕ್ಕಿಗಳು, ಕೀಟಗಳು ಕಂಡುಬರುತ್ತವೆ. ನಮ್ಮ ದೇಶದಲ್ಲಿರುವ ಏಕೈಕ ಸಕ್ರಿಯ ಜ್ವಾಲಾಮುಖಿ ನಿಕೋಬಾರ್‌ನ ಬ್ಯಾರನ್ ದ್ವೀಪದಲ್ಲಿದೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಕಮಾನು ಸಂಪೂರ್ಣವಾಗಿ ಭೂಕಂಪನ-ಜ್ವಾಲಾಮುಖಿಗಳ ತಳದ ಮೇಲೆಯೇ ಕುಳಿತುಕೊಂಡಿದೆ. ಜೊತೆಗೆ ಇದು ಚಂಡಮಾರುತ, ಸುನಾಮಿಗಳ ತವರೂ ಆಗಿದೆ. ಒಟ್ಟಿನಲ್ಲಿ ಯಾವುದೊ ಒಂದು ದಿನ ಈ ದ್ವೀಪಗಳು ನೈಸರ್ಗಿಕ ವಿಪತ್ತುಗಳಿಂದ ಮಾಯವಾಗಿ ಹೋಗಲೂಬಹುದು! 2004ರಲ್ಲಿ ಸಂಭವಿಸಿದ ಭೂಕಂಪನ-ಸುನಾಮಿಯಿಂದ 2,000 ಜನರು ಪ್ರಾಣ ಕಳೆದುಕೊಂಡು ಸಾವಿರಾರು ಜನ ಗಾಯಗೊಂಡರು. ಮನೆ ಮಠಗಳು ಸಂಪೂರ್ಣವಾಗಿ ನಾಶವಾಗಿ ಸಣ್ಣಸಣ್ಣ ದ್ವೀಪಗಳು ಸಾಕಷ್ಟು ನಾಶವಾಗಿವೆ.


ಜಾನ್ ಚೌವ್

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !