ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಸ್ಥಳಾಂತರಕ್ಕೆ ಒತ್ತು ನೀಡಿ

ತೆರವುಗೊಳಿಸುವ ಸಂಬಂಧ ಸ್ಥಳೀಯರ ಸಲಹೆ ಸ್ವೀಕಾರ ಸಭೆ
Last Updated 14 ಜನವರಿ 2020, 20:17 IST
ಅಕ್ಷರ ಗಾತ್ರ

ಆನೇಕಲ್: ರಸ್ತೆ ಅಭಿವೃದ್ಧಿಗಾಗಿ ಮರಗಳನ್ನು ಕಡಿದಾಗ ಬದಲಿ ಗಿಡ-ಮರಗಳನ್ನು ನೆಡಲು ಆದ್ಯತೆ ನೀಡಬೇಕು. ಮರಗಳನ್ನು ಸ್ಥಳಾಂತರ ಮಾಡಿ ಪುನಃ ನೆಡುವ ಮೂಲಕ ಮರುಜೀವ ನೀಡಲು ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ ಎಂದು ಸಾರ್ವಜನಿಕರು ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಆನೇಕಲ್ ತಾಲ್ಲೂಕಿನ ಆನೇಕಲ್‌- ಅತ್ತಿಬೆಲೆ- ಸರ್ಜಾಪುರ- ದೊಮ್ಮಸಂದ್ರ- ಗುಂಜೂರು- ವರ್ತೂರು-ಹೊಸಕೋಟೆ ಮೂಲಕ ದೇವನಹಳ್ಳಿ ಸಂಪರ್ಕಿಸುವ ಆರು ಪಥದ ರಸ್ತೆ ಕಾಮಗಾರಿಗೆ ಮರ ತೆರವುಗೊಳಿಸುವ ಸಂಬಂಧ ಸ್ಥಳೀಯರ ಅಹವಾಲು ಮತ್ತು ಸಲಹೆ ಸ್ವೀಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಸಲಹೆ ನೀಡಿದರು.

ಹಲವಾರು ವರ್ಷಗಳಿಂದ ಬೆಳೆದಿರುವ ಮರಗಳನ್ನು ಏಕಾಏಕಿ ನಾಶಪಡಿಸುವ ಬದಲಿಗೆ ಅವುಗಳನ್ನು ಉಳಿಸಬೇಕು. ರಸ್ತೆಯಷ್ಟೇ ಪರಿಸರವು ಮುಖ್ಯ ಎಂದು ಪಾಲ್ಗೊಂಡಿದ್ದವರು ಅಧಿಕಾರಿಗಳಿಗೆ ತಿಳಿಸಿದರು.

ರಸ್ತೆ ಬದಿಗಳಲ್ಲಿ ತಲೆತಲಾಂತರಗಳಿಂದ ಮರಗಳು ಬೆಳೆದು ನೆರಳು ನೀಡುತ್ತಿವೆ. ನೂರಾರು ಪಕ್ಷಿಗಳಿಗೆ ಆಸರೆಯಾಗಿವೆ. ಹಾಗಾಗಿ ಇವುಗಳ ಸ್ಥಳಾಂತರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಸಭೆಯಲ್ಲಿ ಹಾಜರಿದ್ದ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕಟೇಶ್ ಮಾತನಾಡಿ, ಆನೇಕಲ್ ತಾಲ್ಲೂಕಿನ ಬೆಸ್ತಮಾನಹಳ್ಳಿಯಿಂದ ಅತ್ತಿಬೆಲೆ, ಸರ್ಜಾಪುರ, ದೊಮ್ಮಸಂದ್ರ ಕ್ರಾಸ್, ವರ್ತೂರುವರೆಗೆ 1,406 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಈ ಪೈಕಿ 63 ಮರಗಳನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. 1,343 ಮರಗಳನ್ನು ಹರಾಜಿನ ಮೂಲಕ ತೆರವುಗೊಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಕನ್ನಮಂಗಲ, ಹೊಸಕೋಟೆ, ಕಾಚನಾಯಕನಹಳ್ಳಿ, ಗುಂಜೂರು ರಸ್ತೆಯಲ್ಲಿ 427 ಮರಗಳನ್ನು ತೆರವುಗೊಳಿಸಲು ತೀರ್ಮಾನಿಸಲಾಗಿದೆ. ಈ ಪೈಕಿ 49 ಮರಗಳನ್ನು ಸ್ಥಳಾಂತರಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಸರ್ಕಾರ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಂಡಿದ್ದು ಆರು ಪಥದ ರಸ್ತೆ ನಿರ್ಮಾಣ ಯೋಜನೆ ಮಂಜೂರಾಗಿ ಕಾರ್ಯ ರೂಪಕ್ಕೆ ಬರುವಲ್ಲಿ ಮರಗಳ ತೆರವುಗೊಳಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಶೇ 50ರಷ್ಟು ಮರಗಳನ್ನು ಮತ್ತೆ ನೆಡಬೇಕು ಎಂದು ತಿಳಿಸಲಾಗಿದೆ. ಸಲಹೆಗಳನ್ನು ಪರಿಶೀಲಿಸಲಾಗುವುದು. ಮರಗಳನ್ನು ನೆಡುವ ಸಂದರ್ಭದಲ್ಲಿ ಹಣ್ಣಿನ ಗಿಡಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ರಸ್ತೆ ಅಭಿವೃದ್ಧಿ ನಿಗಮದ ಎಂಜಿನಿಯರ್‌ ರಮೇಶ್, ವಲಯ ಅರಣ್ಯಾಧಿಕಾರಿಗಳಾದ ಕೃಷ್ಣ, ನಿಜಾಮುದ್ದೀನ್‌ ಹಾಜರಿದ್ದರು.

ಹಣ್ಣಿನ ಮರ ಮತ್ತೆ ನೆಡಲು ಸಲಹೆ

ಸಭೆಯಲ್ಲಿ ಸಾರ್ವಜನಿಕರು ಅಭಿಪ್ರಾಯಪಟ್ಟಿರುವಂತೆ ಶೇ 50ರಷ್ಟು ಮರಗಳನ್ನು ಮತ್ತೆ ನೆಡಬೇಕು ಎಂದು ತಿಳಿಸಲಾಗಿದೆ. ಸಲಹೆಗಳನ್ನು ಪರಿಶೀಲಿಸಲಾಗುವುದು. ಮರಗಳನ್ನು ನೆಡುವ ಸಂದರ್ಭದಲ್ಲಿ ಹಣ್ಣಿನ ಗಿಡಗಳಿಗೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿ.ವೆಂಕಟೇಶ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT