ಅಂಗನವಾಡಿ: ಸಿಗದ ಗೌರವ ಧನ–ಕಷ್ಟ ಜೀವನ

7

ಅಂಗನವಾಡಿ: ಸಿಗದ ಗೌರವ ಧನ–ಕಷ್ಟ ಜೀವನ

Published:
Updated:
Deccan Herald

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಅನುದಾನ ಬಿಡುಗಡೆಯಾಗದೇ ಇರುವುದರಿಂದ 1.25 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಗೌರವಧನವೇ ಸಿಗದೇ ದಿನದೂಡಲು ಪರದಾಡುವ ಸ್ಥಿತಿ ಎದುರಾಗಿದೆ.

ಕೆಲವು ಕಡೆಗಳಲ್ಲಿ ಎರಡು ತಿಂಗಳಿನಿಂದ ಇನ್ನೂ ಕೆಲವೆಡೆ ಮೂರು ತಿಂಗಳಿನಿಂದ ಗೌರವಧನವನ್ನೇ ನೀಡಿಲ್ಲ ಎಂದು ಕಾರ್ಯಕರ್ತೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

‘ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳುವುದು ಗೊತ್ತಾಗುತ್ತಿಲ್ಲ. ಪ್ರತಿದಿನ ಒಂದೊಂದು ಸಮಸ್ಯೆಯನ್ನು ಎದುರಿಸಿ ಸಾಕಾಗುತ್ತಿದೆ. ಅಂಗನವಾಡಿಗೆ ಬರುವ ಮಕ್ಕಳನ್ನು ನೋಡಿಕೊಳ್ಳುವ ಜೊತೆಗೆ ಮಾತೃಪೂರ್ಣ ಯೋಜನೆಯ ಹೊಣೆ ಕೂಡ ನಮ್ಮ ಮೇಲಿದೆ. ನಮ್ಮ ಕೈಯಿಂದಲೇ ದುಡ್ಡು ಹಾಕಿ ಈ ಯೋಜನೆಯನ್ನು ನಡೆಸುತ್ತಿದ್ದೇವೆ. ಅದರ ಜೊತೆ ಗೌರವಧನವೂ ಸಿಗದಿದ್ದರೆ ನಾವು ಎಲ್ಲಿಗೆ ಹೋಗಬೇಕು’ ಎಂದು ಶಿವಮೊಗ್ಗ ಜಿಲ್ಲೆ ಸಾಗರದ ಬಳಿ ಇರುವ ಕಂಬಳೇಶ್ವರ ಕೆರೆ ಊರಿನ ಅಂಗನವಾಡಿ ಕಾರ್ಯಕರ್ತೆ ಕೋಮಲಾಕ್ಷಿ ಪ್ರಶ್ನಿಸಿದರು.

‘ಆರು ತಿಂಗಳಿಂದ ಗೌರವಧನ ಕೊಡಬೇಕಿತ್ತು. ಇತ್ತೀಚೆಗೆ ಮೂರು ತಿಂಗಳಿನ ಹಣವನ್ನು ಮಾತ್ರ ಕೊಟ್ಟಿದ್ದಾರೆ. ಉಳಿದ ಮೂರು ತಿಂಗಳ ಗೌರವಧನ ಕೈಸೇರಿಲ್ಲ’ ಎಂದು ಬೆಂಗಳೂರಿನ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.

‘ಕಾರ್ಯಕರ್ತೆಯರು ತೊಂದರೆಯಲ್ಲಿದ್ದಾರೆ. ಅವರಿಗೆ ಕೆಲಸದ ಒತ್ತಡ ಹೆಚ್ಚಿದೆ. ಕೆಲವು ಯೋಜನೆಗಳನ್ನು ಶಿಸ್ತಿನಿಂದ ಜಾರಿಗೆ ತರಲು ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಅದರೊಂದಿಗೆ ಗೌರವಧನವೂ ಇಲ್ಲದಿದ್ದರೆ ಅವರ ಗತಿ ಏನು? ಈಗಾಗಲೇ ಕೊಡುತ್ತಿರುವ ಹಣ ಅವರಿಗೆ ಸಾಲುತ್ತಿಲ್ಲ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಆಕ್ರೋಶದಿಂದ ಹೇಳಿದರು.

‘ಗೌರವಧನಕ್ಕೆ ಬೇಕಾಗುವ ಒಟ್ಟು ವೆಚ್ಚದಲ್ಲಿ ಕೇಂದ್ರ ಸರ್ಕಾರ ಮೊದಲು ಶೇ 90ರಷ್ಟು ಅನುದಾನ ನೀಡುತ್ತಿತ್ತು. ಈಗ ಶೇ 60ರಷ್ಟಕ್ಕೆ ತನ್ನ ಪಾಲನ್ನು ಇಳಿಸಿದೆ. ಆದರೆ ಶೇ 25ರಷ್ಟು ಅನುದಾನವನ್ನು ಮಾತ್ರ ಕೊಡುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಮೇಲೆ ಶೇ 75ರಷ್ಟು ಹೊರೆ ಬಿದ್ದಿದೆ. ಗೌರವಧನ ವಿಳಂಬ ಆಗಿರುವುದಕ್ಕೆ ಇದೂ ಕಾರಣ ಇರಬಹುದು’ ಎಂದು ಅವರು ಅಭಿಪ್ರಾಯಪಟ್ಟರು.

ಸಿಗುವುದೇ 8 ಸಾವಿರ

‘ನಮ್ಮ ಕೈಸೇರುವುದು ಕೇವಲ ₹ 8 ಸಾವಿರ ಮಾತ್ರ. ಇದರಲ್ಲಿ ಅರ್ಧದಷ್ಟು ಹಣವನ್ನು ಮಾತೃಪೂರ್ಣ ಯೋಜನೆಗಾಗಿ ವಿನಿಯೋಗಿಸುತ್ತಿದ್ದೇವೆ. ಮೊಟ್ಟೆ, ತರಕಾರಿಗಾಗಿಯೂ ನಾವೇ ಹಣವನ್ನು ವಿನಿಯೋಗಿಸಬೇಕು. ಸಿಲಿಂಡರ್‌ ಖಾಲಿಯಾದರೆ ಅದಕ್ಕೂ ₹850 ಕೊಡಬೇಕು. ಇಷ್ಟು ಕಷ್ಟಗಳನ್ನು ಎದುರಿಸಿ ಕೆಲಸ ಮಾಡುವ ಅನಿವಾರ್ಯತೆಯಲ್ಲಿದ್ದೇವೆ’ ಎಂದು ಶಿವಮೊಗ್ಗದ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡರು.

‘ತಾಳ್ಮೆ ಇರಲಿ’

ಗೌರವಧನ ತಡ ಮಾಡುವುದಿಲ್ಲ. ಹೊಸ ಸರ್ಕಾರ ಬಂದಿದೆ. ಕಾರ್ಯಕರ್ತೆಯರೂ ತಾಳ್ಮೆಯಿಂದ ಕೆಲಸ ಮಾಡಬೇಕು. ತೊಂದರೆಗಳು ಏನೇ ಇದ್ದರೂ ಲಿಖಿತ ದೂರು ಕೊಡಬೇಕು. ಸುಮ್ಮನೆ ಗೋಳು ತೋಡಿಕೊಳ್ಳುತ್ತಿದ್ದರೆ ಅದು ನಮಗೆ ತಲುಪಬೇಕಲ್ಲ.
–ಜಯಮಾಲಾ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

ಬಜೆಟ್‌ ಹಣ ಸಿಕ್ಕಿರಲಿಲ್ಲ

‘ಬಜೆಟ್‌ನ ಎರಡನೇ ಕಂತಿನ ಹಣ ಬಿಡುಗಡೆಯಾಗಿರಲಿಲ್ಲ. ಈಗ ಸಿಕ್ಕಿದೆ. ಸದ್ಯದಲ್ಲಿಯೇ ಗೌರವಧನ ಬಿಡುಗಡೆ ಮಾಡಲಾಗುವುದು’ ಎಂದು ಹೆಸರು ಹೇಳಲು ಇಚ್ಛಿಸದ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅಂಕಿ ಅಂಶ

67,337

ಅಂಗನವಾಡಿ ಕೇಂದ್ರಗಳು

37 ಲಕ್ಷ

ಅಂಗನವಾಡಿಗೆ ಹೋಗುವ ಮಕ್ಕಳು

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !