ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪ ಹೊತ್ತವರಿಂದಲೇ ತನಿಖೆಗೆ ಆದೇಶ!

ಅಂಗನವಾಡಿಗೆ ಆಹಾರ ಸಾಮಗ್ರಿ ಖರೀದಿ; ₹30 ಕೋಟಿ ಅವ್ಯವಹಾರ ಆರೋಪ
Last Updated 19 ಡಿಸೆಂಬರ್ 2018, 19:09 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ 2,116 ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುವ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಆರೋಪದ ಬಗ್ಗೆ ತನಿಖೆ ನಡೆಸಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಮುಂದಾಗಿದ್ದಾರೆ. ಅದಕ್ಕಾಗಿ ಬೆಳಗಾವಿ ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಎಸ್.ಬಿ.ಮುಳ್ಳೊಳ್ಳಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದಾರೆ.

ಅಚ್ಚರಿಯೆಂದರೆ ಅವ್ಯವಹಾರ ನಡೆಸಿದ ಆರೋಪ ಸ್ವತಃ ಮೇಘಣ್ಣವರ ವಿರುದ್ಧವೇ ಕೇಳಿಬಂದಿದೆ. ಮುಧೋಳದ ಯುವಶಕ್ತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ವೈ.ಎನ್.ಹೆಗಡೆ, ಡಿಸೆಂಬರ್ 12ರಂದೇ ಮೇಘಣ್ಣವರ ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

‘2015ರ ನವೆಂಬರ್ 17ರಿಂದ 2018ರ ಮಾರ್ಚ್ 26ರವರೆಗಿನ ಆಹಾರ ಖರೀದಿಯಲ್ಲಿ ಅಕ್ರಮ ನಡೆದಿದೆ. ಈ ಅವಧಿಯಲ್ಲಿ ಮೇಘಣ್ಣವರ ಬಾಗಲಕೋಟೆ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ₹30 ಕೋಟಿಗೂ ಹೆಚ್ಚು ಮೊತ್ತದ ಹಗರಣ ಇದಾಗಿದ್ದು, ಅದನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು’ ಎಂದು ಹೆಗಡೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ?: ಅಂಗನವಾಡಿ ಕೇಂದ್ರಗಳ ಆರು ವರ್ಷದೊಳಗಿನ ಮಕ್ಕಳಿಗೆ ಹಾಗೂ ಗರ್ಭಿಣಿ, ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮಕ್ಕೆ ಆಹಾರ ಪದಾರ್ಥಗಳನ್ನು ಆಯಾ ಜಿಲ್ಲೆಗಳ ಎಂ.ಎಸ್.ಪಿ.ಟಿ.ಸಿಗಳಿಂದ (Mahila Supplimentary food production and Training centre) ಖರೀದಿಸಲಾಗುತ್ತಿದೆ. ಹೀಗೆ ಖರೀದಿ ಮಾಡುವ ಆಹಾರ ಪದಾರ್ಥಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಮೇಲ್ವಿಚಾರಣೆ ಸಮಿತಿಯು ಬೆಲೆ ನಿಗದಿ ಮಾಡುತ್ತದೆ. ಬೆಲೆ ನಿಗದಿ ಸಮಿತಿ ಸಭೆ ಸಾಮಾನ್ಯವಾಗಿ ಆರು ತಿಂಗಳಿಗೊಮ್ಮೆ ನಡೆಯುತ್ತದೆ.

‘ಜಿಲ್ಲೆಯಲ್ಲಿ ಆಹಾರ ಪದಾರ್ಥಗಳ ಖರೀದಿ ವೇಳೆ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರ ನಿಗದಿಪಡಿಸಲಾಗಿದೆ. ಅದನ್ನು ನಿಯಮಾವಳಿಯಂತೆ ಆರು ತಿಂಗಳಿಗೊಮ್ಮೆ ಪುನರ್‌ಪರಿಶೀಲನೆ ನಡೆಸಿಲ್ಲ. ಸತತ 27 ತಿಂಗಳು ಅದೇ ಬೆಲೆಗೆ ಖರೀದಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಇದರಲ್ಲಿ ಬಹಳಷ್ಟು ಪ್ರಭಾವಿಗಳು ಶಾಮೀಲಾಗಿದ್ದಾರೆ’ ಎಂದು ಹೆಗಡೆ ಆರೋಪಿಸುತ್ತಾರೆ.

ಮೂರು ದಿನಗಳ ಗಡುವು: ತನಿಖಾ ತಂಡದಲ್ಲಿ ಬೆಳಗಾವಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಮಾಳಗೇರ, ಕೃಷಿ ಮಾರುಕಟ್ಟೆ ಇಲಾಖೆ ಉಪ ನಿರ್ದೇಶಕ ಕೆ.ಎಚ್.ಗುರುಪ್ರಸಾದ್ ಇದ್ದಾರೆ. ಬಾಗಲ
ಕೋಟೆಯ ಸಂಬಂಧಿಸಿದ ಕಚೇರಿಗಳಿಗೆ ತೆರಳಿ ದಾಖಲಾತಿಗಳನ್ನು ಪರಿಶೀಲಿಸಿ ವಿಶ್ಲೇಷಣಾತ್ಮಕ ಅಂಶಗಳ
ನ್ನೊಳಗೊಂಡ ವಿವರವಾದ ತನಿಖಾ ವರದಿಯನ್ನು ಪೂರಕ ದಾಖಲೆಗಳೊಂದಿಗೆ ಮೂರು ದಿನಗಳ ಒಳಗಾಗಿ ಸಲ್ಲಿಸುವಂತೆ ತನಿಖಾ ತಂಡಕ್ಕೆ ಪ್ರಾದೇಶಿಕ ಆಯುಕ್ತರು ಸೂಚನೆ ನೀಡಿದ್ದಾರೆ.

ದುಪ್ಪಟ್ಟು ಬೆಲೆಗೆ ಖರೀದಿ?

‘2015ರ ನವೆಂಬರ್ 17ರಂದು ಜರುಗಿದ ಪೂರಕ ಪೌಷ್ಟಿಕ ಆಹಾರ ಖರೀದಿ ಕುರಿತಾದ ಮೇಘಣ್ಣವರ ನೇತೃತ್ವದ ಜಿಲ್ಲಾಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಎಂ.ಎಸ್.ಪಿ.ಟಿ.ಸಿಗಳಿಗೆ ಶೇ 5ರಷ್ಟು ಲಾಭಾಂಶ, ಶೇ 13ರಷ್ಟು ಇತರೆ ವೆಚ್ಚ ಸೇರಿ ಪ್ರತಿ ಕೆ.ಜಿ ತೊಗರಿಬೇಳೆಗೆ ₹178.50 ನಿಗದಿಪಡಿಸಲಾಗಿದೆ. ಇದರಂತೆ ಕ್ವಿಂಟಲ್‌ಗೆ ₹17,850ರ ದರದಲ್ಲಿ ಖರೀದಿಸಲಾಗಿದೆ. 2015–16ರಲ್ಲಿ ಎಪಿಎಂಸಿಯಲ್ಲಿ ತೊಗರಿಗೆ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ ₹4,425 ಇತ್ತು. 2016–17ರಲ್ಲಿ ಕ್ವಿಂಟಲ್‌ಗೆ ₹5,050 ಇತ್ತು ಎಂದು ವೈ.ಎನ್.ಹೆಗಡೆ ದೂರುತ್ತಾರೆ.

ಅದೇ ರೀತಿ ಹೆಸರು ಬೇಳೆ ಕ್ವಿಂಟಲ್‌ಗೆ ₹ 14,900, ಹೆಸರುಕಾಳಿಗೆ ₹ 11,340, ಶೇಂಗಾ ಕಾಳಿಗೆ ₹ 12,960, ಒಣಮೆಣಸಿನಕಾಯಿಗೆ ₹13,635 ಬೆಲೆ ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆ ಬೆಲೆಗಿಂತ ದುಪ್ಪಟ್ಟು, ಕೆಲವೊಮ್ಮೆ ಮೂರು ಪಟ್ಟು ಹೆಚ್ಚಳವಾಗಿದೆ. ಮಾರುಕಟ್ಟೆಯಲ್ಲಿ ಬೆಲೆ ಇಳಿದಾಗಲೂ ಇದೇ ಮೊತ್ತದಲ್ಲಿ ಆಹಾರ ಪದಾರ್ಥ ಖರೀದಿಸಲಾಗಿದೆ’ ಎಂದು ಅವರು ದಾಖಲೆ ಮುಂದಿಡುತ್ತಾರೆ.

ನನಗಿರುವ ಅಧಿಕಾರ ಬಳಸಿದ್ದೇನೆ’

‘ನಾನು ಪ್ರಾದೇಶಿಕ ಆಯುಕ್ತನಿದ್ದೇನೆ. ನನಗಿರುವ ಅಧಿಕಾರ ಬಳಸಿ ತನಿಖೆಗೆ ಆದೇಶಿಸಿದ್ದೇನೆ. ಆ ಜಿಲ್ಲೆಯವರು (ಬಾಗಲಕೋಟೆ) ಬೇಡ ಎಂದು ಬೆಳಗಾವಿಯ ಅಧಿಕಾರಿಗಳನ್ನೊಳಗೊಂಡ ತನಿಖಾ ತಂಡ ರಚಿಸಿದ್ದೇನೆ’ ಎಂದು ಪಿ.ಎ.ಮೇಘಣ್ಣವರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಯಾರು ಏನೂ ಸೃಷ್ಟಿ ಮಾಡೋಕೆ ಆಗೊಲ್ಲ. ಸುಳ್ಳು ಆರೋಪ ಮಾಡುವ ಆ ಮನುಷ್ಯನಿಗೆ (ವೈ.ಎನ್.ಹೆಗಡೆ) ಸ್ವಲ್ಪ ಕಡತಗಳಲ್ಲಿ ಏನಿದೆ ಎಂದು ನೋಡಬೇಕು. ಯಾರದ್ದೋ ಕುಮ್ಮಕ್ಕು, ಷಡ್ಯಂತ್ರದಿಂದ ಯಾರದ್ದೋ ತಪ್ಪಿಗೆ ಯಾರನ್ನೋ ಬಲಿಕೊಡಬಾರದು. ಜಿಲ್ಲಾಧಿಕಾರಿಯನ್ನು ಅಂಧಕಾರದಲ್ಲಿ ಇಟ್ಟು, ಇಲಾಖೆ ಅಧಿಕಾರಿಗಳು ಸಂಚು ಮಾಡಿ ದರ ಪರಿಷ್ಕರಣೆಗೆ ಅವಕಾಶ ಕೊಡದಿರುವುದು ಅವರ ತಪ್ಪು. ಆದರೆ ನನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಲೋಕಾಯುಕ್ತಕ್ಕೂ ಉತ್ತರ ಕೊಡಲಿದ್ದೇನೆ. ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT