ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಯಲ್ಲೇ ಎಲ್‌ಕೆಜಿ ಆರಂಭಿಸಿ

ಸರ್ಕಾರಿ ಆದೇಶಕ್ಕೆ ಪರ–ವಿರೋಧ ಅಭಿಪ್ರಾಯ
Last Updated 18 ಮೇ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಸಲುವಾಗಿ ರಾಜ್ಯದಲ್ಲಿರುವ 65 ಸಾವಿರದಷ್ಟು ಅಂಗನವಾಡಿ ಕೇಂದ್ರಗಳನ್ನು ಸಮೀಪದ 4,100ರಷ್ಟು ಸರ್ಕಾರಿ ಶಾಲೆಗಳೊಂದಿಗೆ ಸೇರಿಸಿಕೊಳ್ಳುವ ಸರ್ಕಾರದ ಪ್ರಸ್ತಾವಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಸರ್ಕಾರಕ್ಕೆ ಎಲ್‌ಕೆಜಿ/ಯುಕೆಜಿ ತರಗತಿ ಆರಂಭಿಸುವ ನಿಜವಾದ ಕಾಳಜಿ ಇದ್ದರೆ ಅಂಗನವಾಡಿಗಳಲ್ಲೇ ಅದನ್ನು ಆರಂಭಿಸಲಿ. ಅದನ್ನು ಬಿಟ್ಟು ಸರ್ಕಾರಿ ಶಾಲೆಗಳ ಆವರಣದೊಳಗೆ ಅಂಗನವಾಡಿಗಳನ್ನು ಸ್ಥಳಾಂತರಿಸಿ ಅತಿಥಿ ಶಿಕ್ಷಕರಿಗೆ ಎಲ್‌ಕೆಜಿ/ಯುಕೆಜಿ ತರಗತಿ ನಡೆಸುವುದು ಒಂದು ಸಂಸ್ಥೆಯನ್ನು ಉಳಿಸಲು ಹೋಗಿ ಇನ್ನೊಂದು ಸಂಸ್ಥೆಯನ್ನು ಹಾಳುಗೆಡಹುವ ಪ್ರಯತ್ನವಾಗುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು ಸಂಯೋಜಿತ) ರಾಜ್ಯ ಸಮಿತಿಯ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಗನವಾಡಿಯಲ್ಲೇ ಎಲ್‌ಕೆಜಿ/ಯುಕೆಜಿ ಪ್ರಾರಂಭಿಸಿ, ಅಂಗನವಾಡಿ ನೌಕರರಿಗೆ ಈ ಕೆಲಸವನ್ನು ಅಧಿಕೃತವಾಗಿ ವಹಿಸಿವೇತನ ನಿಗದಿಪಡಿಸಬೇಕು. ಈಗ ಇರುವ ಅಂಗನವಾಡಿ ನೌಕರರಿಗೆ ಮಕ್ಕಳ ಜೊತೆಗಿನ ಆತ್ಮೀಯ ತಾಯ್ತನದ ಒಡನಾಟವನ್ನು ಬಲವರ್ಧನೆ ಮಾಡಬೇಕು. ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರಗಳಾಗಿ ಪರಿವರ್ತಿಸಿ, ಶಾಲೆಗಳ ಮಾದರಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನಡೆಸಬೇಕು. ಇದಕ್ಕೆ ಕೊಡಬೇಕಾದ ಹಣಕಾಸು ಸಹಾಯವನ್ನು, ಮೂಲಸೌಕರ್ಯವನ್ನು, ಪ್ರೋತ್ಸಾಹ ಹೆಚ್ಚಿಸಬೇಕು.ಅಂಗನವಾಡಿಯಲ್ಲಿ ಪಡೆಯುತ್ತಿರುವ ಶಾಲಾಪೂರ್ವ ಶಿಕ್ಷಣದ ಆಧಾರದಲ್ಲಿ ಇಲ್ಲಿಂದಲೇ ಮುಂದಿನ ಪ್ರಾಥಮಿಕ ಹಂತದ ಶಿಕ್ಷಣ ಪಡೆಯಲು ಟಿಸಿ ಯನ್ನು ವರ್ಗಾಯಿಸುವ ಕ್ರಿಯೆ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಹಿರಿಯ ಶಿಕ್ಷಣ ತಜ್ಞ ವಾಸುದೇವ ಶರ್ಮಾ ಅವರೂ ಸರ್ಕಾರದ ಈ ನಡೆಯನ್ನು ತೀವ್ರವಾಗಿ ವಿರೋಧಿಸಿದ್ದು, ಯಾರೊಂದಿಗೂ ಚರ್ಚಿಸದೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈ ನಿರ್ಧಾರಕ್ಕೆ ಬಂದಂತಿದೆ, ಈಗಿರುವ ಅಂಗನವಾಡಿ ಸಿಬ್ಬಂದಿಯ ಭವಿಷ್ಯ ಏನು ಎಂಬುದನ್ನು ಮೊದಲಾಗಿ ತಿಳಿಸಬೇಕು. ಇದು ರಾಜಕೀಯ ನಿರ್ಧಾರವೋ, ಅಧಿಕಾರಶಾಹಿಗಳ ನಿರ್ಧಾರವೋ ಎಂಬುದು ಸ್ಪಷ್ಟವಾಗಬೇಕು ಎಂದರು.

ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವ ಚಿಂತನೆ ಉತ್ತಮವೇ. ಆದರೆ ಸುಧಾರಣೆಯ ಯಾವ ಕ್ರಮಗಳನ್ನೂ ಕೈಗೊಳ್ಳದೆ ಇನ್ನೊಂದು ಇಲಾಖೆಯಲ್ಲಿ ನಡೆಯುತ್ತಿದ್ದ ಉತ್ತಮ ವ್ಯವಸ್ಥೆಯನ್ನು ಹಾಳು ಮಾಡುವ ಕ್ರಮ ಸರಿಯಲ್ಲ ಎಂದು ಅವರು ಹೇಳಿದರು.

ಅಂಗನವಾಡಿಗೆ ಬಲವರ್ಧನೆ: ‘ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯ ಶಿಫಾರಸಿನಂತೆ ಸರ್ಕಾರ ಇದೀಗ ಈ ನಿರ್ಧಾರ ಕೈಗೊಂಡಿದೆ. ಸರ್ಕಾರಿ ಶಾಲೆಗಳನ್ನು ಉಳಿಸಲು ಇರುವ ಏಕೈಕ ದಾರಿ ಇದು. ಈ ಕ್ರಮದಿಂದ ಅಂಗನವಾಡಿಗಳು ಮುಚ್ಚುತ್ತವೆ ಎಂಬ ಆರೋಪದಲ್ಲಿ ಹುರುಳಿಲ್ಲ. ಬದಲಿಗೆ ಅಂಗನವಾಡಿಗಳು ಇನ್ನಷ್ಟು ಬಲಿಷ್ಠಗೊಳ್ಳುತ್ತವೆ’ ಎಂದು ಹೇಳುತ್ತಾರೆ ಸಮಿತಿಯ ನೇತೃತ್ವ ವಹಿಸಿದ್ದ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ.

‘2014ರಲ್ಲೇ ಸಮಿತಿ ವರದಿ ಸಲ್ಲಿಸಿತ್ತು. ಬಳಿಕ ಬಹಳ ದೀರ್ಘ ಚರ್ಚೆ ನಡೆದಿದೆ. ಹೀಗಾಗಿ ಸರ್ಕಾರ ತರಾತುರಿಯಿಂದ ಆದೇಶ ಹೊರಡಿಸಿದೆ ಎಂದು ಹೇಳಲಾಗದು.ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡಬೇಕಿದ್ದರೆ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲೇಬೇಕು. ಅಂಗನವಾಡಿಗಳು ಶಿಶುಪಾಲನಾ ಕೇಂದ್ರಗಳಂತೆ ವರ್ತಿಸಿದರೆ, ಅಂದರೆ 1.5 ವರ್ಷದಿಂದ 4.5 ವರ್ಷದೊಳಗಿನ ಮಕ್ಕಳಿಗೆ ಅಲ್ಲಿ ಪೌಷ್ಟಿಕ ಆಹಾರ, ಆಟ, ಆರೋಗ್ಯದ ಕಾಳಜಿ ನೋಡಿಕೊಂಡರೆ ಯಾವ ಸಮಸ್ಯೆಯೂ ಇಲ್ಲ. ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಅಭಿಯಾನದ ಉದ್ದೇಶವೂ ಇದೇ ಆಗಿದೆ’ ಎಂದು ಅವರು ಹೇಳಿದರು.

ಅದೇ ಸಿಬ್ಬಂದಿ, ವಠಾರ ಮಾತ್ರ ಬೇರೆ

ಅಂಗನವಾಡಿಗಳನ್ನು ಪ್ರಾಥಮಿಕ ಶಾಲೆ ಆವರಣಕ್ಕೆ ಮಾತ್ರ ಸ್ಥಳಾಂತರಿಸಲಾಗುತ್ತದೆ. ಈ ಹಿಂದಿನ ಅಂಗನವಾಡಿ ಸಿಬ್ಬಂದಿಯೇ ಇಲ್ಲೂ ಮಕ್ಕಳನ್ನು ಆಟವಾಡಿಸುವ, ಅವರ ಆರೈಕೆ ನೋಡುವ ಕೆಲಸ ಮಾಡುತ್ತಾರೆ. ಆದರೆ ಒಂದನೇ ತರಗತಿಗೆ ಅದೇ ಶಾಲೆಯಲ್ಲಿ ಸೇರುವಂತಾಗಬೇಕು ಎಂಬ ಕಾರಣಕ್ಕೆ ಮಕ್ಕಳನ್ನು ಶಾಲಾ ವಾತಾವರಣಕ್ಕೆ ತರುವ ಕೆಲಸ ನಡೆಯುತ್ತದೆ. ಇದರ ಹೊರತಾಗಿ ಬೇರೆ ಯಾವ ವ್ಯತ್ಯಾಸವೂ ಇಲ್ಲ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌.ಆರ್.ಉಮಾಶಂಕರ್‌ ತಿಳಿಸಿದರು.

ಶಾಲೆ ಆರಂಭಕ್ಕೆ 12 ದಿನವಷ್ಟೇ ಉಳಿದಿದ್ದು, ಸ್ಥಳಾಂತರ ಪ್ರಕ್ರಿಯೆ ಯಾವ ರೀತಿಯಲ್ಲಿ ಇರುತ್ತದೆ ಎಂಬ ಬಗ್ಗೆ ಮಾರ್ಗಸೂಚಿ ಹೊರಬೀಳಬೇಕಿದೆ.

ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸದ ಸರ್ಕಾರ, ಹಾಜರಾತಿ ಹೆಚ್ಚಿಸುವ ಏಕೈಕ ಉದ್ದೇಶದಿಂದ ಅಂಗನವಾಡಿಗೆ ಹೋಗುವ ಮಕ್ಕಳನ್ನು ನೋಂದಣಿ ಮಾಡಿಕೊಳ್ಳುವುದು ನ್ಯಾಯವೇ?
ಎಸ್‌.ವರಲಕ್ಷ್ಮಿ
ಸಿಐಟಿಯು ರಾಜ್ಯ ಅಧ್ಯಕ್ಷೆ

ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸದ ಹೊರತು ಸರ್ಕಾರಿ ಶಾಲೆಗಳಿಗೆ ಭವಿಷ್ಯ ಇಲ್ಲ. ಇದರಿಂದ ಅಂಗನವಾಡಿಗೆ ಧಕ್ಕೆ ಆಗುತ್ತದೆ ಎಂಬುದು ಶುದ್ಧ ಸುಳ್ಳು
ವಿ.ಪಿ.ನಿರಂಜನಾರಾಧ್ಯ
ಶಿಕ್ಷಣ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT