ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ದೀಪಾವಳಿ ಉಡುಗೊರೆ: ₹2000 ಗೌರವ ಧನ ಹೆಚ್ಚಳ

Last Updated 25 ಅಕ್ಟೋಬರ್ 2019, 11:13 IST
ಅಕ್ಷರ ಗಾತ್ರ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವ ಧನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರ್ಕಾರ ದೀಪಾವಳಿ ಹಬ್ಬದ ಉಡುಗೊರೆ ನೀಡಿದೆ. 2018 ಅಕ್ಟೋಬರ್ ತಿಂಗಳಿನಿಂದಲೇ ಇದು ಪೂರ್ವಾನ್ವಯವಾಗಲಿದೆ.

ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು ₹2 ಸಾವಿರ ಹೆಚ್ಚಳ ಮಾಡಿದ್ದು, ಪ್ರಸ್ತುತ ₹8 ಸಾವಿರ ಪಡೆಯುತ್ತಿದ್ದು, ಪರಿಷ್ಕರಣೆ ನಂತರ ₹10 ಸಾವಿರಕ್ಕೆ ಏರಿಕೆಯಾಗಲಿದೆ. ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ₹1250 ಏರಿಕೆಯಾಗಿದ್ದು, ಈಗಿನ ₹4750‌ರಿಂದ ₹6 ಸಾವಿರಕ್ಕೆ ಹೆಚ್ಚಳವಾಗಲಿದೆ. ಸಹಾಯಕಿಯರಿಗೆ ₹1 ಸಾವಿರ ಹೆಚ್ಚಳವಾಗಿದ್ದು, ಈಗಿನ ₹4 ಸಾವಿರದಿಂದ ₹5 ಸಾವಿರಕ್ಕೆ ಏರಿಕೆಯಾಗಲಿದೆ.

2018 ಅಕ್ಟೋಬರ್ ತಿಂಗಳಿನಲ್ಲೇ ಕೇಂದ್ರ ಸರ್ಕಾರ ಗೌರವ ಧನ ಹೆಚ್ಚಳ ಮಾಡಿದ್ದರೂ ರಾಜ್ಯದಲ್ಲಿ ಅದು ಜಾರಿಗೆ ಬಂದಿರಲಿಲ್ಲ. ಕಳೆದ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ₹500 ಏರಿಕೆ ಮಾಡಿದ್ದು, ಅದು ಸಹ ಜಾರಿಯಾಗಿರಲಿಲ್ಲ. ಹಾಗಾಗಿ ಎಲ್ಲವನ್ನೂ ಒಟ್ಟಿಗೆ ಸೇರಿಸಿ ಗೌರವ ಧನ ಹೆಚ್ಚಿಸಿದೀಪಾವಳಿ ಕೊಡುಗೆಯಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬಾಕಿ ಮೊತ್ತವನ್ನು ಒಂದೇ ಕಂತಿನಲ್ಲಿ ಕೊಡಬೇಕೆ ಅಥವಾ ಹಂತಹಂತವಾಗಿ ನೀಡಬೇಕೆ ಎಂಬ ಬಗ್ಗೆ ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.

ದುರಸ್ತಿಗೆ ₹10 ಕೋಟಿ:ನೆರೆಪೀಡಿತ ಪ್ರದೇಶಗಳು ಹಾಗೂ ಇತರ ಭಾಗಗಳಲ್ಲಿ ಶಿಥಿಲಗೊಂಡಿರುವ ಒಂದು ಸಾವಿರ ಅಂಗನವಾಡಿ ಕಟ್ಟಡಗಳ ದುರಸ್ತಿಗೆ ₹10 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಖಾಲಿ ಹುದ್ದೆ ಭರ್ತಿ:ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, ಕೆಪಿಎಸ್‌ಸಿಯಿಂದ ಆಯ್ಕೆಯಾಗಿದ್ದ 48 ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ (ಸಿಡಿಪಿಒ) ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ. 33 ಸಹಾಯಕ ಸಿಡಿಪಿಒಗಳನ್ನು ನೇಮಿಸಿಕೊಂಡಿದ್ದು, ಸ್ಥಳ ನಿಯುಕ್ತಿಗೊಳಿಸಲಾಗುತ್ತಿದೆ. 628 ಮಹಿಳಾ ಮೇಲ್ವಿಚಾರಕರು ತರಬೇತಿ ಪಡೆಯುತ್ತಿದ್ದು, ಸ್ಥಳ ನಿಯುಕ್ತಿಗೊಳಿಸಲಾಗುವುದು ಎಂದು ಅವರು ವಿವರಿಸಿದರು.

ಇಲಾಖೆ ವ್ಯಾಪ್ತಿಯ 104 ಅಧಿಕಾರಿಗಳಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನೂ 80 ವಿವಿಧ ಹಂತದ ಅಧಿಕಾರಿಗಳಿಗೆ ಬಡ್ತಿ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT