‘ಕೈ’ ಬಿಟ್ಟ ಸಿ.ಎಂ ವಿರುದ್ಧ ಆಕ್ರೋಶ

7
ತಪ್ಪಿದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ

‘ಕೈ’ ಬಿಟ್ಟ ಸಿ.ಎಂ ವಿರುದ್ಧ ಆಕ್ರೋಶ

Published:
Updated:

 ಬೆಂಗಳೂರು: ನಿಗಮ- ಮಂಡಳಿಗಳಿಗೆ ಪಕ್ಷದ ಹೈಕಮಾಂಡ್‌ ಸೂಚಿಸಿದ ಹೆಸರುಗಳನ್ನು ಕೈಬಿಟ್ಟ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿಲುವಿನ ವಿರುದ್ಧ ಕಾಂಗ್ರೆಸ್‌ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್‌ ಸೂಚಿಸಿದವರ ಪೈಕಿ ಡಾ.ಕೆ. ಸುಧಾಕರ್‌, (ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ), ಎಸ್‌.ಎನ್‌. ಸುಬ್ಬಾರೆಡ್ಡಿ (ರೇಷ್ಮೆ ಕೈಗಾರಿಕಾ ನಿಗಮ) ಎಸ್‌.ಟಿ ಸೋಮಶೇಖರ್‌ (ಬಿಡಿಎ) ಸೇರಿ ಐವರು ಶಾಸಕರನ್ನು ಕೈಬಿಟ್ಟು ಮುಖ್ಯಮಂತ್ರಿ ಭಾನುವಾರ ಆದೇಶ ಹೊರಡಿಸಿದ್ದರು.

ಒಬ್ಬ ಸಂಸದೀಯ ಕಾರ್ಯದರ್ಶಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ದೆಹಲಿ ಪ್ರತಿನಿಧಿ, ಯೋಜನಾ ಮಂಡಳಿಯ ಉಪಾಧ್ಯಕ್ಷ ಸ್ಥಾನಗಳಿಗೆ ಶಿಫಾರಸು ಮಾಡಿದ ಕಾಂಗ್ರೆಸ್‌ ಶಾಸಕರ ಹೆಸರುಗಳನ್ನೂ ಮುಖ್ಯಮಂತ್ರಿ ಕೈಬಿಟ್ಟಿದ್ದರು.

ಜೆಡಿಎಸ್‌ ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ ಸುಧಾಕರ್‌, ‘ಮಾಲಿನ್ಯ ನಿಯಂತ್ರಣ ಮಂಡಳಿಯೇ ಬೇಕೆಂದು ನಾನು ಅರ್ಜಿ ಹಾಕಿರಲಿಲ್ಲ. ಜೆಡಿಎಸ್‌ನವರು ತಮ್ಮ ಕುಟುಂಬಕ್ಕೆ ಅದನ್ನು ಇಟ್ಟುಕೊಳ್ಳಲಿ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಎಲ್ಲವನ್ನೂ ಅಧಿಕಾರಿಗಳು ಮಾಡುವುದಾದರೆ ಮುಖ್ಯಮಂತ್ರಿ ಯಾಕೆ ಬೇಕು. ಮುಖ್ಯ ಕಾರ್ಯದರ್ಶಿ ಸಾಕಲ್ಲವೇ’ ಎಂದು ಪ್ರಶ್ನಿಸುವ ಮೂಲಕ ಪರಿಸರ ಮಾಲಿನ್ಯ ಮಂಡಳಿಗೆ ಪ್ರೊ. ರಂಗಪ್ಪ ಅವರ ನೇಮಕಕ್ಕೆ ಮುಂದಾ
ಗಿರುವ ಜೆಡಿಎಸ್‌ ನಡೆಯನ್ನು ಟೀಕಿಸಿದರು.

‘ಇದು ನನ್ನ, ಎಸ್.ಟಿ. ಸೋಮಶೇಖರ್ ಅಥವಾ ಸುಬ್ಬಾರೆಡ್ಡಿ ಪ್ರಶ್ನೆ ಅಲ್ಲ. ಈ ನಿಟ್ಟಿನಲ್ಲಿ ಹೈಕಮಾಂಡ್ ಯೋಚನೆ ಮಾಡಲಿ’ ಎಂದರು.

ಮುಖ್ಯಮಂತ್ರಿ ಕೈಬಿಟ್ಟಿಲ್ಲ: ‘ಕೆಲವು ಶಾಸಕರ ಹೆಸರನ್ನು ನಿಗಮ ಮಂಡಳಿ ಪಟ್ಟಿಯಿಂದ ಮುಖ್ಯಮಂತ್ರಿ ಕೈಬಿಟ್ಡಿಲ್ಲ. ಆದರೆ, ತಡೆಹಿಡಿದಿರುವ ಬಗ್ಗೆ ಅವರ ಜೊತೆ ಚರ್ಚಿಸುತ್ತೇನೆ’ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಹೇಳಿದರು.

‘ಹೈಕಮಾಂಡ್ ಸೂಚಿಸಿದ ಶಾಸಕರ ಪಟ್ಟಿಯನ್ನು ಮುಖ್ಯಮಂತ್ರಿ ತಿರಸ್ಕರಿಸಿಲ್ಲ. ನಾನು, ಸಿದ್ದರಾಮಯ್ಯ, ರಾಹುಲ್ ಗಾಂಧಿ ಸೇರಿಯೇ ಪಟ್ಟಿ ಸಿದ್ದಪಡಿಸಿದ್ದೇವೆ. ಹೀಗಾಗಿ ಯಾರ ಹೆಸರನ್ನೂ ಕೈಬಿಡುವ ಪ್ರಶ್ನೆ ಇಲ್ಲ. ಕೆಲವು ಕಾನೂನು ಗೊಂದಲಗಳಾಗಿವೆ. ಆದರೆ, ಸುಧಾಕರ್ ದೂರಿದಂತೆ ರಾಹುಲ್ ಗಾಂಧಿಗೆ ಕುಮಾರಸ್ವಾಮಿ ಅವಮಾನ ಮಾಡಿಲ್ಲ’ ಎಂದರು.

ಬಿಡಿಎ ಅಧ್ಯಕ್ಷ ಸ್ಥಾನ ಎಸ್.ಟಿ. ಸೋಮಶೇಖರ್‌ ಅವರಿಗೆ ಸಿಗದಂತೆ ಪರಮೇಶ್ವರ ತಪ್ಪಿಸಿದರು ಎಂಬ ಆರೋಪ‌ಕ್ಕೆ ಪ್ರತಿಕ್ರಿಯಿಸಿದ ಅವರು, ‘ಆ ರೀತಿ ಏನೂ ಇಲ್ಲ. ಅದೆಲ್ಲ ಸುಳ್ಳು. ದೆಹಲಿಯಲ್ಲಿ ಚರ್ಚೆ ನಡೆಯುತ್ತಿದ್ದಾಗ ಬಿಡಿಎ ಅಧ್ಯಕ್ಷ ಸ್ಥಾನವನ್ನು ಸೋಮಶೇಖರ್‌ಗೆ ಕೊಡುವ ಬಗ್ಗೆ ಸಲಹೆ ಬಂದಿತ್ತು. ನಾನೂ ಅದನ್ನು ಒಪ್ಪಿಕೊಂಡಿದ್ದೆ. ಇನ್ನೊಬ್ಬರ ಅವಕಾಶ ತಪ್ಪಿಸುವ ದುರುದ್ದೇಶ ನನಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಮ್ಮಣ್ಣ ತಿರುಗೇಟು: ‘ಜೆಡಿಎಸ್‌ ಪಕ್ಷದವರು ತಮ್ಮ ಕುಟುಂಬ ಸದಸ್ಯರಿಗೇ ನಿಗಮ– ಮಂಡಳಿ ಸ್ಥಾನ ಕೊಡಲಿ ಬಿಡಿ’ ಎಂದು ಶಾಸಕ ಡಾ.ಕೆ.ಸುಧಾಕರ್‌ ಹೇಳಿಕೆಗೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿ, ‘ಕಾಂಗ್ರೆಸ್‌ ಮುಖಂಡರು ಸಮ್ಮಿಶ್ರ ಸರ್ಕಾರದಲ್ಲಿ ಶಿಸ್ತು ಮೀರುತ್ತಿದ್ದಾರೆ. ಎಚ್‌.ಡಿ.ದೇವೇಗೌಡ ಸಂಬಂಧಿಯಾದ ಮಾತ್ರಕ್ಕೆ ನಮಗೆ ಸ್ವತಂತ್ರ ಅಸ್ತಿತ್ವ ಇಲ್ಲವೆ. ಗೌಡರ ವಿರುದ್ಧವೇ ರಾಜಕಾರಣ ಮಾಡಿಕೊಂಡು ಬಂದವನು ನಾನು. ಟೀಕೆ ಮಾಡುವವರಿಗೆಲ್ಲ ಉತ್ತರ ನೀಡಲು ಸಾಧ್ಯವಿಲ್ಲ’ ಎಂದು ದೇವೇಗೌಡರ ಬೀಗರೂ ಆದ ತಮ್ಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗೆ ದಿನೇಶ್‌ ಪತ್ರ

ನಿಗಮ–ಮಂಡಳಿಗಳಿಗೆ ಪಕ್ಷದ ಶಿಫಾರಸಿನಂತೆ ಶಾಸಕರನ್ನು ನೇಮಿಸದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಮುಖ್ಯಮಂತ್ರಿಗೆ ಸೋಮವಾರ ಪತ್ರ ಬರೆದಿದ್ದಾರೆ. ಪಕ್ಷದ ಪಾಲಿಗೆ ನಿಗದಿಯಾದ 20 ನಿಗಮ ಮಂಡಳಿಗೆ ಸಂಬಂಧಿಸಿದಂತೆ ಹೈಕಮಾಂಡ್‌ ಜೊತೆ ಚರ್ಚಿಸಿ ಪಟ್ಟಿ ಸಿದ್ಧಪಡಿಸಿರುವ ಬಗ್ಗೆ ಪತ್ರದಲ್ಲಿ ದಿನೇಶ್‌ ಗಮನಸೆಳೆದಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಜಿಲ್ಲಾ ಘಟಕಗಳ ಅಧ್ಯಕ್ಷರು ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆ ಮಂಗಳವಾರ (ಜ. 8) ನಡೆಯಲಿದೆ.

****

ಕಾಂಗ್ರೆಸ್‌ ಪಟ್ಟಿ ಪ್ರಕಾರ ಕೆಲವು ನಿಗಮ ಮಂಡಳಿಗಳಿಗೆ ನೇಮಕ ಆಗಿಲ್ಲ. ಕಾರಣವೇನೆಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸುತ್ತೇನೆ
-ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ನನ್ನನ್ನು ನೇಮಕ ಮಾಡದಿರಲು ತಾಂತ್ರಿಕ ಕಾರಣ ನೆಪವಷ್ಟೆ. ಎಸ್‌ಎಸ್‌ಎಲ್‌ಸಿ ಪಾಸಾಗದವರೂ ಎರಡೆರಡು ಖಾತೆ ನಿಭಾಯಿಸುತ್ತಿದ್ದಾರೆ
-ಡಾ. ಕೆ. ಸುಧಾಕರ್‌, ಕಾಂಗ್ರೆಸ್‌ ಶಾಸಕ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !