ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕಿ ಅಂಜಲಿಗೆ ಕಾಂಗ್ರೆಸ್‌ ಟಿಕೆಟ್‌ ಸಾಧ್ಯತೆ

ಮರಾಠ ಸಮುದಾಯದ ಮತ ಸೆಳೆಯಲು ತಂತ್ರ
Last Updated 13 ಮಾರ್ಚ್ 2019, 20:10 IST
ಅಕ್ಷರ ಗಾತ್ರ

ಬೆಳಗಾವಿ: ಸತತ ಮೂರು ಲೋಕಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್‌, ಈ ಸಲ ಬಿಜೆಪಿಗೆ ಪೈಪೋಟಿ ನೀಡಬಲ್ಲ ಪ್ರಬಲ ಅಭ್ಯರ್ಥಿಯ ಹುಡುಕಾಟದಲ್ಲಿ ತೊಡಗಿದೆ.

ಲಿಂಗಾಯತ ಸಮುದಾಯದ ನಂತರ ಎರಡನೇ ಅತಿದೊಡ್ಡ ಸಮುದಾಯವಾಗಿರುವ ಮರಾಠಾ ಮತದಾರರನ್ನು ಓಲೈಸಿಕೊಳ್ಳಲು ಅದೇ ಸಮುದಾಯಕ್ಕೆ ಸೇರಿದ ಖಾನಾಪುರ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ವರಿಷ್ಠರ ಹಂತದಲ್ಲಿ ಚರ್ಚೆ ನಡೆದಿದೆ.

ಐಜಿಪಿ ಹೇಮಂತ ನಿಂಬಾಳ್ಕರ ಅವರ ಪತ್ನಿಯೂ ಆಗಿರುವ ಅಂಜಲಿ ಮೂಲತಃ ಮುಂಬೈನವರು. ನಿಂಬಾಳ್ಕರ ಬೆಳಗಾವಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಬಂದ ನಂತರ ಅವರ ಜೊತೆ ಅಂಜಲಿಯೂ ಬಂದಿದ್ದರು. ಖಾನಾಪುರದಲ್ಲಿ ಮನೆ ಮಾಡಿ, ಗ್ರಾಮಮಟ್ಟದಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿ, ಜನರಿಗೆ ಹತ್ತಿರವಾದರು. ಅದು ಅವರಿಗೆ ಕಳೆದ ವಿಧಾನಸಭೆ ಚುನಾ
ವಣೆಯಲ್ಲಿ ಜಯಗಳಿಸಲುನೆರವಾಯಿತು.

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಗಳಲ್ಲಿ ಮರಾಠಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರ ಜತೆಗೆ ಕಾಂಗ್ರೆಸ್‌ನ ಸಂಪ್ರದಾಯ ಮತಗಳು ಸೇರಿದರೆ ಗೆಲುವು ಸುಲಭವಾಗಲಿದೆ ಎನ್ನುವ ಲೆಕ್ಕಾಚಾರ ವರಿಷ್ಠರದ್ದು.

ಅನುಕಂಪ: ಕಳೆದ ಬಾರಿ ಕಣಕ್ಕಿಳಿದಿದ್ದ ಲಕ್ಷ್ಮಿ ಹೆಬ್ಬಾಳಕರ, 4.78 ಲಕ್ಷ ಮತ ಪಡೆದು ಹಾಲಿ ಸಂಸದ ಬಿಜೆಪಿಯ ಸುರೇಶ ಅಂಗಡಿ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಜಾರಕಿಹೊಳಿ ಕುಟುಂಬದ ಹಿಡಿತ ಇರುವ ಗೋಕಾಕ, ಅರಭಾವಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಂಗಡಿಯವರಿಗಿಂತಲೂ ಹೆಚ್ಚು ಮತ ಪಡೆದಿದ್ದರು. ಇದರ ಜತೆಗೆ ಮಹಿಳೆ ಎನ್ನುವ ‘ಅನುಕಂಪ’ವೂ ಕೆಲಸ ಮಾಡಿತ್ತು. ಅದೇ ರೀತಿ ಈ ಸಲವೂ ಅಂಜಲಿ ಕಣಕ್ಕಿಳಿಸಿದರೆ ಅನುಕೂಲ ಆಗಬಹುದು ಎನ್ನುವ ಲೆಕ್ಕಾಚಾರ ನಡೆದಿದೆ.

‘ಬೆಳಗಾವಿ ಕ್ಷೇತ್ರಕ್ಕೆ ನನ್ನನ್ನು ಪರಿಗಣಿಸುತ್ತಿರುವ ವಿಷಯ ಗೊತ್ತಿಲ್ಲ. ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯಾಗಿರಬಹುದು. ಆದರೆ, ನಾನು ಟಿಕೆಟ್‌ ಕೇಳಿಲ್ಲ’
ಅಂಜಲಿ ನಿಂಬಾಳ್ಕರ, ಶಾಸಕಿ

‘ಅಂಜಲಿ ನಿಂಬಾಳ್ಕರ ಅವರಾಗಿಯೇ ಟಿಕೆಟ್‌ ಕೇಳಿಲ್ಲ. ಆದರೆ, ಅವರ ಬಗ್ಗೆಯೂ ಹೈಕಮಾಂಡ್‌ ಮಟ್ಟದಲ್ಲಿ ಚಿಂತನೆ ನಡೆದಿದೆ. ಸದ್ಯದಲ್ಲಿಯೇ ಹೆಸರು ಅಂತಿಮಗೊಳಿಸಲಾಗುವುದು’
– ಸತೀಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT