ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಶಿಕ್ಷಕ ಸೇರಿ ಐವರ ವಿರುದ್ಧ ದೂರು

ಎಸ್‌ಎಸ್ಎಲ್‌ಸಿ ಪರೀಕ್ಷಾ ಅಕ್ರಮ: ತನಿಖಾ ಸಮಿತಿ ವರದಿ
Last Updated 22 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಇಲ್ಲಿನ ನವನಗರದ ಅಂಜುಮನ್ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಆರ್.ಎಂ.ಕುಂಟೋಜಿ, ರಿಲೀವರ್‌ಗಳಾದ ಆರ್.ಎಸ್.ಮನಹಳ್ಳಿ, ಎಂ.ಡಿ.ಹಿರೇಹಾಳ, ಎಂ.ಎ.ಯಂಡಿಗೇರಿ, ಗುಮಾಸ್ತ ಎಚ್.ವಿ. ಯಡಹಳ್ಳಿ ವಿರುದ್ಧ ಗುರುವಾರ ಇಲ್ಲಿನ ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ದ್ವಿತೀಯ ಭಾಷೆಯಾಗಿ ಕನ್ನಡ ಪರೀಕ್ಷೆ ಬರೆದ ಉರ್ದು ಮಾಧ್ಯಮದ48 ವಿದ್ಯಾರ್ಥಿಗಳ ಉತ್ತರ ಪತ್ರಿಕೆಯಲ್ಲಿ ಒಂದಕ್ಕಿಂತ ಹೆಚ್ಚು ಕೈ ಬರಹಗಳು ಕಂಡುಬಂದಿದ್ದವು. ಹೀಗಾಗಿ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿಚಾರಣೆಗೆ ಆದೇಶಿಸಿತ್ತು. ಅದಕ್ಕಾಗಿ ಮಂಡಳಿಯ ಸಹ ನಿರ್ದೇಶಕಿ ಎಸ್.ಗೀತಾ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ನೇಮಿಸಲಾಗಿತ್ತು.

ವಿಚಾರಣೆ ನಡೆಸಿ ಲೋಪ ಆಗಿರುವುದನ್ನು ಸಮಿತಿ ದೃಢೀಕರಿಸಿದ್ದು, ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದೆ. ಹೀಗಾಗಿ ಮಂಡಳಿ ನಿರ್ದೇಶಕರ ಸೂಚನೆಯಂತೆ ಬಾಗಲಕೋಟೆ ಬಿಇಒ ದೊಡ್ಡಬಸಪ್ಪ ನೀರಲಕೇರಿ ದೂರು ದಾಖಲಿಸಿದ್ದಾರೆ. ವಿಶೇಷವೆಂದರೆ ಆರ್.ಎಂ.ಕುಂಟೋಜಿ, ಅಂಜುಮನ್ ಶಾಲೆಯ ಮುಖ್ಯ ಶಿಕ್ಷಕ. ಉಳಿದವರು ಅಲ್ಲಿಯೇ ಶಿಕ್ಷಕರು.

ಬಯಲಿಗೆ ಬಂದದ್ದು ಹೇಗೆ?: ಅಂಜುಮನ್ ಉರ್ದು ಶಾಲೆಯ 48 ಮಂದಿ ಅದೇ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು.

ಪರೀಕ್ಷೆ ನಂತರ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ನಡೆಸಲು ಬಳ್ಳಾರಿಗೆ ಕಳುಹಿಸಿಲಾಗಿತ್ತು. ಅವುಗಳಲ್ಲಿ 11 ಪ್ಯಾಕೆಟ್‌ಗಳ ಉತ್ತರ ಪತ್ರಿಕೆಗಳಲ್ಲಿ ಲೋಪದೋಷವಿರುವುದು ಪತ್ತೆಯಾಗಿತ್ತು. ಉತ್ತರ ಪತ್ರಿಕೆಯ ಮೇನ್‌ಬುಕ್‌ನಲ್ಲಿ ಒಂದು ಕೈ ಬರಹ ಇದ್ದರೆ, ಹೆಚ್ಚುವರಿ (ಅಡಿಶನಲ್) ಶೀಟ್‌ಗಳಲ್ಲಿ ಬೇರೆಯವರ ಕೈಬರಹ ಕಂಡುಬಂದಿದೆ. ಅನುಮಾನಗೊಂಡ ಮೌಲ್ಯಮಾಪನಕರು, ಅದನ್ನು ಪರೀಕ್ಷಾ ಮಂಡಳಿ ಗಮನಕ್ಕೆ ತಂದಿದ್ದರು.

ಈ ಕಾರಣದಿಂದ ಅಂಜುಮನ್ ಉರ್ದು ಶಾಲೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವನ್ನು ಪರೀಕ್ಷಾ ಮಂಡಳಿ ತಡೆಹಿಡಿದಿತ್ತು. ಕೊನೆಗೆ ಮಕ್ಕಳ ಕೈಬರಹದ ಉತ್ತರವನ್ನು ಮಾತ್ರ ಪರಿಗಣಿಸಿ ಫಲಿತಾಂಶ ಪ್ರಕಟಿಸಿತ್ತು.

ವಿಷಯ ಶಿಕ್ಷಕರೇ ಬರೆದಿದ್ದಾರೆ?:‘ಮೇನ್ ಪೇಪರ್ ಮಕ್ಕಳು ಖಾಲಿ ಬಿಟ್ಟಿದ್ದಾರೆ. ಪರೀಕ್ಷೆ ಮುಗಿದ ನಂತರ, ವಿಷಯ ಶಿಕ್ಷಕರೇ ಹೆಚ್ಚುವರಿ ಪುಟದಲ್ಲಿ ಉತ್ತರ ಬರೆದಿದ್ದಾರೆ. ಪಾಸ್‌ಮಾರ್ಕ್ಸ್‌ಗೆ ಆಗುವಷ್ಟು ಒಬ್ಬೊಬ್ಬರು 15ರಿಂದ 20 ಮಕ್ಕಳಿಗೆ ಉತ್ತರ ಬರೆದುಕೊಟ್ಟಿದ್ದಾರೆ. ಪರೀಕ್ಷೆ ಮೇಲ್ವಿಚಾರಕರ ಸಹಿಯನ್ನು ಫೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

*

"ಪೊಲೀಸ್ ತನಿಖೆಗೆ ವಹಿಸಿರುವುದಕ್ಕೆ ತಕರಾರು ಇಲ್ಲ. ಲೋಪ ಯಾವ ಹಂತದಲ್ಲಿ ಆಗಿದೆ ಎಂಬುದರ ಬಗ್ಗೆ ನಮಗೆ ಅನುಮಾನವಿದೆ.

-ಮೈನುದ್ದೀನ್ ನಬಿವಾಲೆ,ಅಂಜುಮನ್ ಸಂಸ್ಥೆ ನಿರ್ದೇಶಕ

*

"ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸೂಚನೆಯಂತೆ ಬಿಇಒ ಎಫ್‌ಐಆರ್ ದಾಖಲಿಸಿದ್ದಾರೆ. ಪೊಲೀಸರಿಗೆ ಅಗತ್ಯ ಸಾಕ್ಷ್ಯಗಳನ್ನು ಸಲ್ಲಿಸಲಾಗಿದೆ.

-ಬಿ.ಎಚ್.ಗೋನಾಳ, ಡಿಡಿಪಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT