7

ಮಡಿಕೇರಿಯಲ್ಲಿ ಮತ್ತೆ ಆತಂಕ ಸೃಷ್ಟಿಸಿದ ಕಾಡಾನೆಗಳು

Published:
Updated:

ಮಡಿಕೇರಿ: ಮಳೆ ಬಿದ್ದು ಅರಣ್ಯ ಪ್ರದೇಶದಲ್ಲಿ ಆಹಾರ, ನೀರು ಲಭ್ಯವಾಗುತ್ತಿದ್ದರೂ ಕಾಡಾನೆಗಳು ನಾಡಿಗೆ ಲಗ್ಗೆಯಿಡುವುದು ಇನ್ನೂ ನಿಂತಿಲ್ಲ. ‘ಮಂಜಿನ ನಗರಿ’ ಮಡಿಕೇರಿ ಹೊರವಲಯಕ್ಕೆ ಸೋಮವಾರ ಎರಡು ಕಾಡಾನೆಗಳು ಬಂದು ಆತಂಕ ಸೃಷ್ಟಿಸಿದವು. ಅರಣ್ಯ ಇಲಾಖೆ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ, ಕಾಡಿಗಟ್ಟಲು ಯಶಸ್ವಿಯಾದರು.  

ಬೆಳಿಗ್ಗೆ ನೀರುಕೊಲ್ಲಿ ಎಂಬ ಸ್ಥಳದಲ್ಲಿ ಕಾಣಿಸಿಕೊಂಡ ಎರಡು ಗಂಡಾನೆಗಳು, ಮಧ್ಯಾಹ್ನದ ವೇಳೆಗೆ ಮಡಿಕೇರಿಯಿಂದ ಅರ್ಧ ಕಿ.ಮೀ. ದೂರದ ಗ್ರೀನ್‌ವ್ಯಾಲಿ ಹೋಮ್‌ಸ್ಟೇ ಸಮೀಪಕ್ಕೆ ಬಂದಿವೆ. ಆನೆಗಳು ಬಂದಿರುವ ಮಾಹಿತಿ ತಿಳಿದ ಅರಣ್ಯ ಸಿಬ್ಬಂದಿ ಅವುಗಳನ್ನು ಅರಣ್ಯ ಪ್ರದೇಶಕ್ಕೆ ವಾಪಸ್‌ ಕಳುಹಿಸಲು ಹರ ಸಾಹಸಪಟ್ಟರು. ಅದು ಸಾಧ್ಯವಾಗಲಿಲ್ಲ. ಬಳಿಕ ಆರ್‌ಎಫ್‌ಒ ರಂಜನ್‌ ನೇತೃತ್ವದಲ್ಲಿ ಸ್ಥಳಕ್ಕೆ ಬಂದ ಕ್ಷಿಪ್ರ ಕಾರ್ಯಾಚರಣೆ ತಂಡದ (ಆರ್‌ಆರ್‌ಟಿ) ಸದಸ್ಯರು ಪಟಾಕಿ ಸಿಡಿಸಿ, ಆನೆಗಳನ್ನು ಬೆದರಿಸಿದರು. ಅದಕ್ಕೂ ಜಗ್ಗದ ಕಾಡಾನೆಗಳು ಮಡಿಕೇರಿ– ವಿರಾಜಪೇಟೆಯ ಮುಖ್ಯರಸ್ತೆಗೆ ಬಂದು ಆತಂಕ ಸೃಷ್ಟಿಸಿದವು. ಕೆಲಕಾಲ ರಸ್ತೆಯಲ್ಲಿ ಸಂಚರಿಸಿ ಅಲ್ಲಿಯೇ ಲದ್ದಿಹಾಕಿ ವಾಹನ ಸಂಚಾರಕ್ಕೂ ತಡೆ ಮಾಡಿದವು. ಕಾರ್ಯಾಚರಣೆ ವೇಳೆ ನಮ್ಮ ಮೇಲೂ ದಾಳಿಗೆ ಮುಂದಾಗಿದ್ದವು ಆರ್‌ಆರ್‌ಟಿ ಸಿಬ್ಬಂದಿ ಹೇಳಿದರು.  

ಸತತ ಕಾರ್ಯಾಚರಣೆಯಿಂದ ಸಂಜೆ 4ರ ಸುಮಾರಿಗೆ ಎರಡು ಆನೆಗಳು ದೂರಕ್ಕೆ ತೆರಳಿವೆ. ಆದರೆ, ಮೇಕೇರಿ ಗ್ರಾಮದ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಸಾಧ್ಯತೆಯಿದ್ದು, ಹೋಮ್‌ಸ್ಟೇಗಳಲ್ಲಿ ತಂಗಿರುವ ಪ್ರವಾಸಿಗರು ಹಾಗೂ ಸ್ಥಳೀಯರು ಮನೆಯಿಂದ ಹೊರಬರಬಾರದು. ಕಾರ್ಯಾಚರಣೆಯಿಂದ ಆನೆಗಳು ಗಾಬರಿಗೊಂಡಿದ್ದು ದಾಳಿ ಮಾಡುವ ಸಾಧ್ಯತೆಯಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಸಿದ್ದಾರೆ. 

ಅದೇ ಆನೆಗಳು!: ಡಿಸೆಂಬರ್‌ನಲ್ಲೂ ಎರಡು ಆನೆಗಳು ಇಲ್ಲಿನ ಸುದರ್ಶನ ವೃತ್ತದ ಬಳಿಗೆ ಬಂದಿದ್ದವು. ಶಾಸಕ ಕೆ.ಜಿ. ಬೋಪಯ್ಯ ಅವರ ನಿವಾಸದ ಬಳಿ ದಾಂದಲೆ ನಡೆಸಿ ಆವರಣಗೋಡೆ ಉರುಳಿಸಿದ್ದವು. ಆರು ತಿಂಗಳ ಬಳಿಕ ಮತ್ತೆ ಕಾಡಾನೆಗಳು ಮಡಿಕೇರಿ ಸಮೀಪವೇ ಸಂಚರಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿಂದೆ ದಾಂದಲೆ ನಡೆಸಿದ್ದ ಕಾಡಾನೆಗಳೇ ಮತ್ತೆ ನಗರಕ್ಕೆ ಬಂದಿರಬಹುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !