ಗುರುವಾರ , ನವೆಂಬರ್ 21, 2019
22 °C

ಪಠ್ಯದಿಂದ ಟಿಪ್ಪು ವಿಷಯ ಕೈಬಿಡುವಂತೆ ಸುರೇಶ್ ಕುಮಾರ್‌ಗೆ ಮಡಿಕೇರಿ ಶಾಸಕ ಪತ್ರ

Published:
Updated:

ಮಡಿಕೇರಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಟಿಪ್ಪು ಜಯಂತಿ ರದ್ದು ಪಡಿಸಲಾಗಿದ್ದು ಈಗ ಪಠ್ಯದಿಂದಲೂ ಟಿಪ್ಪು ಸುಲ್ತಾನ್‌ ವಿಷಯ ಕೈಬಿಡಬೇಕೆಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಕುರಿತು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

‘ಈಗಿನ ಶಿಕ್ಷಣ ಪದ್ಧತಿ ಕುರಿತು ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿ, ಮುಂದಿನ ಪೀಳಿಗೆಗೆ ಅನುಕೂಲುವಾಗುವಂತೆ ದೇಶ ಭಕ್ತಿ, ದೇಶ ಪ್ರೇಮ ಮೂಡಿಸುವ ಶಿಕ್ಷಣವನ್ನು ಪ್ರಾಥಮಿಕ ಹಾಗೂ ಪ್ರೌಢಶಾಲಾ ಪಠ್ಯದಲ್ಲಿ ಅಳವಡಿಸಬೇಕು. ಟಿಪ್ಪು ಕುರಿತು ಸೃಷ್ಟಿಸಿರುವ ಇತಿಹಾಸವನ್ನು ಸಂಪೂರ್ಣವಾಗಿ ಪಠ್ಯ ಪುಸ್ತಕದಿಂದ ತೆಗೆದು ಹಾಕಬೇಕು’ ಎಂದು ರಂಜನ್‌ ಆಗ್ರಹಿಸಿದ್ದಾರೆ.

‘ನಮ್ಮ ಶಾಲೆಗಳಲ್ಲಿ ಕಲಿಸಲಾಗುತ್ತಿರುವ ಇತಿಹಾಸ ಪೂರ್ಣವಲ್ಲ, ಪೂರ್ಣ ಸತ್ಯವಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಇದ್ದೇವೆ. ಇದೇ ಇತಿಹಾಸವೆಂದು ಅಂತಿಮ ಗೆರೆ ಎಳೆದು ಬಿಡುವುದು ಸಾಧ್ಯವಿಲ್ಲ. ಟಿಪ್ಪು ಚರಿತ್ರೆ ಅರಿಯದೇ ಆತನನ್ನು ವೈಭವೀಕರಿಸಿ ಬರೆದಿರುವುದನ್ನು ಮೊದಲು ಕೈಬಿಡಬೇಕು. ಟಿಪ್ಪು ತನ್ನ ಸಾಮ್ರಾಜ್ಯ ವಿಸ್ತರಣೆ, ಧರ್ಮ ಪ್ರಚಾರಕ್ಕೆ ಹೊರಟಿದ್ದನೇ ಹೊರತು ಎಂದೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿಲ್ಲ’ ಎಂದು ಹೇಳಿದ್ದಾರೆ.

‘ಸ್ವಾತಂತ್ರ್ಯ ಹೋರಾಟಗಾರರ ಸ್ಥಾನದಲ್ಲಿ ಟಿಪ್ಪುವಿರಲು ಸಾಧ್ಯವಿಲ್ಲ. ಕೊಡವರ ಮಾರಣ ಹೋಮ ನಡೆಸಿದ್ದ. ಕೊಡಗಿನವರ ಮೇಲೆ ಆತ ಮಾಡಿದ್ದ ಕ್ರೌರ್ಯ ಮರೆಯಬಾರದೆಂದು ಕೊಡಗಿನಲ್ಲಿ ಟಿಪ್ಪು ಹೆಸರನ್ನು ಇಂದಿಗೂ ನಾಯಿಗಳಿಗೆ ಇಡಲಾಗುತ್ತಿದೆ. ಮಂಗಳೂರಿನಲ್ಲಿ 50 ಸಾವಿರಕ್ಕೂ ಹೆಚ್ಚು ಕ್ರಿಶ್ಚಿಯನ್ನರನ್ನು ಮತಾಂತರ ಮಾಡಿದ್ದಾನೆ. ಅದಕ್ಕೆ ಈಗಲೂ ಕೊಡಗು ಹಾಗೂ ಮಂಗಳೂರಿನಲ್ಲಿ ‍ಪುರಾವೆಗಳಿವೆ. ಟಿಪ್ಪು ಕನ್ನಡ ವಿರೋಧಿಯೂ ಹೌದು’ ಎಂದು ಪತ್ರದಲ್ಲಿ ರಂಜನ್ ಉಲ್ಲೇಖಿಸಿದ್ದಾರೆ. 

ಪ್ರತಿಕ್ರಿಯಿಸಿ (+)