ಗುರುವಾರ , ಫೆಬ್ರವರಿ 20, 2020
19 °C
ಮಾನ್ವಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವಿನೂತನ ಯತ್ನ

ವಿದ್ಯಾರ್ಥಿಗಳ ಬಳಿಗೇ ಶಿಷ್ಯವೇತನದ ಅರ್ಜಿ

ಬಸವರಾಜ ಬೋಗಾವತಿ Updated:

ಅಕ್ಷರ ಗಾತ್ರ : | |

Prajavani

ಮಾನ್ವಿ (ರಾಯಚೂರು ಜಿಲ್ಲೆ): ಕಾಲೇಜು ಗಳಿಗೇ ತೆರಳಿ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವೇತನಕ್ಕೆ ವಿದ್ಯಾರ್ಥಿಗಳಿಂದ
ಅರ್ಜಿ ಸ್ವೀಕರಿಸುವ ವಿನೂತನ ಯತ್ನವನ್ನು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಮಾಡುತ್ತಿದೆ.

ಇಲಾಖೆಯ ತಾಲ್ಲೂಕು ಕಚೇರಿಯ ಅಧಿಕಾರಿಗಳು ಇದಕ್ಕಾಗಿಯೇ ಒಂದು ವಾಹನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇಂಟರ್‌ನೆಟ್‌ ಸೌಲಭ್ಯ ಇರುವ ಲ್ಯಾಪ್‌ಟಾಪ್‌, ಸ್ಕ್ಯಾನರ್‌ಗಳೊಂದಿಗೆ ಸಿಬ್ಬಂದಿ ಆ ವಾಹನದಲ್ಲಿ ಕಾಲೇಜುಗಳಿಗೆ ತೆರಳುತ್ತಾರೆ. ಅಲ್ಲಿ ಅರ್ಹ ವಿದ್ಯಾರ್ಥಿಗಳಿಂದ ಮಾಹಿತಿ ಸಂಗ್ರಹಿಸಿ ಅರ್ಜಿ ಭರ್ತಿ ಮಾಡುತ್ತಿದ್ದಾರೆ.

ಈಗಾಗಲೇ ಮಾನ್ವಿ ಪಟ್ಟಣ, ಸಿರವಾರ, ಕವಿತಾಳ, ಪೋತ್ನಾಳ ಸೇರಿದಂತೆ ತಾಲ್ಲೂಕಿನ 40ಕ್ಕೂ ಅಧಿಕ ಶಾಲೆ– ಕಾಲೇಜುಗಳಿಗೆ ತೆರಳಿರುವ ಇಲಾಖೆಯ ಸಿಬ್ಬಂದಿ, ಇದುವರೆಗೆ ಪರಿಶಿಷ್ಟ ವರ್ಗಕ್ಕೆ ಸೇರಿದ ಸುಮಾರು 950ಕ್ಕೂ ಅಧಿಕ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಭರ್ತಿ ಮಾಡಿದ್ದಾರೆ.

ಈ ವಾಹನ ಯಾವ ಕಾಲೇಜಿಗೆ ಯಾವತ್ತು ಬರಲಿದೆ ಎಂಬ ಮಾಹಿತಿ
ಯನ್ನು ಮುಂಚಿತವಾಗಿ ನೀಡಲಾಗುತ್ತಿದೆ. ಆ ಸಮಯದಲ್ಲಿ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಿದ್ಧವಾಗಿರುತ್ತಾರೆ.

‘ಅರ್ಜಿ ಸಲ್ಲಿಸಲು ಡಿ.31 ಕೊನೆ ದಿನ. ಅರ್ಜಿ ಸಲ್ಲಿಸಲು ಇಂಟರ್‌ನೆಟ್‌ ಕೆಫೆಗಳಿಗೆ ಅಲೆಯಬೇಕಿತ್ತು. ಇದಕ್ಕಾಗಿ ಕನಿಷ್ಠ ₹100 ವೆಚ್ಚ ಮಾಡಬೇಕಿತ್ತು. ಈಗ ತೊಂದರೆ ತಪ್ಪಿದೆ. ನಾವಿದ್ದಲ್ಲಿಗೇ ಬಂದು ಅರ್ಜಿ ಸ್ವೀಕರಿಸುತ್ತಿರುವುದು ಖುಷಿ ತಂದಿದೆ’ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.

‘ಮೆಟ್ರಿಕ್‌ ನಂತರದ ಎಲ್ಲ ಅರ್ಹ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ದೊರಕಿಸಲು ಸಂಚಾರಿ ವಾಹನ ಆರಂಭಿಸಿದ್ದೇವೆ. ನಮ್ಮ ಈ ಹೊಸ ಪ್ರಯತ್ನಕ್ಕೆ ಉತ್ತಮ ಸ್ಪಂದನೆ ದೊರೆತಿದೆ’ ಎನ್ನುತ್ತಾರೆ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಂಕರ ಬಂಕಾಪುರಮಠ.

‘ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಈ ಕಾರ್ಯಾಚರಣೆ ಆರಂಭಿಸಿದ್ದೇವೆ. ಈ ವಾಹನಕ್ಕೆ ತಗಲುವ ವೆಚ್ಚ ಭರಿಸಲು ಇಲಾಖೆಗೆ ಪತ್ರ ಬರೆಯುತ್ತೇವೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು