ಬುಧವಾರ, ಅಕ್ಟೋಬರ್ 16, 2019
22 °C

ಧನವಿನಿಯೋಗ ಮಸೂದೆಗೆ ಒಪ್ಪಿಗೆ

Published:
Updated:

ಬೆಂಗಳೂರು: 2019–20ನೇ ಸಾಲಿಗೆ ₹2.40 ಲಕ್ಷ ಕೋಟಿ ವೆಚ್ಚ ಮಾಡಲು ಅವಕಾಶ ನೀಡುವ ಧನ ವಿನಿಯೋಗ ಮಸೂದೆಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಶನಿವಾರ ಒಪ್ಪಿಗೆ ನೀಡಲಾಯಿತು.

ವಿಧಾನಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದರೆ, ವಿಧಾನಪರಿಷತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೆ ಸರ್ವಾನುಮತದಿಂದ ಮಸೂದೆಗೆ ಒಪ್ಪಿಗೆ ಸೂಚಿಸಲಾಯಿತು.

ಎಚ್‌. ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನೆರೆಗೆ ಸಂಬಂಧಿಸಿದಂತೆ ಪೂರಕ ಅಂದಾಜನ್ನು ಮಾತ್ರ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಫೆಬ್ರುವರಿಯಲ್ಲಿ ನಾಲ್ಕು ತಿಂಗಳ ಅವಧಿಗೆ ಸುಮಾರು ₹80.16 ಸಾವಿರ ಕೋಟಿಗೆ ಲೇಖಾನುದಾನ ಪಡೆದಿದ್ದರು. ಆ ಬಳಿಕ ಅಧಿಕಾರ ಹಿಡಿದ ಬಿ.ಎಸ್‌.ಯಡಿಯೂರಪ್ಪ ಮೂರು ತಿಂಗಳ ಅವಧಿಗೆ ₹62,751 ಕೋಟಿಗೆ ಲೇಖಾನುದಾನ ಪಡೆದಿದ್ದರು. ಹೀಗೆ ಒಟ್ಟು ₹14.2 ಲಕ್ಷ ಕೋಟಿಗೆ ಲೇಖಾನುದಾನ ಪಡೆಯಲಾಗಿತ್ತು.

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಮೂರು ತಿಂಗಳಿಗೆ ಲೇಖಾನುದಾನ ಪಡೆದಿದ್ದು ನೋಡಿ, ಹೊಸ ಬಜೆಟ್‌ ಮಂಡಿಸಬಹುದು ಎಂದುಕೊಂಡಿದ್ದೆ. ಆದರೆ, ಆ ರೀತಿ ಮಾಡಲಿಲ್ಲ. ವರ್ಷದಲ್ಲಿ ಎರಡೆರಡು ಸಲ ಲೇಖಾನುದಾನ ಪಡೆಯುವ ಪರಿಪಾಠಕ್ಕೆ ಮಂಗಳ ಹಾಡಬೇಕು. ಇಲ್ಲವಾದರೆ ಬಜೆಟ್‌ಗೆ ಅಪಚಾರ ಎಂದು ಹೇಳಿದರು.

ಒಂದೇ ದಿನದಲ್ಲಿ ಚರ್ಚೆ ಮತ್ತು ಒಪ್ಪಿಗೆ: ಬಜೆಟ್‌ ಮೇಲಿನ ಚರ್ಚೆ ನಡೆಸುವಾಗ 15 ದಿನಗಳಿಗೆ ಕಡಿಮೆ ಇಲ್ಲದಂತೆ ಬೇಡಿಕೆಗಳ ಮೇಲೆ ಚರ್ಚೆ ನಡೆಸಬೇಕು ಎಂದು ನಿಯಮಾವಳಿ ಹೇಳುತ್ತದೆ. ಆದರೆ, ಒಂದೇ ದಿನದಲ್ಲಿ ಧನವಿನಿಯೋಗ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯುವುದು ಎಷ್ಟರ ಮಟ್ಟಿಗೆ ಸರಿ. ಇದು ಸದಸ್ಯರ ಹಕ್ಕು ಚ್ಯುತಿ ಆಗುತ್ತದೆ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಪ್ರಶ್ನಿಸಿದರು.

ಸದನ ಮುಂದೂಡುವ ಸಂಬಂಧ ಕೃಷ್ಣ ಬೈರೇಗೌಡ ಎತ್ತಿದ ಆಕ್ಷೇಪವನ್ನು ಸಮರ್ಥಿಸಿ ಸಿದ್ದರಾಮಯ್ಯ ಮಾತನಾಡಿದರು.

ವಿಧಾನ ಪರಿಷತ್‌: ಕಾಂಗ್ರೆಸ್‌ ಧರಣಿ

ನೆರೆ ಪರಿಹಾರ ವಿಚಾರದಲ್ಲಿ ಸರ್ಕಾರ ನೀಡಿದ ಉತ್ತರ ಸಮರ್ಪಕವಾಗಿಲ್ಲ ಎಂದು ಆರೋಪಿಸಿ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಮುಂಭಾಗ ಧರಣಿ ನಡೆಸಿದರು.

ಸುದೀರ್ಘ ಚರ್ಚೆಯ ಬಳಿಕ ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್‌. ಅಶೋಕ್‌ ಉತ್ತರ ನೀಡಿದರು. ಇದರಿಂದ ತೃಪ್ತರಾಗದ ವಿರೋಧ ಪಕ್ಷದ ನಾಯಕ ಎಸ್‌. ಆರ್‌. ಪಾಟೀಲ ಅವರು, ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಸದನ ನಿರ್ಣಯ ಕೈಗೊಳ್ಳಬೇಕು, ಮನೆಗಳ ನಿರ್ಮಾಣಕ್ಕೆ ₹ 5 ಲಕ್ಷ ಬದಲಿಗೆ ₹ 10 ಲಕ್ಷ ನೀಡಬೇಕು ಹಾಗೂ ಕಬ್ಬು ಬೆಳೆ ನಾಶಕ್ಕೆ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು ಎಂದರು. ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳುತ್ತಿದ್ದಂತೆಯೇ ಸದಸ್ಯರೆಲ್ಲ ಸಭಾಪತಿ ಪೀಠದ ಮುಂಭಾಗಕ್ಕೆ ಬಂದು ಧರಣಿ ನಡೆಸಿದರು. ಜೆಡಿಎಸ್‌ ಸದಸ್ಯರು ಧರಣಿಯಲ್ಲಿ ಪಾಲ್ಗೊಳ್ಳಲಿಲ್ಲ.

ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ನೆರೆ ಪರಿಹಾರ ಕುರಿತಂತೆ ವಿವರವಾದ ಚರ್ಚೆಗೆ ಅವಕಾಶ ನೀಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಬಳಿಕ ಉಭಯ ಸದನಗಳನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು.

Post Comments (+)