ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜಿತಾ ಚಾನು ನೀಡಿದ್ದ ಮಾದರಿ ಅದಲು ಬದಲು: ರಾಜ್ಯವರ್ಧನ್‌ ಸಿಂಗ್‌

Last Updated 3 ಜೂನ್ 2018, 19:30 IST
ಅಕ್ಷರ ಗಾತ್ರ

ಇಂಪಾಲ್‌ : ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದಿರುವ ವೇಟ್‌ಲಿಫ್ಟರ್‌ ಸಂಜಿತಾ ಚಾನು ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರದ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ಅವರು ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ್‌ ಸಿಂಗ್‌ ರಾಥೋಡ್‌ ಅವರಿಗೆ ಪತ್ರ ಬರೆದಿದ್ದು, ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕೆಂದು ಕೋರಿದ್ದಾರೆ.

‘ಸಂಜಿತಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿರುವ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ನೀಡಿರುವ ಆದೇಶದಲ್ಲೇ ಗೊಂದಲಗಳಿವೆ. ನನಗೆ ದೊರಕಿರುವ ಆದೇಶ ಪ್ರತಿಯ ಮೊದಲ ಪ್ಯಾರಾದಲ್ಲಿ ಸಂಜಿತಾ ಅವರ ಪರೀಕ್ಷೆಯ ಮಾದರಿಯ ಸಂಖ್ಯೆ 1599000 ಎಂದಿದೆ. ಆದರೆ, ನಾಲ್ಕನೇ ಪ್ಯಾರಾದಲ್ಲಿ 1599176 ಎಂದು ನಮೂದಿಸಲಾಗಿದೆ. ಇದರಿಂದ ಹಲವು ಅನುಮಾನಗಳು ಹುಟ್ಟುತ್ತವೆ. ಸಂಜಿತಾ ಅವರ ಮೂತ್ರದ ಮಾದರಿಯ ಸಂಗ್ರಹ ಹಾಗೂ ಪರೀಕ್ಷೆಯಲ್ಲಿ ದೋಷವಿರಬಹುದು’ ಎಂದು ಬಿರೇನ್‌ ಸಿಂಗ್‌ ಅವರು ಪತ್ರದಲ್ಲಿ ಹೇಳಿದ್ದಾರೆ.

‘ಪರೀಕ್ಷೆಗೆ ಸಂಗ್ರಹಿಸಿದ ಮಾದರಿಯನ್ನು ಅದಲು–ಬದಲು ಮಾಡಿರುವ ಸಾಧ್ಯತೆ ಇದೆ. ಹೀಗಾಗಿ ಒಂದೇ ವರದಿಯನ್ನು ಎರಡು ಸಂಖ್ಯೆಗಳಲ್ಲಿ ನಮೂದಿಸಲಾಗಿದೆ. ಆದ್ದರಿಂದ ಈ ‍ಪ್ರಕರಣದಲ್ಲಿ ಕೂಡಲೇ ಮಧ್ಯ‍ಪ್ರವೇಶಿಸಿ, ಅಮಾನತು ಆದೇಶವನ್ನು ಪ್ರಶ್ನಿಸಬೇಕು’ ಎಂದೂ ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಂಜಿತಾ ಅವರು ಉದ್ದೀಪನ ಮದ್ದು ಸೇವಿಸಿರುವುದು ಕಳೆದ ಗುರುವಾರ ಧೃಡಪಟ್ಟಿತ್ತು. ಅವರ ಮೂತ್ರದ ಮಾದರಿಯಲ್ಲಿ ಟೆಸ್ಟೋಸ್ಟೆರಾನ್‌ (ಅನಾಬೊಲಿಕ್‌)   ಪತ್ತೆಯಾಗಿತ್ತು. ಇದರಿಂದಾಗಿ ಐಡಬ್ಲ್ಯುಎಫ್‌ ಸಂಜಿತಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿತ್ತು.

ಐಡಬ್ಲ್ಯುಎಫ್‌ನ ನಿರ್ಧಾರವನ್ನು ವಿರೋಧಿಸಿದ್ದ ಇಂಡಿಯನ್‌ ವೇಟ್‌ ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಲ್‌ಎಫ್‌) , ‘2017ರಲ್ಲಿ ನಡೆಸಿದ್ದ ಪರೀಕ್ಷೆಯ ವರದಿಯನ್ನು ಈಗ ಬಹಿರಂಗಪಡಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ’ ಎಂದು ಹೇಳಿತ್ತು.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಸಂಜಿತಾ ಅವರು ಚಿನ್ನ ಗೆದ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT